ಕೊಪ್ಪಳ: ಅನರ್ಹ ಶಾಸಕರ ಸ್ಥಿತಿ ನೋಡಿದರೆ ಅಯ್ಯೋ ಎಂದೆನಿಸುತ್ತೆ. ಬಿಜೆಪಿಯವರು ಉಂಡು ಮನೆಗೆ ಜಂತಿ ಎಣೆಸೋರು. ತಮಗೆ ಬೇಕಾದಂತೆ ಬಳಕೆ ಮಾಡಿಕೊಂಡು ನಡು ನೀರಿನಲ್ಲಿ ಕೈ ಬಿಡುತ್ತಾರೆ. ತಾವು ಬದುಕಲು ಏನು ಬೇಕಾದ್ರೂ ಮಾಡಬಲ್ಲರು.ಒಂದು ರೀತಿ ಬಿಜೆಪಿಯವರು ಕೋತಿಯ ಜಾತಿಗೆ ಸೇರಿದವರು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಟೀಕೆ ಮಾಡಿದರು.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ನಾನೂ ಈ ಹಿಂದೆ ಬಿಜೆಪಿಯಿಂದ ಅನರ್ಹನಾಗಿ ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದೆ. ಬಿಜೆಪಿ ಆಗ ನಮ್ಮನ್ನೂ ಬಳಕೆ ಮಾಡಿ ಕೈ ಬಿಟ್ಟಿತು. ಈಗ 17 ಅನರ್ಹ ಶಾಸಕರಿಗೂ ಅದೇ ಸ್ಥಿತಿ ಬಂದೊದಗಿದೆ. ಕೋತಿ ನದಿಯಲ್ಲಿ ಮುಳುಗುವ ಹಂತಕ್ಕೆ ಬಂದಾಗ ತನ್ನ ಕೈಯಲ್ಲಿದ್ದ ಮರಿಯನ್ನೇ ಕೆಳಗೆ ಹಾಕಿಕೊಂಡು ತಾನು ಬದುಕುವ ಪ್ರಯತ್ನ ಮಾಡಿತಂತೆ. ಆ ರೀತಿ ಇನ್ನೊಬ್ಬರನ್ನು ತುಳಿದು ಬೆಳೆಯುವ ಜಾಯಮಾನದವರು ಎಂದರು.
ಬಿಎಸ್‌ವೈ ತಂತಿ ಮೇಲೆ ನಡಿಗೆ ಎಂದಿದ್ದಾರೆ. ನಿಜಕ್ಕೂ ಅವರ ಸ್ಥಿತಿ ನೋಡಿದರೆ ನನಗೆ ಅಯ್ಯೋ ಎಂದೆನಿಸುತ್ತದೆ. ಬಿಎಸ್‌ವೈ ಅವರನ್ನೇ ತುಳಿಯಲು ಬಿಜೆಪಿಯಲ್ಲಿ ಟಾರ್ಗೆಟ್ ನಡೆದಿದೆ. ಕಟೀಲ್, ಈಶ್ವರಪ್ಪ ಒಂದು ಹೇಳಿಕೆ ನೀಡಿದ್ರೆ, ಕತ್ತಿ, ಸವದಿ ಒಂದು ರೀತಿ ಹೇಳ್ತಿದ್ದಾರೆ. 17 ಶಾಸಕರ ರಾಜಿನಾಮೆ ಕೊಟ್ಟಾಗ ಇದ್ದ ಹುಮ್ಮಸ್ಸು ಈಗಿಲ್ಲ. ಬಿಎಸ್‌ವೈ ಹುಮ್ಮಸ್ಸು ಕುಗ್ಗಿದೆ. ಒಂದೆಡೆ ಪ್ರವಾಹದಿಂದ ಜನ ಕಣ್ಣೀರಿಡುತ್ತಿದ್ದಾರೆ. ಕೇಂದ್ರವು ಹಣ ಬಿಡುಗಡೆ ಮಾಡುತ್ತಿಲ್ಲ. ಗಂಡ ಹೆಂಡರ ಜಗಳದಲ್ಲಿ ಸಂತ್ರಸ್ಥರು ಬಡವಾಗಿದ್ದಾರೆ ಎಂದರು.
