ಹನೂರು (ಚಾಮರಾಜನಗರ): ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಮಹಾರಥೋತ್ಸವ ಭಾನುವಾರ ಬೆಳಿಗ್ಗೆ 10:30ರ ಮುಹೂರ್ತದಲ್ಲಿ ಜರುಗಿತು.
ಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ನೂರಾರು ಸ್ಥಳೀಯ ಭಕ್ತಾದಿಗಳ ಸಮ್ಮುಖದಲ್ಲಿ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ವಿಧಿವಿಧಾನಗಳೊಂದಿಗೆ ಜರುಗಿತು. ಪ್ರತಿವರ್ಷ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗುತ್ತಿದ್ದ ಮಹಾರಥೋತ್ಸವವು ಕೋವಿಡ್-19 ನಿಯಮಾವಳಿ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.
ರಥೋತ್ಸವ ಸಂದರ್ಭದಲ್ಲಿ ಭಕ್ತಾದಿಗಳು ಉಘೇ ಉಘೇ ಮಾದಪ್ಪ ಎಂಬ ಘೋಷ ಮೊಳಗಿಸಿದರು.
ಉತ್ಸವಮೂರ್ತಿ ಮೆರವಣಿಗೆ: ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೀಯ ರಥೋತ್ಸವಕ್ಕೂ ಮುನ್ನ ಬೇಡಗಂಪಣ ಅರ್ಚಕರಿಂದ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಅರ್ಚಕರ ತಂಡ ಉತ್ಸವ ಮೂರ್ತಿಯನ್ನು ಸಿದ್ಧಗೊಳಿಸಿ ಬಿಳಿ ಆನೆ ವಾಹನದ ಮೇಲಿಟ್ಟು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳನ್ನು ಮಂಗಳವಾದ್ಯ ಸಮೇತ ದೇವಾಲಯಕ್ಕೆ ಕರೆತರಲಾಯಿತು. ಬಳಿಕ ಉತ್ಸವಮೂರ್ತಿಯನ್ನು ಸತ್ತಿಗೆ -ಸುರಪಾನಿ, ಜಾಗಟೆ, ಮಂಗಳವಾದ್ಯ ಸಮೇತ ದೇವಾಲಯದ ಹೊರಾಂಗಣದಲ್ಲಿ ವಿವಿಧ ಬಗೆಯ ಪುಷ್ಪ, ತಳಿರು-ತೋರಣ, ಬಣ್ಣ-ಬಣ್ಣದ ಬಟ್ಟೆಗಳಿಂದ ಅಲಂಕೃತಗೊಳಿಸಿ ಸಿದ್ಧಗೊಳಿಸಲಾಗಿದ್ದ ಮಹಾರಥೋತ್ಸವದ ಬಳಿಗೆ ತಂದು ರಥೋತ್ಸವದಲ್ಲಿ ಇಡಲಾಯಿತು.
