Advertisement

ಶಿವರಾಜಕುಮಾರ್‌ ‘ಬೈರಾಗಿ’ರೋಡ್‌ ಶೋ

12:49 PM Jun 19, 2022 | Team Udayavani |

ಶಿವಣ್ಣ ನಟನೆಯ “ಬೈರಾಗಿ’ ಚಿತ್ರ ಜುಲೈ 01 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು “ಬೈರಾಗಿ’ ರೋಡ್‌ ಶೋ ನಡೆಯಲಿದೆ. ಹೌದು, ಸಿನಿಮಾದ ಪ್ರಚಾರಾರ್ಥ ಚಿತ್ರತಂಡ ಬೇರೆ ಬೇರೆ ಊರುಗಳಿಗೆ ತೆರಳಲಿದೆ.

Advertisement

ಜೂನ್‌ 24ರಂದು ಬೆಂಗಳೂರಿನಿಂದ ಶುರುವಾಗುವ ರೋಡ್‌ ಶೋ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು ತಲುಪಲಿದೆ. ನಂಜನಗೂಡು ಮಾರ್ಗವಾಗಿ ಚಾಮರಾಜನಗರ ತಲುಪಲಿದ್ದು, ಜೂನ್‌ 25ರಂದು ಕಾರ್ಯಕ್ರಮ ನಡೆಯಲಿದೆ.

ಚಾಮರಾಜನಗರದಲ್ಲಿ “ಬೈರಾಗಿ’ ಚಿತ್ರದ ಅದ್ಧೂರಿ ಪ್ರೀ ರಿಲೀಸ್‌ ಇವೆಂಟ್‌ ಆಯೋಜಿಸಲಾಗಿದೆ. ಶಿವರಾಜ್‌ಕುಮಾರ್‌ ನಟನೆಯ 123ನೇ ಚಿತ್ರ “ಬೈರಾಗಿ’ಯಾಗಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರವನ್ನು ವಿಜಯ್‌ ಮಿಲ್ಟನ್‌ ನಿರ್ದೇಶಿಸಿದ್ದು, ಕೃಷ್ಣ ಸಾರ್ಥಕ್‌ ನಿರ್ಮಿಸಿದ್ದಾರೆ. ಈಗಾಗಲೇ ಒಟಿಟಿ, ಸ್ಯಾಟಲೈಟ್‌ ಹಕ್ಕುಗಳು ಸೇಲ್‌ ಆಗಿದ್ದು ಬಿಡುಗಡೆಗೂ ಮುಂಚೆಯೇ “ಬೈರಾಗಿ’ ಹತ್ತು ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿಕೊಂಡಿದೆ. ಈ ವಿಚಾರವನ್ನು ಸ್ವತಃ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ.

“ಬೈರಾಗಿ’ ಚಿತ್ರ ಆ್ಯಕ್ಷನ್‌ ಜೊತೆಗೆ ಎಮೋಶನ್‌ ಮೇಲೆ ಸಾಗುವ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎನ್ನುವುದು ಶಿವಣ್ಣ ಮಾತು. ಚಿತ್ರದ ಬಗ್ಗೆ ಮಾತನಾಡುವ ಶಿವಣ್ಣ, “ಚಿತ್ರದಲ್ಲಿ ಎಮೋಶನ್ಸ್‌ಗೆ ಹೆಚ್ಚಿನ ಮಹತ್ವವಿದೆ. ಮೈಮೇಲೆ ಆಗಿರುವ ಗಾಯ ವಾಸಿಯಾದರೂ ಮನಸ್ಸಿಗೆ ಆಗಿರುವ ಗಾಯ ಮಾಸುವುದಿಲ್ಲ ಎಂಬ ಅಂಶದ ಜೊತೆಗೆ ಇನ್ನೂ ಹಲವು ವಿಚಾರಗಳನ್ನು ಸಿನಿಮಾ ಒಳಗೊಂಡಿದೆ’ ಎನ್ನುತ್ತಾರೆ ಶಿವಣ್ಣ.

ಇನ್ನು, ಈಗಾಗಲೇ ಚಿತ್ರದ “ರಿದಮ್‌ ಆಫ್ ಶಿವಪ್ಪ’ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಈ ಹಾಡನ್ನು ಶಿವರಾಜ್‌ಕುಮಾರ್‌ ಹಾಗೂ ಶರಣ್‌ ಜೊತೆಯಾಗಿ ಹಾಡಿದ್ದಾರೆ. ಆರಂಭದಲ್ಲಿ ಈ ಹಾಡನ್ನು ಶಿವಣ್ಣ-ಪುನೀತ್‌ ರಾಜ್‌ಕುಮಾರ್‌ ಜೊತೆಯಾಗಿ ಹಾಡಲು ನಿರ್ಧರಿಸಿದ್ದರಂತೆ. ಪುನೀತ್‌ ಅವರು ಕೂಡಾ ಈ ಹಾಡಲು ಒಪ್ಪಿದ್ದರು. ಇತ್ತೀಚೆಗಷ್ಟೇ ಈ ವಿಚಾರವನ್ನು ಶಿವಣ್ಣ ಹೇಳಿಕೊಂಡಿದ್ದಾರೆ. “ವಜ್ರಕಾಯ’ ಬಳಿಕ ಶಿವಣ್ಣನ ಸಿನಿಮಾಕ್ಕೆ ಶರಣ್‌ ದನಿಗೂಡಿಸಿದ ಹಾಡು ಮಾಸ್‌ಪ್ರಿಯರನ್ನು ಸೆಳೆಯುತ್ತಿದೆ.

Advertisement

ಪ್ರಮೋದ್‌ ಮರವಂತೆ ಸಾಹಿತ್ಯವಿರುವ “ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ…’ ಎಂಬ ಹಾಡು ಸಿಂಗಲ್‌ ಶಾಟ್‌ನಲ್ಲಿ ಶೂಟ್‌ ಮಾಡಿರುವುದು ಮತ್ತೂಂದು ವಿಶೇಷ. ಹಾಡು ಮಾಸ್‌ ಪ್ರಿಯರನ್ನು ಹೆಚ್ಚೆಚ್ಚು ಸೆಳೆಯುತ್ತಿದೆ.

“ರಿದಮ್‌ ಆಫ್ ಶಿವಪ್ಪ’ ಕಾನ್ಸೆಪ್ಟ್’ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ “ಬೈರಾಗಿ’ ತಂಡ ಹೆಜ್ಜೆ ಹಾಕಿದ್ದು, ದೇವನಹಳ್ಳಿ ಬಳಿಯಿರುವ ನೂತನ ಮಾಲ್ ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮುರಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ “ನಖರನಖ’ ಹಾಡಿಗೆ ಆ್ಯಂಥೋನಿ ದಾಸ್‌ ದನಿಗೂಡಿಸಿದ್ದರು. ಇದೀಗ “ಸಂಡೆ-ಮಂಡೆ’ ಹಾಡು ಶಿವಣ್ಣ-ಶರಣ್‌ದನಿಯಲ್ಲಿ ಮೂಡಿಬಂದಿದ್ದು ಜೆ.ಪಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್ ನಲ್ಲಿ ರಿಲೀಸ್‌ ಆಗಿದೆ. ಹಿರಿಯ ನಟ ಶಶಿಕುಮಾರ್‌, ಅನು ಪ್ರಭಾಕರ್‌, ಅಂಜಲಿ, ಯಶ ಶಿವಕುಮಾರ್‌, ಚಿಕ್ಕಣ್ಣ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next