ರಾಜ್ಯ ಸರ್ಕಾರ ಸಂತ್ರಸ್ಥರಿಗೆ ಭಿಕ್ಷುಕರಿಗೆ ನೀಡಿದಂತೆ 10 ಸಾವಿರ ರೂ. ಕೊಟ್ಟು ಸುಮ್ಮನಾಗಿದೆ. 10 ಸಾವಿರದಲ್ಲಿ ಹೇಗೆ ಜೀವನ ಕಟ್ಟಿಕೊಳ್ಳಬೇಕು ? ಹಲವೆಡೆ ಕೊಟ್ಟ ಚೆಕ್‌ಗಳು ಬೌನ್ಸ್ ಆಗಿವೆ. ಇನ್ನೂ ಈಶ್ವರಪ್ಪ 10 ಸಾವಿರ ಕೊಟ್ಟಿದ್ದೆ ಹೆಚ್ಚಾಯ್ತು ಎಂದಿದ್ದಾರೆ. ರಾಜ್ಯದ 25 ಎಂಪಿಗಳು ಕೇಂದ್ರದಲ್ಲಿ ಹೋಗಿ ಹಣ ಕೇಳಲಿ. ಕೇಳಲು ಸಾಧ್ಯವಾಗದಿದ್ದರೆ ಬಳೆ ತೊಟ್ಟುಕೊಂಡು ಹಿಂದೆ ಸರಿಯಲಿ, ನಾವು ಹೋಗಿ ಕೇಂದ್ರದಲ್ಲಿ ಹಣ ಕೇಳುತ್ತೇವೆ ಎಂದರಲ್ಲದೇ ಬಿಜೆಪಿ ಓರ್ವ ಎಂಪಿ ನೆರೆ ಹಾನಿಗೆ ಕೇಂದ್ರದ ಪರಿಹಾರ ಅಗತ್ಯವಿಲ್ಲ ಎಂದು ಮಾತನಾಡಿದ್ದಾನೆ ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ ಎಂದರು.
ಸಿದ್ದರಾಮಯ್ಯರೇ ವಿಪಕ್ಷ ನಾಯಕ :
ಒಂದು ಮನೆ ಎಂದಮೇಲೆ ಸಣ್ಣ ಪುಟ್ಟ ಗೊಂದಲ ಇರುವುದು ಸಹಜ. ಮನೆಯೊಳಗೆ ಎಲ್ಲ ಸರಿ ಹೋಗುತ್ತದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಸೇರಿ ಪರಮೇಶ್ವರ ಅವರು ಸಿದ್ದರಾಮಯ್ಯ ಅವರು ನಾಯಕ ಎಂದಿದ್ದಾರೆ. ಸಿದ್ದರಾಮಯ್ಯ ಅವರು ಪ್ರಶ್ನಾತೀತ ನಾಯಕ. ಅದರಲ್ಲಿ ಎರಡು ಮಾತಿಲ್ಲ. ಅವರ ಬಗ್ಗೆ ಟೀಕೆ ಮಾಡುವ ಹಕ್ಕು ಯಾರಿಗೂ ಇಲ್ಲ. ಅವರೇ ಕಾಂಗ್ರೆಸ್‌ನಿಂದ ವಿಪಕ್ಷದ ನಾಯಕರು ಆಗಲಿದ್ದಾರೆ ಎಂದರು.
ಬಿಜೆಪಿ ದ್ವೇಷದ ರಾಜಕಾರಣ :
ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಿಎಸ್‌ವೈ ಮೊದಲ ದಿನವೇ ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದರು. ಆದರೆ ಪ್ರತಿಯೊಂದರಲ್ಲೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅನುದಾನ ಕಡಿತ ಮಾಡಿದ್ದಾರೆ. ಈ ಹಿಂದಿನ ಪ್ರಕರಣಗಳನ್ನು ಮರು ತನಿಖೆ ಮಾಡಿಸುವ ಮಾತನ್ನಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಅವರು ಉಪಸ್ಥಿತರಿದ್ದರು.