ಗದಗ: ಕಡು ಬಡತನದಲ್ಲಿ ಹುಟ್ಟಿ ಗಾರೆ ಕೆಲಸ ಮಾಡುತ್ತ ನಿರಂತರ ಅಧ್ಯಯನದಲ್ಲಿ ತೊಡಗಿದ್ದ ಜಿಲ್ಲೆಯ ವಿದ್ಯಾರ್ಥಿ ಶಿವರಾಜ ದುರಗಪ್ಪ ಜಾಲಹಳ್ಳಿ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ 600ಕ್ಕೆ 593 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ವಿಶಿಷ್ಟ ಸಾಧನೆ ಮಾಡಿದ್ದಾನೆ.
ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಜಗದ್ಗುರು ಅನ್ನದಾನೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಶಿವರಾಜ ಕನ್ನಡ-98, ಇಂಗ್ಲಿಷ್-95, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಭೂಗೋಳ ಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾನೆ.
ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದವನಾದ ಶಿವರಾಜನ ತಂದೆ ದುರಗಪ್ಪ, ತಾಯಿ ಕೃಷ್ಣಮ್ಮ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪರೀಕ್ಷೆ ಫಲಿತಾಂಶ ಬಂದ ಸಂದರ್ಭದಲ್ಲೂ ಶಿವರಾಜ ತುಮಕೂರಿನಲ್ಲಿ ಗಾರೆ, ಬಾರ್-ಬೆಂಡಿಂಗ್ ಕೆಲಸ ನಿರ್ವಹಿಸುತ್ತಿದ್ದ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಐಎಎಸ್ ಮಾಡುವ ಗುರಿ ಹೊಂದಿದ್ದಾನೆ.
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಸೇರಿಕೊಂಡ ಶಿವರಾಜ, ಕಾಲೇಜಿನಲ್ಲಿ ಉಪನ್ಯಾಸಕರು ಮಾಡುತ್ತಿದ್ದ ಪಾಠವನ್ನು ಚೆನ್ನಾಗಿ ಗ್ರಹಿಸುತ್ತಿದ್ದ. ನಿರಂತರ ಅಧ್ಯಯನದಲ್ಲಿ ತೊಡಗಿಕೊಂಡು ಕಾಲೇಜಿನಲ್ಲಿ ನಡೆಸುತ್ತಿದ್ದ ಪ್ರತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉಪನ್ಯಾಸಕರ ನೆಚ್ಚಿನ ಶಿಷ್ಯನಾಗಿದ್ದ.
ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ 100ಕ್ಕೆ 100 ಅಂಕ ಪಡೆದು ಯಶಸ್ವಿಯಾಗಿದ್ದ. ಪ್ರತಿನಿತ್ಯ ಬೆಳಗಿನ ಜಾವ 4ರಿಂದ 8ರವರೆಗೆ ಅಧ್ಯಯನ ಮಾಡುತ್ತಿದ್ದ ಶಿವರಾಜ, ದ್ವಿತೀಯ ಪಿಯು ಕಾಲೇಜು ಆರಂಭದಿಂದಲೇ ನಿತ್ಯದ ಪಾಠಗಳನ್ನು ಅಂದೇ ಮನನ ಮಾಡಿಕೊಳ್ಳುತ್ತಿದ್ದ. ಕ್ಲಿಷ್ಟಕರ, ಸಮಸ್ಯಾತ್ಮಕ ವಿಷಯಗಳನ್ನು ಉಪನ್ಯಾಸಕರ ಬಳಿ ಪರಿಹರಿಸಿಕೊಳ್ಳುತ್ತಿದ್ದ. ಅದರ ಫಲವಾಗಿ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಅನ್ನದಾನೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ವೈ.ಎಸ್. ಪಾಟೀಲ.
ಜಗದ್ಗುರು ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಗೆ ಸೇರಿಕೊಡ ದಿನದಿಂದಲೂ ನಿರಂತರ ಅಧ್ಯಯನದಲ್ಲಿ ತೊಡಗಿದ್ದೆ. ಪ್ರತಿ ತಿಂಗಳು ನಡೆಸುತ್ತಿದ್ದ ಪರೀಕ್ಷೆಗಳು, ಪೂರ್ವಸಿದ್ಧತಾ ಪರೀಕ್ಷೆಗಳು ಮನೋಬಲ ಹೆಚ್ಚಿಸಿದವು. ಪ್ರಾಚಾರ್ಯರ, ಉಪನ್ಯಾಸಕರ ಪ್ರೋತ್ಸಾಹ, ತಂದೆ-ತಾಯಿಯರ ಆಶೀರ್ವಾದದ ಫಲವಾಗಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು. –
ಶಿವರಾಜ್ ದುರಗಪ್ಪ ಜಾಲಹಳ್ಳಿ, ವಿದ್ಯಾರ್ಥಿ
ಶಿವರಾಜನಿಗೆ ನೆರವು; ಶ್ರೀಗಳ ಅಭಯ
ವಿದ್ಯಾರ್ಥಿ ಶಿವರಾಜ ಸಾಧನೆಗೆ ಹಾಲಕೆರೆ ಅನ್ನದಾನೇಶ್ವರಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರು ಸ್ಪರ್ಧಾತ್ಮಕ ಪರೀಕ್ಷೆಯ ಓದಿನಿಂದ ಹಿಡಿದು ಉದ್ಯೋಗ ಅವಕಾಶ ಪಡೆಯುವವರೆಗೂ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ.
-ಅರುಣಕುಮಾರ ಹಿರೇಮಠ