Advertisement

ಅಭಿಮಾನಿಗಳ ಬೇಸರಕ್ಕೆ ಶಿವರಾಜಕುಮಾರ್ ಸ್ಪಷ್ಟನೆ

11:09 AM Mar 07, 2018 | |

“ಟಗರು’ ನೋಡಿದ ಶಿವರಾಜಕುಮಾರ್ ಅವರ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಎಷ್ಟೇ ಖುಷಿಯಾದರೂ, ಒಂದೆರೆಡು ದೃಶ್ಯಗಳಲ್ಲಿ ಶಿವರಾಜಕುಮಾರ್ ಅವರ ಪಾತ್ರಕ್ಕೆ ವಿಲನ್ ಪಾತ್ರಗಳು ಬೈಯುವುದರ ಬಗ್ಗೆ ಸಾಕಷ್ಟು ಬೇಸರವಾಗಿತ್ತು. ಕೆಲವರು ಪತ್ರಿಕಾಗೋಷ್ಠಿ ಮಾಡಿ, ಕೂಡಲೇ ಆ ಪದಗಳನ್ನು ತೆಗೆದು ಹಾಕಬೇಕೆಂದು ಒತ್ತಾಯ ಮಾಡಿದರೆ, ಇನ್ನೂ ಕೆಲವರು ನೇರವಾಗಿ ಶಿವರಾಜಕುಮಾರ್ ಅವರ ಬಳಿ ಹೋಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದೂ ಉಂಟು.

Advertisement

ಎಲ್ಲಾ ಸರಿ, ಈ ಬಗ್ಗೆ ಶಿವರಾಜಕುಮಾರ್ ಅವರು ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈ ಕುತೂಹಲಕ್ಕೆ ತೆರೆಬಿದ್ದಿದ್ದು, “ಟಗರು’ ಸಂತೋಷಕೂಟದಲ್ಲಿ. ಈ ಸಂತೋಷ ಕೂಟದಲ್ಲಿ ವಿಷಯದ ಬಗ್ಗೆ ಶಿವರಾಜಕುಮಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಷ್ಟೇ ಅಲ್ಲ, ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವರ ಜೊತೆಗಿನ ಮಾತುಕತೆಯಲ್ಲಿನ ಟಾಪ್ ಐದು ಅಂಶಗಳು ಇಲ್ಲಿವೆ.

* “ಟಗರು’ನಲ್ಲಿ ನನ್ನ ಪಾತ್ರಕ್ಕೆ ಬೈತಾರೆ ಅಂತ ಅಭಿಮಾನಿಗಳು ಬೇಸರವಾಗಿದ್ದರು. ಅದನ್ನ ಪಾತ್ರವಾಗಿ ನೋಡಬೇಕೇ ಹೊರತು, ಅಲ್ಲಿ ಶಿವರಾಜಕುಮಾರ್‍ನ ನೋಡಬಾರದು. ಆ ಪಾತ್ರಕ್ಕೆ ಕೋಪ ಬಂದು, ಆ ಕೋಪವನ್ನು ಹೊರಹಾಕುವುದಕ್ಕೆ ಅವನು ಕಂಡುಕೊಂಡ ದಾರಿ ಅದು. ನಮಗೆ ಒಮ್ಮೊಮ್ಮೆ ಕೋಪ ಬಂದು, ಆ ಕ್ಷಣದಲ್ಲಿ ಒಂದೆರೆಡು ಮಾತಾಡುವುದುಂಟು. ಅದು ಸಹಜ. ಆದರೆ, ಅದರಿಂದ ಕೆಲವರಿಗೆ ಬೇಸರವಾಗಿದೆ. ಈ ತರಹ “ಓಂ’ ಚಿತ್ರದಲ್ಲೂ ಇತ್ತು.

