Advertisement

ಜಿಎಸ್‌ಟಿ: ಫಿಲ್ಮ್ ಚೇಂಬರ್‌ ನಿರ್ಣಯಕ್ಕೆ ಬದ್ಧ: ಶಿವರಾಜ್‌ ಕುಮಾರ್‌

02:20 AM Jul 08, 2017 | Team Udayavani |

ಕೋಟೇಶ್ವರ: ಜಿಎಸ್‌ಟಿಯಿಂದಾಗಿ ಚಲನಚಿತ್ರ ರಂಗದ ಟಿಕೆಟ್‌ ದರದಲ್ಲಿ ಉಂಟಾಗುವ ಹೆಚ್ಚಳ ಹಾಗೂ ಸಿನೆಮಾ ನಿರ್ಮಾಪಕರು ಸಲ್ಲಿಸಬೇಕಾದ ತೆರಿಗೆ ಸಮೇತ ಸರಿಯಾದ ಮಾಹಿತಿ ಈವರೆಗೆ ಲಭ್ಯವಾಗದೇ ಇರುವುದರಿಂದ ಫಿಲ್ಮ್ಚೇಂ ಬರ್‌ ಜಿಎಸ್‌ಟಿ ಬಗ್ಗೆ ಕೈಗೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುವುದಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಶಿವರಾಜ್‌ ಕುಮಾರ್‌ ಹೇಳಿದರು.

Advertisement

ಕೋಟೇಶ್ವರದ ಯುವ ಮೆರಿಡಿಯನ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಪತ್ರಕರ್ತರೊಡನೆ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಪತ್ನಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಆಕೆಗೆ ಬೆಂಬಲಿಸಿದ್ದೆ. ರಾಹುಲ್‌ ಗಾಂಧಿಯವರು ನಮ್ಮ ಮನೆಗೆ ಆಗಮಿಸಿರುವ ವಿಚಾರವು ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿರಬಹುದು, ಆದರೆ ನನ್ನ ತಾಯಿಯ ನಿಧನದ ಬಗ್ಗೆ ಸಾಂತ್ವನ ಹೇಳಲು ಅವರು ಆಗಮಿಸಿದ್ದರು ಎಂದರು.

ತೆರೆ ಕಾಣಲಿರುವ ಶಿವರಾಜ್‌ ಕುಮಾರ್‌ ನಟನೆಯ ಲೀಡರ್‌ ಚಿತ್ರದ ಬಗ್ಗೆ ಗಮನ ಸೆಳೆದಾಗ ಇದೊಂದು ಕಮರ್ಶಿಯಲ್‌ ಚಿತ್ರವಾಗಿದ್ದು ಇದರಲ್ಲಿ ದೇಶ ಪ್ರೇಮ ಹಾಗೂ ಕೌಟುಂಬಿಕ ಕಥೆ ಹೊಂದಿದೆ ಎಂದರು. ದ.ಕ. ಹಾಗೂ ಉಡುಪಿ ಜಿಲ್ಲೆಯು ದಿನೆ ದಿನೇ ಅಭಿವೃದ್ಧಿ ಹೊಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕೋಟೇಶ್ವರದಲ್ಲಿ ಅಂತಾರಾಷ್ಟ್ರಿಯ ಗುಣಮಟ್ಟದ ಯುವಮೆರಿಡಿಯನ್‌ ಹೊಟೇಲ್‌ ಆರಂಭಿಸಿ ಖ್ಯಾತಿ ಗಳಿಸಿರುವ ಉದಯ್‌ಕುಮಾರ್‌ ಶೆಟ್ಟಿ ಹಾಗೂ ವಿನಯ್‌ಕುಮಾರ್‌ ಶೆಟ್ಟಿ ಅವರನ್ನು ಶ್ಲಾಘಿಸಿದರು. ಉಡುಪಿ ಜಿಲ್ಲೆಯ ಪ್ರಕೃತಿ ರಮ್ಯ ಸೌಂದರ್ಯವನ್ನು ಕೊಂಡಾಡಿದ ಶಿವರಾಜ್‌ ಕುಮಾರ್‌ ರಥಸಪ್ತಮಿ ಸಹಿತ ಅನೇಕ ಚಿತ್ರಗಳನ್ನು ಈ ಭಾಗದಲ್ಲಿ ಚಿತ್ರೀಕರಿಸಿದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಯುವ ಮೆರಿಡಿಯನ್‌ ಆಡಳಿತ ನಿರ್ದೇಶಕರಾದ ಉದಯ್‌ಕುಮಾರ್‌ ಶೆಟ್ಟಿ, ವಿನಯ್‌ಕುಮಾರ್‌ ಶೆಟ್ಟಿ ಹಾಗೂ ಕಲ್ಯಾಣ್‌ ಜುವೆಲರ್ಸ್ ಪಾಲುದಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next