Advertisement
ಮಹಾಶಿವರಾತ್ರಿ ಅಂಗವಾಗಿ ಸೋಮವಾರ ನಗರಾದ್ಯಂತ ಎಲ್ಲೆಡೆ ಸಡಗರ ಸಂಭ್ರಮ ಎಲ್ಲಾ ದೇವಾಲಯಗಳಲ್ಲೂ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿದ್ದರಿಂದ ಸಾವಿರಾರು ಭಕ್ತರು ದೇವಾಲಯಗಳಿಗೆ ತೆರಳಿ ಸಾಮೂಹಿಕ ಅಭಿಷೇಕ ಅರ್ಚನೆಗಳಲ್ಲಿ ಭಾಗವಹಿಸುತ್ತಿದ್ದರು.
Related Articles
Advertisement
ನಗರದ ಕುಣಿಗಲ್ ರಸ್ತೆಯ ಬನಶಂಕರಿಯಲ್ಲಿನ ಮಳೆ ಬಸವಣ್ಣ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪಂಚಲಿಂಗ ದರ್ಶನ, ಬಸವನ ಮೇಲೆ ಕುಳಿತ ಶಿವ ಹಾಗೂ ದೇವಾಲಯದ ಆವರಣದಲ್ಲಿರುವ ಬೃಹತ್ ಶಿವನ ಪ್ರತಿಮೆಗೆ ವಿಶೇಷ ಅಲಂಕಾರ ಹಾಗೂ ಪೂಜೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ದೇವಾಲಯಕ್ಕೆ ತೆರಳಿ ಶಿವನ ದರ್ಶನ ಪಡೆದರು.
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅರೆಯೂರು ವೈದ್ಯನಾಥೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವೈದ್ಯನಾಥೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ರಥೋತ್ಸವ ವೈಭವಯುತವಾಗಿ ನಡೆಯಿತು. ತಾಲೂಕಿನ ಹಾಲನೂರಿನಲ್ಲಿರುವ ಮಲ್ಲಿಕಾರ್ಜುನಸ್ವಾಮಿಯ ಉತ್ಸವವು ವೈಭವಯುತವಾಗಿ ನಡೆಯಿತು. ನಂಜುಂಡ ಶಿವಯೋಗಿಗಗಳ ಗದ್ದುಗೆಯ ಬಳಿ ಆಗಮಿಸಿ ಅಲ್ಲಿ ಸ್ವಾಮಿ ಗದ್ದುಗೆ ಮೇಲೆ ಸ್ಥಾಪಿಸಿ ಶಿವಲಿಂಗಕ್ಕೆ ಹಾಗೂ ಗಣಪತಿ ಮತ್ತು ನವಗ್ರಹಗಳಿಗೆ ರುದ್ರಾಭಿಷೇಕ, ಸಹಸ್ರನಾಮ ಪೂಜೆ, ಮಹಾಮಂಗಳಾರತಿ ಜರುಗಿತು.
ನಗರದ ಜಯಪುರ ಬಡಾವಣೆಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಲಕ್ಷ್ಮೀದೇವಿ ದೇವಾಲಯದಲ್ಲಿ ಗಂಗಾಧರೇಶ್ವರಸ್ವಾಮಿ ಉತ್ಸವ ಮೆರವಣಿಗೆ ಮೂಲಕ ನಡೆಯಿತು. ನಗರದ ಸಿದ್ದರಾಮೇಶ್ವರ ಬಡಾವಣೆ ಶಿವಸುಬ್ರಮಣ್ಯ ಗಣಪತಿ ದೇವಾಲಯದಲ್ಲಿ ಕೈಲಾಸ ಪರ್ವತದ ಪ್ರತಿರೂಪ ಹಾಗೂ 12 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದ್ದು, ಭಕ್ತರು ದೇವರ ದರ್ಶನ ಪಡೆದರು.
ಉಪ್ಪಾರಹಳ್ಳಿಯ ಶಿವಲಿಂಗ ರಸ್ತೆಯಲ್ಲಿರುವ ಮಹಾಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕುಂಭಾಭಿಷೇಕ ಮತ್ತು ಕ್ಷೀರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ಇದಲ್ಲದೆ ಜಿಲ್ಲಾದ್ಯಂತ ಎಲ್ಲಾ ಶಿವ ದೇವಾಲಯಗಳಲ್ಲೂ ವಿಶೇಷ ಪೂಜೆ ಪ್ರಾರ್ಥನೆಗಳು ನಡೆದವು. ಸಿದ್ಧಗಂಗಾ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕ್ಷೇತ್ರನಾಥ ಸಿದ್ಧಲಿಂಗೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ ಉತ್ಸವಗಳು ಜರುಗಿದವು.
ಬಿಲ್ವಪತ್ರೆ ಎಳನೀರು ಅಭಿಷೇಕ: ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಾಗಿದ್ದು, ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಬಿಲ್ವಾರ್ಚನೆ ಮಾಡಿ ಎಳನೀರ ಹಾಲಾಭಿಷೇಕ ಮಾಡಿದರೆ ಪುಣ್ಯಪ್ರಾಪ್ತಿ ದೊರೆಯುತ್ತದೆ ಎನ್ನುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲೂ ಅಪಾರ ಸಂಖ್ಯೆಯ ಭಕ್ತರು ಸರದಿಯಲ್ಲಿ ನಿಂತು ಶಿವನಿಗೆ ಬಿಲ್ವಾರ್ಚನೆ ಹಾಗೂ ಸಾಮೂಹಿಕ ಅಭಿಷೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿವನ ದರ್ಶನ ಪಡೆದರು.
ಯಡಿಯೂರಿನ ಪ್ರಸಿದ್ಧ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕಗಳು ನಡೆದವು. ಮಧುಗಿರಿಯ ಪ್ರಸಿದ್ಧ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ ಹಾಗೂ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಚಿ.ನಾ.ಹಳ್ಳಿ ತಾಲೂಕಿನ ವಜ್ರದ ರಾಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಜಿಲ್ಲಾದ್ಯಂತ ಬರ ಹಾಗೂ ಬಿಸಿಲಿನ ನಡುವೆಯೂ ಮಹಾಶಿವರಾತ್ರಿ ಸಡಗರ ಸಂಭ್ರಮದಿಂದಲೇ ಆಚರಣೆ ಮಾಡಲಾಯಿತು.