ಭೋಪಾಲ್ : ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಮತದಾನ ಮುಗಿದು ಹೋಗಿದೆ; ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಡಿ.11ರಂದು ನಡೆಯುವ ಮತ ಎಣಿಕೆಯ ದಿನದಂದು ಗೊತ್ತಾಗುತ್ತದೆ.
ಆದರೆ ಈ ಮಧ್ಯೆ ಸಿಎಂ ಅವರು ತಮ್ಮ ಇಲ್ಲಿನ ಅಧಿಕೃತ ನಿವಾಸದಿಂದ ಮಹಾರಾಷ್ಟ್ರಕ್ಕೆ ತಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುವ ವೆಚ್ಚದ ನಕಲಿ “ಪ್ಯಾಕರ್ಸ್ ಆ್ಯಂಡ್ ಮೂವರ್ ಬಿಲ್ ಕೊಟೇಶನ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಿಎಂ ಅವರು ತಮ್ಮ ಅಧಿಕಾರವನ್ನು ಕಳೆದುಕೊಂಡು ಮಹಾರಾಷ್ಟ್ರಕ್ಕೆ ಮರಳುವುದು ಖಚಿತವಿದೆ ಎಂಬುದನ್ನು ಸಾರುವುದೇ ಈ ನಕಲಿ ಬಿಲ್ ಕೊಟೇಶನ್ ಉದ್ದೇಶವಾಗಿದೆ ಎಂಬುದು ಸ್ಪಷ್ಟವಿದೆ. ಇದು ರಾಜಕೀಯದ ಆಟದಲ್ಲಿ ನಡೆದಿರುವ ಕುತಂತ್ರವೆಂದೇ ತಿಳಿಯಲಾಗಿದೆ.
Related Articles
15 ಲಕ್ಷ ರೂ. ವೆಚ್ಚ ತೋರಿಸುವ ಈ ಬಿಲ್ ಕೊಟೇಶನ್ ನಲ್ಲಿ ಶಿವರಾಜ್ ಸಿಂಗ್ ಅವರ ಪುತ್ರ ಕಾರ್ತಿಕೇಯ ಅವರ ಹೆಸರಿನ ಇ-ಮೇಲ್ ಐಡಿ ಇದೆ. ಸಿಎಂ ಅವರ ಸಾಮಾನು ಸರಂಜಾಮುಗಳನ್ನು ಒಯ್ಯಬೇಕಾದ ಸ್ಥಳವಾಗಿ ಸಿಎಂ ಅವರ ಭೋಪಾಲದಲ್ಲಿನ ಮನೆ ವಿಳಾಸವನ್ನು ಕಾಣಿಸಲಾಗಿದೆ.
ನಕಲಿ ಕೊಟೇಶನ್ ಪೇಪರ್‌ನಲ್ಲಿ ಲೋಗೋ ಸಹಿತವಾಗಿ ಕಾಣಿಸಲಾಗಿರುವ ಹೆಸರಿನ ಶಿಫ್ಟಿಂಗ್ ಕಂಪೆನಿಯು ಸೈಬರ್ ಸೆಲ್ ಯೂನಿಟ್‌ನಲ್ಲಿ ಎಫ್ಐಆರ್ ದಾಖಲಿಸಿರುವುದು ತಾಜಾ ವಿದ್ಯಮಾನವಾಗಿದೆ.
“ನಮ್ಮ ಕಂಪೆನಿಯ ಪ್ರತಿಷ್ಠೆಗೆ ಹಾನಿ ಮಾಡಲು ಯಾರೋ ಕೆಲವರು ಯತ್ನಿಸಿದ್ದಾರೆ. ಇಂತಹ ಕೊಟೇಶನ್ ಅನ್ನು ನಮ್ಮ ಕಂಪೆನಿ ಮಾಡಿಯೇ ಇಲ್ಲ. ಇದು ನಕಲಿ ಕೊಟೇಶನ್’ ಎಂದು ಅಗರ್‌ವಾಲ್ ಪ್ಯಾಕರ್ ಆ್ಯಂಡ್ ಮೂವರ್ ನ ರಾಹುಲ್ ಗುಪ್ತಾ ಅವರು ಸೈಬರ್ ಸೆಲ್‌ನಲ್ಲಿ ಈ ಫೋರ್ಜರಿ ಬಗ್ಗೆ ದೂರು ದಾಖಲಿಸಿದ್ದಾರೆ.
ಮೂರು ಬಾರಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಇದೀಗ ನಾಲ್ಕನೇ ಬಾರಿಗೆ ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದ್ದು ಡಿ.11ರಂದು ನಡೆಯುವ ಮತ ಎಣಿಕೆಯಲ್ಲಿ ಅದು ಗೊತ್ತಾಗಲಿದೆ.