ಕೊಪ್ಪಳ: ಮೊದಲು ಡಿ.ಕೆ.ಸುರೇಶ್ ಅವರ ಮಾತಿನ ಅರ್ಥವನ್ನು ತಿಳಿಯಬೇಕು. ನಮ್ಮ ರಾಜ್ಯಕ್ಕೆ ನೀಡಬೇಕಾದ ತೆರಿಗೆ ನೀಡಿಲ್ಲ. ಆ ಅರ್ಥದಲ್ಲಿ ಅವರು ಹೇಳಿದ್ದಾರೆ. ಬಿಜೆಪಿ ಡಿ.ಕೆ ಸುರೇಶ್ ಬಗ್ಗೆ ಮಾತಾಡುವ ಮೊದಲು ಪ್ರಧಾನಿ ಬಗ್ಗೆ ಮಾತನಾಡಲಿ. ನಮ್ಮ ಪಾಲನ್ನು ನೀಡದೆ ಇದ್ದರೆ ಯಾವ ಹಿತಕ್ಕಾಗಿ ಪ್ರಧಾನಿ ಇರುವುದು ಎಂದು ಕನಕಗಿರಿಯಲ್ಲಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಉಮೇಶ್ ಕತ್ತಿಯವರು ಕರ್ನಾಟಕ ಇಬ್ಬಾಗದ ಬಗ್ಗೆ ಮಾತಾಡಿದಾಗ ಬಿಜೆಪಿ ನಾಯಕರು ಯಾವ ಗುಹೆಯಲ್ಲಿದ್ದರು? ಆಗ ಕತ್ತಿಯವರ ರಾಜೀನಾಮೆ ಯಾಕೆ ಕೇಳಲಿಲ್ಲ. ಬಿಜೆಪಿಯವರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ಉಮೇಶ್ ಕತ್ತಿ ಮಾತಾಡಿದಾಗ ಬಿಜೆಪಿ ನಾಯಕರು ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದರಾ ಎಂದು ಪ್ರಶ್ನಿಸಿದರು.
ಮನುಷ್ಯನಿಗೆ ರೋಶ ಬಂದಾಗ ಮಾತಾಡಿದ್ದಾರೆ. ನಾವು ಹೆಚ್ಚು ಜೆಎಸ್ ಟಿ ಕಟ್ಟುತ್ತೇವೆ, ಹೀಗಾಗಿ ನಮ್ಮ ಪಾಲನ್ನು ಕೇಳುತ್ತೇವೆ. ಬಿಜೆಪಿಯವರು ಬರೀ ಧ್ವಜ ಹಿಡಿದುಕೊಂಡು ಓಡಾಡುವುದನ್ನು ಬಿಟ್ಟು ದೆಹಲಿಗೆ ಹೋಗಲಿ. ನಾವು ಯಾರ ಆಸ್ತಿ ಕೇಳುತ್ತಿಲ್ಲ. ನಮ್ಮ ಪಾಲನ್ನು ಕೇಳುತ್ತೇವೆ. ಮೋದಿ ಅವರನ್ನು ನೋಡಿದರೆ ರಾಜ್ಯ ಬಿಜೆಪಿಗರು ಇಲಿಗಳಂತಾಗುವರು. ನಾವು ನಮ್ಮ ಪಾಲು ಕೇಳಿದರೆ ದೇಶ ವಿರೋಧಿಗಳು, ಧರ್ಮ ವಿರೋಧಿಗಳೆಂದು ಬಿಂಬಿಸುತ್ತಾರೆ. ನಾವು ದೇಶ ವಿಭಜನೆ ಪರವಿಲ್ಲ ಎಂದರು.
ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದಕ್ಕೆ ದೇವೇಗೌಡರ ಅಸಮಾಧಾನ ವಿಚಾರಕ್ಕೆ ಮಾತನಾಡಿ, ಅಸಾಮಾಧಾನ ಬರೀ ದೇವೇಗೌಡರಿಗೆ ಮಾತ್ರ ಆಗಿಲ್ಲ, ಇಡೀ ಜೆಡಿಎಸ್ ಗೆ ಆಗಿದೆ ಎಂದರು.
ಎಲ್ ಕೆ ಅಡ್ವಾಣಿಗೆ ಭಾರತ ರತ್ನ ವಿಚಾರ ಘೋಷಣೆ ವಿಚಾರಕ್ಕೆ ಮಾತನಾಡಿ, ಅವರು ಹಿರಿಯರು, ಅವರಿಗೆ ಭಾರತ ರತ್ನ ಕೊಟ್ಟಿದ್ದು ತಪ್ಪಲ್ಲ. ಅವರನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವು ಮನಸಿಗೆ ನೋವು ತಂದಿದೆ ಎಂದರು.