ರಥೋತ್ಸವಕ್ಕೆ ಚಾಲನೆ: ಬೂದುಗುಂಬಳ ಕಾಯಿಯಿಂದ ಆರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಹಸಿರು ಸೀರೆ ಮತ್ತು ಕುಪ್ಪಸ ಧರಿಸಿದ್ದ ಬೇಡಗಂಪಣ ಹೆಣ್ಣುಮಕ್ಕಳು ಬೆಲ್ಲದ ಆರತಿ ಬೆಳಗುವ ಮೂಲಕ ರಥೋತ್ಸವಕ್ಕೆ ಮೆರುಗು ತಂದರು. ಇದೇ ವೇಳೆ ಮಂಗಳ ವಾದ್ಯ, ವೀರಗಾಸೆ ಕುಣಿತ ತಂಡಗಳು ರಥೋತ್ಸವಕ್ಕೆ ರಂಗುತಂದವು, ರಥೋತ್ಸವ ಪ್ರಾರಂಭವಾಗುತ್ತಿದ್ದಂತೆ ಭಕ್ತಾದಿಗಳು ಉಘೇ ಮಾದಪ್ಪ, ಉಘೇ ಮಾದಪ್ಪ ಎಂಬ ಘೋಷವಾಕ್ಯದೊಂದಿಗೆ ಮಾದಪ್ಪನನ್ನು ನೆನೆದರು. ರಥೋತ್ಸವದ ವೇಳೆ ಹರಕೆ ಹೊತ್ತ ಭಕ್ತಾದಿಗಳು ತಮ್ಮ ಜಮೀನಿನಲ್ಲಿ ಬೆಳೆದಿದ್ದ ದವಸ-ಧಾನ್ಯ, ಚಿಲ್ಲರೆಹಣ, ಎಳ್ಳು, ಹೂ-ಹಣ್ಣು, ಜವನವನ್ನು ಎಸೆದು ಭಕ್ತಿ ಸಮರ್ಪಿಸಿದರು. ಈ ಮೂಲಕ ಬೆಳಿಗ್ಗೆ 10:30ರ ವೇಳೆಗೆ ಪ್ರಾರಂಭಗೊಂಡ ರಥೋತ್ಸವ ದೇವಾಲಯದ ಸುತ್ತಲೂ ಒಂದು ಪ್ರದಕ್ಷಿಣೆ ಹಾಕುವ ಮೂಲಕ ಸಂಪನ್ನವಾಯಿತು.
ಹೆಚ್ಚಾಗಿ ಕಾಣಸಿಗದ ನವದಂಪತಿಗಳು: ಪ್ರತಿಬಾರಿಯೂ ಮಲೆ ಮಾದಪ್ಪನ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವಕ್ಕೆ ಹಣ್ಣು-ಜವನ ಸಮರ್ಪಿಸಿ ತಮ್ಮ ವೈವಾಹಿಕ ಜೀವನ ಸುಖಕರವಾಗಿರಲೆಂದು ಪ್ರಾರ್ಥಿಸಲು ಪ್ರಸಕ್ತ ಸಾಲಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂರಾರು ದಂಪತಿಗಳು ಆಗಮಿಸುತ್ತಿದ್ದರು. ಆದರೆ ಈ ಬಾರಿ ಸ್ಥಳೀಯ ಭಕ್ತಾದಿಗಳನ್ನು ಹೊರತುಪಡಿಸಿ ಜಿಲ್ಲಾ, ಅಂತರಜಿಲ್ಲಾ ಮತ್ತು ಅಂತರರಾಜ್ಯ ಭಕ್ತಾದಿಗಳಿಗೆ ನಿಷೇಧವೇರಿದ್ದ ಹಿನ್ನೆಲೆ ನವದಂಪತಿಗಳ ಸಂಖ್ಯೆ ವಿರಳವಾಗಿತ್ತು.
ನಾಳೆಯಿಂದ ಎಂದಿನಂತೆ ಭಕ್ತಾದಿಗಳಿಗೆ ಅವಕಾಶ: ಮಹಾಶಿವರಾತ್ರಿ ಮಹೋತ್ಸವ ಹಿನ್ನೆಲೆ ಕೋವಿಡ್-19 ನಿಯಮಾವಳಿ ಪಾಲನೆ ಹಿನ್ನೆಲೆ ಮಾರ್ಚ್ 10 ರಿಂದ 14ರವರೆಗೆ 5 ದಿನಗಳ ಕಾಲ ಭಕ್ತಾದಿಗಳ ಶ್ರೀ ಕ್ಷೇತ್ರ ಭೇಟಿ ಮತ್ತು ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಶಿವರಾತ್ರಿ ಜಾತ್ರೆ ಸಂಪನ್ನವಾಗಿರುವ ಹಿನ್ನೆಲೆ ಸೋಮವಾರದಿಂದ ಭಕ್ತಾದಿಗಳ ದರ್ಶನಕ್ಕೆ ಯಥಾಸ್ಥಿತಿಯಂತೆ ಅವಕಾಶ ಕಲ್ಪಿಸಲಾಗಿದೆ.