ಅದಕ್ಕೆ ಪೂರಕವಾಗಿ ಒಂದಿಷ್ಟು ಡೈಲಾಗ್‍ಗಳನ್ನು ಇಟ್ಟಿದ್ದರು. ಇಲ್ಲೂ ಕನ್ವಿನ್ಸ್ ಮಾಡೋಕೆ ಪ್ರಯತ್ನ ಮಾಡಿದ್ದೀವಿ. ಮುಂದಿನ ಬಾರಿ ಇನ್ನೂ ಹುಷಾರಾಗಿರುತ್ತೀನಿ. ಇದರಿಂದ ನನಗೆ ಯಾವುದೇ ಬೇಸರವಾಗಿಲ್ಲ. ಇಷ್ಟಕ್ಕೂ ಎಲ್ಲಾ ಬೈಸಿಕೊಂಡು ಬರೋನೇ ನಿಜವಾದ ಹೀರೋ. ಗಾಂಧಿಯವರು ಬೈಸಿಕೊಂಡ ಮೇಲೇ ಮಹಾತ್ಮ ಆಗಲಿಲ್ಲವೇ? ಹಾಗಂತ ನಾನು ಅವರಿಗೆ ಹೋಲಿಸಿಕೊಳ್ಳುತ್ತಿಲ್ಲ. ಆದರೂ ಪಾತ್ರವಾಗಿ ನೋಡಿದರೆ ಇವೆಲ್ಲಾ ಸಹಜ.

* ನಾನು ಪ್ರೆಸ್‍ನವರಿಂದ ಸಾಕಷ್ಟು ವಿಷಯ ಕಲಿತಿದ್ದೀನಿ. ಬರೀ ಕನ್ನಡ ಅಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರಗಳ ವಿಮರ್ಶೆಯನ್ನೂ ಓದ್ತೀನಿ. ಅದರಿಂದ ನಾವು ಯಾವ ದಾರಿಯಲ್ಲಿದ್ದೀವಿ ಅಂತ ಸರಿಯಾಗಿ ಗೊತ್ತಾಗತ್ತೆ. ಮುಂಚೆ ಬಹಳ ಫಾಸ್ಟ್ ಆಗಿ ಮಾತಾಡ್ತಿದ್ದೆ. “ಹ’ಕಾರ, “ಅ’ಕಾರದಲ್ಲೂ ತಪ್ಪಾಗೋದು. ವಿಮರ್ಶೆಗಳನ್ನ ಓದಿ ಕ್ರಮೇಣ ಸರಿ ಮಾಡಿಕೊಂಡೆ. ಅದರಲ್ಲೂ ಕಳೆದ ಆರೇಳು ವರ್ಷಗಳಿಂದ ಸಾಕಷ್ಟು ಆಸಕ್ತಿಯಿಂದ ಚಿತ್ರ ಮಾಡುತ್ತಿದ್ದೀನಿ.

Advertisement

* “ಮಾನಸ ಸರೋವರ’ ಧಾರಾವಾಹಿಯ ಬಗ್ಗೆ ಒಳ್ಳೆಯ ಮಾತುಗಳು ಬರುತ್ತಿವೆ. ಇದರ ಜೊತೆಗೆ ಒಂದು ವೆಬ್ ಸೀರಿಸ್ ನಿರ್ಮಾಣ ಮಾಡುವ ಯೋಚನೆ ಇದೆ. ಆರ್.ಜೆ ಪ್ರದೀಪ ಇದ್ದಾರಲ್ಲ, ಅವರು ಬಂದು ಒಂದು ವೆಬ್ ಸೀರೀಸ್ ಮಾಡುವ ಬಗ್ಗೆ ನಿವಿ (ಮಗಳು ನಿವೇದಿತಾ) ಜೊತೆಗೆ ಮಾತಾಡಿಕೊಂಡು ಹೋಗಿದ್ದಾರೆ. ಇದಲ್ಲದೆ ಒಂದು ಸಿನಿಮಾ ಮಾಡುವ ಯೋಚನೆ ಸಹ ಇದೆ. ಏಪ್ರಿಲ್ ಮೊದಲ ವಾರದ ಹೊತ್ತಿಗೆ ಎಲ್ಲಾ ಪಕ್ಕಾ ಆಗಬಹುದು.

