Advertisement

ಇಂದು ಶಿವಣ್ಣ 60ನೇ ಹುಟ್ಟುಹಬ್ಬ: ಹೊಸ ಸಿನಿಮಾಗಳ ಟೈಟಲ್ -ಪೋಸ್ಟರ್ ಲಾಂಚ್

09:01 AM Jul 12, 2022 | Team Udayavani |

ನಟ ಶಿವರಾಜ್‌ ಕುಮಾರ್‌ ಅವರಿಗೆ ಇಂದು 60ನೇ ಹುಟ್ಟುಹಬ್ಬದ ಸಂಭ್ರಮ. 60ನೇ ಹುಟ್ಟುಹಬ್ಬ ಅನ್ನೋದು ಎಲ್ಲರಿಗೂ ಸ್ಪೆಷಲ್‌. ಆದರೆ, ಶಿವಣ್ಣ ಮಾತ್ರ ಈ ಸ್ಪೆಷಲ್‌ನ ಈ ಬಾರಿ ಸೆಲೆಬ್ರೆಟ್‌ ಮಾಡುತ್ತಿಲ್ಲ. ಮುದ್ದಿನ ತಮ್ಮನನ್ನು ಕಳೆದುಕೊಂಡ ನೋವು ಅವರಲ್ಲಿ ಇನ್ನು ಹಾಗೇ ಮಡುಗಟ್ಟಿದೆ. ನೋವು ನುಂಗಿ ಮುಂದುವರೆಯಲು ಪ್ರಯತ್ನಿಸಿದರೂ ನೆನಪು ಮತ್ತೆ ಮತ್ತೆ ಕಾಡುತ್ತಿದೆ. ಹಾಗಾಗಿ, ಶಿವಣ್ಣ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

Advertisement

“ಎಲ್ಲವೂ ಚೆನ್ನಾಗಿದ್ದರೆ ಈ ಬಾರಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಮಾಡುವ ಯೋಚನೆ ಇತ್ತು. ಆದರೆ, ಈಗ ಮನಸ್ಸು ಇಲ್ಲ. ಅಪ್ಪು ಇಲ್ಲದಿರುವಾಗ ನಾನು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ’ ಎನ್ನುತ್ತಾರೆ ಶಿವಣ್ಣ.

ಶಿವಣ್ಣನಿಗೆ 60 ವರ್ಷ. ಅವರ ಚಿತ್ರರಂಗದ ಜರ್ನಿಗೆ 36 ವರ್ಷ. ಈ 36 ವರ್ಷಗಳಲ್ಲಿ 123 ಸಿನಿಮಾಗಳಲ್ಲಿ ಶಿವಣ್ಣ ಹೀರೋ ಆಗಿ ನಟಿಸಿದ್ದಾರೆ. ಭಿನ್ನ-ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈ ಬಗ್ಗೆ ಮಾತನಾಡುವ ಶಿವಣ್ಣ, ಒಮ್ಮೆ ಹಿಂದಿರುಗಿ ನೋಡಿದಾಗ ಇಷ್ಟೆಲ್ಲಾ ಸಿನಿಮಾಗಳನ್ನು ನಾನೇ ಮಾಡಿದೆನಾ ಅನಿಸುತ್ತದೆ. 36 ವರ್ಷ ಚಿತ್ರರಂಗದಲ್ಲಿ ಇರಲು ನಾನು ಅರ್ಹನಾ ಎಂಬ ಆಲೋಚನೆಯೂ ಬರುತ್ತಿದೆ. ಅಷ್ಟರ ಮಟ್ಟಿಗೆ ನಾನು ಏನು ಮಾಡಿದ್ದೇನೆ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಹಾಗಂತ ಇಷ್ಟು ವರ್ಷ ಇರಲು ನಾನೇ ಕಾರಣ ಎಂದರೆ ತಪ್ಪಾಗುತ್ತದೆ. ಅಪ್ಪ-ಅಮ್ಮನ ಆಶೀರ್ವಾದ, ಅಭಿಮಾನಿಗಳ, ಚಿತ್ರರಂಗದವರ ಸಹಕಾರದಿಂದ ಸಾಧ್ಯವಾಗಿದೆ. ಒಂದೊಂದು ಸಿನಿಮಾದ ಸ್ಟಿಲ್‌ಗ‌ಳನ್ನು ನೋಡಿದಾಗಲೂ ಮೊನ್ನೆ ಮೊನ್ನೆ ಈ ಚಿತ್ರದಲ್ಲಿ ನಟಿಸಿದಂತಿದೆಯಲ್ಲ ಎಂಬ ಭಾವ ಬರುತ್ತದೆ.ಒಂದು ಖುಷಿ ಏನೆಂದರೆ ಅವತ್ತಿನ ಶಂಕರ್‌ನಾಗ್‌, ವಿಷ್ಣುವರ್ಧನ್‌, ಅಂಬರೀಶ್‌ರಿಂದ ಹಿಡಿದು ಇವತ್ತಿನ ಹೊಸ ಹೀರೋಗಳವರೆಗೂ ಕ್ಲೋಸ್‌ ಇದ್ದೀನಿ. ಚಿತ್ರರಂಗ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ’ ಎನ್ನುವುದು ಶಿವರಾಜ್‌ಕುಮಾರ್‌ ಮಾತು.

