Advertisement

ಶಿವರಾತ್ರಿ ಉಪಾಹಾರ

08:54 AM Feb 20, 2020 | mahesh |

ಶಿವರಾತ್ರಿಯಂದು ದಿನವಿಡೀ ಉಪವಾಸವಿದ್ದು, ಪೂಜೆ ಮಾಡುವವರು ಹಲವರಾದರೆ, ಲಘು ಉಪಾಹಾರ ಸೇವಿಸಿ, ದೇವರನ್ನು ಆರಾಧಿಸುವವರು ಕೆಲವರು. ಎರಡನೇ ವರ್ಗಕ್ಕೆ ಸೇರುವವರು ನೀವಾಗಿದ್ದರೆ, ಶಿವರಾತ್ರಿ ಹಬ್ಬಕ್ಕೆ ಮಾಡಬಹುದಾದ ಸುಲಭದ ಉಪಾಹಾರಗಳ ರೆಸಿಪಿ ಇಲ್ಲಿದೆ…

Advertisement

1. ಸ್ವೀಟ್‌ ಕಾರ್ನ್- ಹಣ್ಣು-ತರಕಾರಿ ಕೋಸಂಬರಿ
ಬೇಕಾಗುವ ಸಾಮಗ್ರಿ: ಸ್ವೀಟ್‌ ಕಾರ್ನ್-1 ಕಪ್‌, ದಾಳಿಂಬೆ ಬೀಜ-1 ಕಪ್‌, ಸೌತೆಕಾಯಿ ಹೋಳು-1/2 ಕಪ್‌, ಸೀಬೆಕಾಯಿ ಹೋಳು-1/4 ಕಪ್‌, ತೆಂಗಿನ ತುರಿ-4 ಚಮಚ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಸಳು, ಉಪ್ಪು-ರುಚಿಗೆ, ಹಸಿಮೆಣಸಿನಕಾಯಿ-5 , ಎಣ್ಣೆ-4 ಚಮಚ, ಸಾಸಿವೆ, ಇಂಗು.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗು-ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಮಾಡಿ. ಸ್ವೀಟ್‌ ಕಾರ್ನ್, ಸೌತೆಕಾಯಿ, ಸೀಬೇಕಾಯಿ ಹಾಗೂ ದಾಳಿಂಬೆ ಬೀಜಗಳ ಮಿಶ್ರಣಕ್ಕೆ, ಒಗ್ಗರಣೆ, ಉಪ್ಪು ಸೇರಿಸಿ, ಮಿಶ್ರಣ ಮಾಡಿ. ನಂತರ, ತೆಂಗಿನ ತುರಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

2. ಸಿಹಿಗೆಣಸಿನ ಪಾಯಸ
ಬೇಕಾಗುವ ಸಾಮಗ್ರಿ: ಸಿಹಿಗೆಣಸು-1, ಹಾಲು-3 ಕಪ್‌, ತೆಂಗಿನ ತುರಿ-1/2 ಕಪ್‌, ಏಲಕ್ಕಿ ಪುಡಿ-1/2 ಚಮಚ, ಲವಂಗದ ಪುಡಿ, ಸಕ್ಕರೆ-1 ಕಪ್‌, ಹಾಲಿನಲ್ಲಿ ಕರಗಿಸಿದ ಕೇಸರಿ ಬಣ್ಣ-1/4 ಚಮಚ, ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿ.

ಮಾಡುವ ವಿಧಾನ: ಗೆಣಸನ್ನು ಕುಕ್ಕರ್‌ನಲ್ಲಿ ಬೇಯಿಸಿ, ಸಿಪ್ಪೆ ತೆಗೆದು, ಮಸೆದಿಡಿ. ಅದಕ್ಕೆ ಸಕ್ಕರೆ, ಹಾಲು, ತೆಂಗಿನತುರಿ, ಏಲಕ್ಕಿಪುಡಿ, ಲವಂಗದ ಪುಡಿ ಹಾಕಿ ಕುದಿಸಿ.
ಒಲೆಯಿಂದ ಕೆಳಗಿರಿಸಿ, ಕರಗಿಸಿದ ಕೇಸರಿ ಬಣ್ಣ, ಗೋಡಂಬಿ, ದ್ರಾಕ್ಷಿ ಹಾಕಿದರೆ ಪಾಯಸ ರೆಡಿ.

Advertisement

3. ಸಬ್ಬಕ್ಕಿ ಸಜ್ಜಿಗೆ
ಬೇಕಾಗುವ ಸಾಮಗ್ರಿ: ಸಬ್ಬಕ್ಕಿ-2 ಕಪ್‌, ಸಕ್ಕರೆ-1 ಕಪ್‌, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ, ಲವಂಗದ ಪುಡಿ, ಕೇಸರಿ ಬಣ್ಣ, ತುಪ್ಪ-4 ಚಮಚ, ಹಾಲು-1 ಕಪ್‌, ಪಚ್ಚ ಕರ್ಪೂರ-1/4 ಚಮಚ.

