ಚನ್ನಗಿರಿ: ಕಾಯಕದಲ್ಲಿ ನಂಬಿಕೆ ಇಟ್ಟು ಸಹಸ್ರಾರು ಕೆರೆ, ಕುಂಟೆಗಳನ್ನು ನಿರ್ಮಿಸಿ ಜನರಲ್ಲಿ ಜಲ ಹಾಗೂ ಪರಿಸರ ಪ್ರಜ್ಞೆ ಮೂಡಿಸುವ ಮೂಲಕ ರೈತರ ಶ್ರೇಯೋಭಿವೃದ್ಧಿ ಮತ್ತು ಸಮಾನತೆಯ ಸಮಾಜಕ್ಕಾಗಿ ದುಡಿದ ಶಿವಯೋಗಿ ಸಿದ್ಧರಾಮೇಶ್ವರರು ಶ್ರಮ ಸಂಸ್ಕೃತಿಯ ಹರಿಕಾರರೆಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ| ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಗರಗ ಗ್ರಾಮದಲ್ಲಿ ಮಂಗಳವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಕುಲದ ಉದ್ಧಾರದ ಬಗ್ಗೆ ಸದಾ ಚಿಂತನೆ ನಡೆಸಿ ಸಮಾಜದಲ್ಲಿನ ಶೋಷಿತ ಸಮುದಾಯಗಳ ಏಳ್ಗೆಗಾಗಿ ದುಡಿದ ಸಿದ್ದರಾಮೇಶ್ವರರ ತತ್ವ, ಆದರ್ಶಗಳು ಪ್ರಸ್ತುತ ಸಮಾಜಕ್ಕೆ ತೀರಾ ಅಗತ್ಯ. 68 ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಸ್ಪೃಶ್ಯತೆ ತೊಡೆದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರಲ್ಲಿ ಸಿದ್ದರಾಮೇಶ್ವರರು ಒಬ್ಬರು ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ತೇರ್ಗಡೆಯಾದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಚ್.ಎಸ್. ಮಲ್ಲಿಕಾರ್ಜುನ್, ರವಿ, ಎಂ.ಬಿ. ನಾಗರಾಜ್, ಜಿ.ಎಂ. ಕುಮಾರಪ್ಪ, ನಾಗೇಂದ್ರಪ್ಪ, ಗರಗ ಮಹೇಶ್ವರಪ್ಪ ಮತ್ತಿತರರಿದ್ದರು.
ತಾಲೂಕು ಆಡಳಿತದಿಂದ ಆಚರಣೆ: ಬಸವಾದಿ ಶರಣರ ಸಮಕಾಲೀನವರಾದ ಶಿವಯೋಗಿ ಸಿದ್ಧರಾಮೇಶ್ವರರು ಸಾಮಾಜಿಕ ಹರಿಕಾರರಾಗಿದ್ದು, ಅವರು ಜನಹಿತಕ್ಕಾಗಿ ನೀಡಿದ ವಚನ ಸಾಹಿತ್ಯ ಬದುಕಿನ ಮಾರ್ಗವನ್ನು ಅನುಸರಿಸುತ್ತದೆ ಎಂದು ತಹಶೀಲ್ದಾರ್ ನಾಗರಾಜ್ ಹೇಳಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ಧರಾಮೇಶ್ವರರು ಅಂದು ಕೆರೆಗಳನ್ನು ಕಟ್ಟುವ ಜೊತೆಗೆ ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಮೇರುಪರ್ವತಕ್ಕೇರಿ ಶ್ರಮಿಕ ವರ್ಗದ ನಾಯಕರಾಗಿದ್ದರು. ಅವರು ಭೊವಿ ವಡ್ಡರ ಸಮಾಜಕ್ಕೆ ಸೀಮಿತವಾಗಿರದೆ ಎಲ್ಲ ವರ್ಗದ ಆರಾಧ್ಯ ದೈವರಾಗಿದ್ದಾರೆ ಎಂದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಡಿ. ನಾಗರಾಜ್ ಮಾತನಾಡಿದರು. ಗರಗ ರಾಜಪ್ಪ ಸೇರಿದಂತೆ ಇತರರು ಇದ್ದರು.