* “ದಿ ವಿಲನ್’ ಚಿತ್ರಕ್ಕೆ ಇನ್ನು 12 ದಿನಗಳ ಕೆಲಸ ಬಾಕಿ ಇದೆ. ಚಿತ್ರ ಯಾಕೆ ತಡವಾಯ್ತು ನನಗೆ ಗೊತ್ತಿಲ್ಲ. ಆದರೆ, ನಾನು ನಿರ್ದೇಶಕನಾಗಿದ್ದರೆ ಸರಿಯಾಗಿ ಪ್ಲಾನ್ ಮಾಡಿರುತ್ತಿದ್ದೆ. ನಿರ್ಮಾಪಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೆ. ಮುಂದೆ ಆದರೂ ಅಷ್ಟೇ, ನಾನು ಸಿನಿಮಾ ಮಾಡಿದರೆ ಸಿನಿಮಾ ಆರಂಭವಾಗಿ ಏಳನೇ ತಿಂಗಳು ತೆರೆಯ ಮೇಲೆ ಇರುವಂತೆ ನೋಡಿಕೊಳ್ತೀನಿ. ಹಾಗೆ ಮಾಡಿದರೆ ಗೆಲ್ತೀನೋ ಇಲ್ಲವೋ ಬೇರೆ ಮಾತು. ಹಾಗೆ ಫಾಸ್ಟ್ ಆಗಿ ಮಾಡಿ ಮುಗಿಸಿದರೆ, ಜನಕ್ಕೆ ಒಂದು ಕುತೂಹಲವಾದರೂ ಇರುತ್ತದೆ. ಇನ್ನು ಎರಡು ವರ್ಷ ಚಿತ್ರ ಮಾಡಿದರೆ ಗೆಲ್ಲುತ್ತೆ ಅನ್ನೋದು ಸುಳ್ಳು. ನಾನದನ್ನ ನಂಬಲ್ಲ.

* ಈ ವರ್ಷ ನನ್ನ ಪಾಲಿಗೆ ಬಹಳ ಲಕ್ಕಿ ಅಂದರೆ ತಪ್ಪಿಲ್ಲ. ಹೀಗೆ ಒಂದಿಷ್ಟು ಒಳ್ಳೆಯ ಪಾತ್ರಗಳು ಸಿಗಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ. “ಮಫ್ತಿ’ ಚಿತ್ರದಲ್ಲಿ ನರ್ತನ್ ಒಂದೊಳ್ಳೆಯ ಪಾತ್ರ ಕೊಟ್ಟರು. “ಟಗರು’ನಲ್ಲಿ ಸೂರಿ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. “ಕವಚ’ದಲ್ಲೊಂದು ಒಳ್ಳೆಯ ಪಾತ್ರವಿದೆ. ಎಲ್ಲಾ ಪಾತ್ರಗಳಿಗೂ ನ್ಯಾಯ ಸಲ್ಲಿಸುವುದಕ್ಕೆ ಮ್ಯಾಕ್ಸಿಮಮ್ ಕಷ್ಟಪಡುತ್ತಿದ್ದೇನೆ. ಅದರಲ್ಲೂ `ಕವಚ’ದಲ್ಲಿ ಅಂಧನ ಪಾತ್ರ. ಆ ತರಹ ಪಾತ್ರ ಮಾಡೋಕೆ ಬಹಳ ಕಷ್ಟ ಆಗುತ್ತೆ. ನಿಜ ಹೇಳಬೇಕೆಂದರೆ, ಒಬ್ಬ ಅಂಧನಿಗೆ ಎಷ್ಟು ಕಷ್ಟ ಆಗುತ್ತೆ ಅನ್ನೋದು ನನಗೆ ಆ ಪಾತ್ರ ಮಾಡಿದಾಗಲೇ ಗೊತ್ತಾಗಿದ್ದು

Advertisement

Udayavani is now on Telegram. Click here to join our channel and stay updated with the latest news.

Next