Advertisement

ಶಿವರಾಜ ಪಾಟೀಲರದ್ದು ವಿಭಿನ್ನ ವ್ಯಕ್ತಿತ್ವ

10:22 AM Sep 23, 2019 | Suhan S |

ಧಾರವಾಡ : ಶಿವರಾಜ ಪಾಟೀಲ ಅವರದ್ದು ವಿಭಿನ್ನ ವ್ಯಕ್ತಿತ್ವವಾಗಿದೆ. ನ್ಯಾಯಾಂಗದ ಜತೆಗೆ ಮಾನವೀಯ ಕಾರ್ಯಗಳಿಗೆ ಆದ್ಯತೆ ನೀಡಿರುವುದು ಎಲ್ಲರಿಗೂ ಮಾದರಿ. ಗುರುಗಳಿಗೆ ಗೌರವ ನೀಡುವ ವ್ಯಕ್ತಿ ಜೀವನದಲ್ಲಿ ಯಶಸ್ಸಿ ಗಳಿಸುತ್ತಾನೆ ಎಂಬುದಕ್ಕೆ ಇವರೇ ಸಾಕ್ಷಿಯಾಗಿದ್ದಾರೆ ಉತ್ಛ ನ್ಯಾಯಾಲಯ ನ್ಯಾಯಮೂರ್ತಿ ಕೆ. ನಟರಾಜನ್‌ ಹೇಳಿದರು.

Advertisement

ನ್ಯಾಯಮೂರ್ತಿ ಶಿವರಾಜ ಪಾಟೀಲ ಪ್ರತಿಷ್ಠಾನ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ನಗರದ ಆಲೂರು ವೆಂಕಟರಾವ್‌ ಭವನದಲ್ಲಿ ರವಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ, ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವೈದ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾ|ಶಿವರಾಜ ಪಾಟೀಲ ಅವರಿಗೆ ವಿದ್ಯೆ ಕಲಿಸಿದ ಕುಷ್ಟಗಿ ತಾಲೂಕಿನ ಸಾಸ್ವಿಹಾಳ ಗ್ರಾಮದ ನಿವೃತ್ತ ಶಿಕ್ಷಕ ಶರಣಯ್ಯ ಹಿರೇಮಠ ಅವರಿಗೆ ಶಿವಶ್ರೀ ಪ್ರಶಸ್ತಿ, ಐವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಭಾಗವಹಿಸಿದ್ದ 18 ವೈದ್ಯರನ್ನು ಸನ್ಮಾನಿಸಲಾಯಿತು.

ಶಿವಶ್ರೀ ಪ್ರಶಸ್ತಿ ಸ್ವೀಕರಿಸಿದ ಶರಣಯ್ಯ ಹಿರೇಮಠ ಮಾತನಾಡಿ, 75 ವರ್ಷಗಳ ಹಿಂದೆ ನನ್ನ ಶಿಷ್ಯನಾಗಿದ್ದ ಶಿವರಾಜ ಪಾಟೀಲ ಅವರು ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದು ಹೆಮ್ಮೆ ತಂದಿದೆ. ನಾನು ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆದು ಜನರಿಗೆ ಸಹಕಾರಿಯಾಗಿದ್ದು ನನ್ನ ಸೌಭಾಗ್ಯ. ಗುರು-ಶಿಷ್ಯರ ಸಂಬಂಧಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಭಾವುಕರಾದರು.

ಸಾನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಆಚಾರವಂತ ಶಿಕ್ಷಕರು ಸಿಗುವುದು ವಿರಳ. ಪ್ರತಿಷ್ಠಾನ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಜತೆಗೆ ಸಂಸ್ಕಾರವಂತ ಮಕ್ಕಳನ್ನೂ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಶಿವರಾಜ ಪಾಟೀಲ ಮಾತನಾಡಿ, ಶಿಕ್ಷಕರ ಪ್ರಭಾವ ವಿದ್ಯಾರ್ಥಿಗಳ ಮೇಲಾಗಬೇಕಲ್ಲದೆ, ಸತತ ಪರಿಶ್ರಮ, ನಿರಂತರ ಪ್ರಯತ್ನದಿಂದ ವಿದ್ಯಾರ್ಥಿ ಜೀವನ ವಿಕಸನವಾಗಲು ಸಾಧ್ಯ. ಸಮಯ-ಮನುಷ್ಯ ಸಂಬಂಧಗಳಿಗೆ ಮಹತ್ವ ಕೊಡಬೇಕು. ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ಆರೋಗ್ಯಪೂರ್ಣ ಜೀವನ ನಡೆಸುವುದೇ ನಿಜವಾದ ಬದುಕು ಎಂದರು.

ಉತ್ಛ ನ್ಯಾಯಾಲಯ ನ್ಯಾಯಮೂರ್ತಿ ಪಿ.ಜಿ.ಎಂ. ಪಾಟೀಲ, ಕೃಷಿ ವಿವಿ ಉಪ ಕುಲಪತಿ ಎಂ.ಬಿ. ಚಟ್ಟಿ, ಕಾನೂನು ವಿವಿ ಉಪ ಕುಲಪತಿ ಈಶ್ವರ ಭಟ್‌ ಮಾತನಾಡಿದರು. ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮೀಜಿ, ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ, ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್‌. ಎಸ್‌. ಚಿನ್ನಣ್ಣವರ, ಜಿಪಂ ಸಿಇಒ ಡಾ|ಬಿ.ಸಿ.ಸತೀಶ ಸೇರಿದಂತೆ ನ್ಯಾಯಾಧೀಶರು, ವಕೀಲರು ಇದ್ದರು. ಶಿವರಾಜ ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಶೇಖರಗೌಡ ಪಾಟೀಲ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next