ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರಗಳಲ್ಲೊಂದಾದ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶಿವರಾತ್ರಿ ಪಂಚಾಕ್ಷರಿ ಪಠಣಕ್ಕೆ ಚಾಲನೆ ದೊರೆಯಿತು.
ಶಿವರಾತ್ರಿ ಪ್ರಯುಕ್ತ ನಾಡಿನೆಲ್ಲೆಡೆಯಿಂದ ಗುರುವಾರ ಸಹಸ್ರಾರು ಮಂದಿ ಭಕ್ತರು ಬಂದು ದೇವರ ದರ್ಶನ ಪಡೆದರು. ಗುರುವಾರ 35,000 ಕ್ಕೂ ಅಧಿಕ ಮಂದಿ ಭಕ್ತರು ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷವಾಗಿ ಅಭಿಷೇಕ ಸೇರಿದಂತೆ ಸರ್ವ ವಿಧ ಸೇವೆ ಸಲ್ಲಿಸಿದರು.
ಸುಮಾರು 30,000 ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಆಗಮಿಸಿದ್ದಾರೆ. ಶಿವಪಂಚಾಕ್ಷರಿ ಪಠಣ ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯಿತು. ಶಂಖ, ಜಾಗಟೆ, ಕೊಂಬು, ಕಹಳೆ, ವೀರಗಾಸೆ, ಕರಗ, ಡೊಳ್ಳು ಕುಣಿತ ಮೊದಲಾದ ಜಾನಪದ ಕಲಾವಿದರು ರಾತ್ರಿ ಇಡಿ ನಾದಪ್ರಿಯ ಶಿವನಿಗೆ ಕಲಾಸೇವೆ ನೀಡಿದರು. ದೇವಸ್ಥಾನದ ಮುಂಭಾಗ ಭಕ್ತರು ರಚಿಸಿದ ಶಿವಲಿಂಗಾಕೃತಿಯ ಪುಷ್ಪಾಲಂಕಾರ ಆಕರ್ಷಣೀಯವಾಗಿತ್ತು.