ಮಾಡುವ ವಿಧಾನ: ಸಬ್ಬಕ್ಕಿಯನ್ನು ತರಿತರಿಯಾಗಿ ಪುಡಿ ಮಾಡಿ, ತುಪ್ಪದಲ್ಲಿ ಹುರಿಯಿರಿ. ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದು, ಕೇಸರಿ ಬಣ್ಣವನ್ನು ಹಾಲಿನಲ್ಲಿ ಕಲಸಿಡಿ. ಬಾಣಲೆಯಲ್ಲಿ 1/2 ಕಪ್‌ ನೀರು ಹಾಗೂ ಹಾಲು ಬೆರೆಸಿ ಕುದಿಯಲು ಇಡಿ. ಕುದಿ ಬಂದಾಗ, ಸಬ್ಬಕ್ಕಿ ತರಿ, ಸಕ್ಕರೆ, ಕೇಸರಿ ಬಣ್ಣ, ಲವಂಗದ ಪುಡಿ, ತುಪ್ಪ, ಪಚ್ಚ ಕರ್ಪೂರ, ಏಲಕ್ಕಿ ಪುಡಿ ಹಾಕಿ ಚನ್ನಾಗಿ ಕಲಕಿ.

4. ಸಾಮೆ ಅಕ್ಕಿ-ತೆಂಗಿನತುರಿ ಬಾತ್‌
ಬೇಕಾಗುವ ಸಾಮಗ್ರಿ: ಸಾಮೆ ಅಕ್ಕಿ-2 ಕಪ್‌, ತೆಂಗಿನ ತುರಿ-1 ಕಪ್‌, ಲಿಂಬೆರಸ-1 ಚಮಚ‌, ಉಪ್ಪು-ರುಚಿಗೆ, ಸಕ್ಕರೆ-1/2 ಚಮಚ, ತುಪ್ಪದಲ್ಲಿ ಹುರಿದ ಗೋಡಂಬಿ. ಒಗ್ಗರಣೆಗೆ: ತುಪ್ಪ-4 ಚಮಚ, ಸಾಸಿವೆ, ಇಂಗು, ಕಡಲೇಬೇಳೆ, ಉದ್ದಿನಬೇಳೆ, ಒಣಮೆಣಸು, ಕರಿಬೇವಿನ ಎಸಳು.

ಮಾಡುವ ವಿಧಾನ: ಸಾಮೆ ಅಕ್ಕಿಯನ್ನು ಉದುರುದುರಾಗಿ ಬೇಯಿಸಿ, ಅನ್ನ ಮಾಡಿ. ಬಾಣಲೆಯಲ್ಲಿ ತುಪ್ಪ ಕಾಯಿಸಿ, ಸಾಸಿವೆ-ಇಂಗು-ಕಡಲೇಬೇಳೆ-ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ. ಅದಕ್ಕೆ, ಒಣಮೆಣಸಿನಕಾಯಿ, ತೆಂಗಿನ ತುರಿ, ಕರಿಬೇವಿನ ಎಸಳು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ, ಬೇಯಿಸಿದ ಸಾಮೆ ಅನ್ನ, ಲಿಂಬೆರಸ, ಉಪ್ಪು, ಸಕ್ಕರೆ ಹಾಕಿ ಮಗುಚಿ, ಒಲೆಯಿಂದ ಕೆಳಗಿರಿಸಿ, ಗೋಡಂಬಿಯಿಂದ ಅಲಂಕರಿಸಿ.

5. ಆಲೂಗಡ್ಡೆ ಕಿಚಡಿ
ಬೇಕಾಗುವ ಸಾಮಗ್ರಿ: ಆಲೂಗಡ್ಡೆ ತುರಿ-2 ಕಪ್‌, ಕತ್ತರಿಸಿದ ಹಸಿಮೆಣಸು-5, ತೆಂಗಿನತುರಿ-1/2 ಕಪ್‌, ಜೀರಿಗೆಪುಡಿ-1 ಚಮಚ, ಶೇಂಗಾ ಬೀಜದ ಪುಡಿ-3 ಚಮಚ , ಕರಿಬೇವಿನಸೊಪ್ಪು, ಕೊತ್ತಂಬರಿಸೊಪ್ಪು, ಉಪ್ಪು, ಸಕ್ಕರೆ-1/2 ಚಮಚ, ಲಿಂಬೆರಸ, ತುಪ್ಪ-3 ಚಮಚ.

ಮಾಡುವ ವಿಧಾನ: ಆಲೂಗಡ್ಡೆ ತುರಿಯನ್ನು ನೀರಿನಲ್ಲಿ ನೆನೆಸಿಡಿ. ಬಾಣಲೆಯಲ್ಲಿ, ತುಪ್ಪ ಕಾಯಿಸಿ, ಜೀರಿಗೆ ಹಾಕಿ ಒಗ್ಗರಣೆ ಮಾಡಿ, ಅದಕ್ಕೆ ಹಸಿಮೆಣಸು, ಕರಿಬೇವಿನಸೊಪ್ಪು ಹಾಕಿ ಬಾಡಿಸಿ. ಆಲೂಗಡ್ಡೆ ತುರಿಯನ್ನು ಹಿಂಡಿ, ಒಗ್ಗರಣೆಗೆ ಸೇರಿಸಿ ಕಲಕಿ. ನಂತರ, ಉಪ್ಪು, ಶೇಂಗಾ ಪುಡಿ, ಸಕ್ಕರೆ, ಲಿಂಬೆರಸ ಬೆರೆಸಿ ಕಲಕಿ, ಒಲೆಯಿಂದ ಕೆಳಗಿರಿಸಿ. ತೆಂಗಿನ ತುರಿ, ಕೊತ್ತಂಬರಿಸೊಪ್ಪು ಬೆರೆಸಿದರೆ ಕಿಚಡಿ ಸಿದ್ಧ.

-ಜಯಶ್ರೀ ಕಾಲ್ಕುಂದ್ರಿ

Advertisement

Udayavani is now on Telegram. Click here to join our channel and stay updated with the latest news.

Next