ಕೈ ತುಂಬಾ ಸಿನಿಮಾ: ಶಿವರಾಜ್‌ಕುಮಾರ್‌ ಅವರ ಕೈ ತುಂಬಾ ಸಿನಿಮಾಗಳಿವೆ. ಈಗಾಗಲೇ “ಬೈರಾಗಿ’ ಬಿಡುಗಡೆಯಾಗಿದೆ. “ವೇದ’ ಅಂತಿಮ ಹಂತದ ಚಿತ್ರೀಕರಣದಲ್ಲಿದೆ. ಈ ನಡುವೆಯೇ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ, ಯೋಗರಾಜ್‌ ಭಟ್‌ ನಿರ್ದೇಶದ ಚಿತ್ರದ ಮುಹೂರ್ತ ನಡೆದಿದೆ. ಇದರ ಜೊತೆಗೆ “ಘೋಸ್ಟ್‌’, “45′, “ಅಶ್ವತ್ಥಾಮ’, “ಸತ್ಯಮಂಗಳ’, ಆರ್‌.ಕೇಶವ (ರೈತ) ನಿರ್ಮಾಣದ ಚಿತ್ರ, ನವ ನಿರ್ದೇಶಕ ಕೊಟ್ರೇಶ್‌ ನಿರ್ದೇಶನದ ಚಿತ್ರ ಸೇರಿದಂತೆ ಇನ್ನೂ ಮೂರ್‍ನಾಲ್ಕು ಚಿತ್ರಗಳು ಶಿವಣ್ಣ ಕೈಯಲ್ಲಿವೆ.

Advertisement

ಘೋಸ್ಟ್‌ ಪೋಸ್ಟರ್‌ಗೆ ಸುದೀಪ್‌ ಸಾಥ್‌: ಸಂದೇಶ್‌ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ “ಘೋಸ್ಟ್‌’ ಚಿತ್ರ ಪೋಸ್ಟರ್‌ ಕೂಡಾ ಇಂದು ಬಿಡುಗಡೆಯಾಗುತ್ತಿದೆ. ಕಿಚ್ಚ ಸುದೀಪ್‌ ಅವರು ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರವನ್ನು ಶ್ರೀನಿ ನಿರ್ದೇಶನ ಮಾಡಿದ್ದಾರೆ. ಸಂದೇಶ್‌ ಪ್ರೊಡಕ್ಷನ್ಸ್‌ ಮೂಲಕ ನಿರ್ಮಾಣವಾಗುತ್ತಿರುವ 29 ನೇ ಚಿತ್ರವಿದು. ಸಂದೇಶ್‌ ನಾಗರಾಜ್‌ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಸಂದೇಶ್‌ ಎನ್‌ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಮಹೇಂದ್ರ ಸಿಂಹ ಈ ಚಿತ್ರದ ಛಾಯಾಗ್ರಾಹಕರು. ಆಗಸ್ಟ್‌ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ.

ಶಿವಣ್ಣ ಸರ್ಕಲ್‌!:  ಶಿವರಾಜ್‌ಕುಮಾರ್‌ ಅವರ 60ನೇ ಹುಟ್ಟುಹಬ್ಬದ ಹಿನ್ನೆಲೆ ಯಲ್ಲಿ ಅವರ ನೆರೆಹೊರೆಯ ವರು ಕೂಡಾ ಗಿಫ್ಟ್ ನೀಡುತ್ತಿದ್ದಾರೆ. ಮಾನ್ಯತಾ ರೆಸಿಡೆನ್ಸಿಯ ಪ್ರಮುಖ ವೃತ್ತಕ್ಕೆ ಶಿವಣ್ಣನ ಹೆಸರಿಡಲು ನಿರ್ಧರಿಸಲಾಗಿದೆ. ಇದಲ್ಲದೇ ಅಖೀಲ ಕರ್ನಾಟಕ ಶಿವರಾಜ್‌ ಕುಮಾರ್‌ ಸೇನಾ ಸಮಿತಿ, ಗಂಡುಗಲಿ ಶಿವರಾಜ್‌ಕುಮಾರ್‌ ಅಭಿಮಾನಿ ಸಂಘಗಳು ಹಲವು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಅರ್ಜುನ್‌ ಜನ್ಯ ಜೊತೆ ಶಿವಣ್ಣ 45: ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ನಿರ್ದೇಶನ, ರಮೇಶ್‌ ರೆಡ್ಡಿ ನಿರ್ಮಾಣದ ಚಿತ್ರವೊಂದರಲ್ಲಿ ಶಿವರಾಜ್‌ಕುಮಾರ್‌ ನಟಿಸಿಲಿದ್ದು, ಆ ಚಿತ್ರಕ್ಕೆ “45′ ಎಂದು ಟೈಟಲ್‌ ಇಡಲಾಗಿದ್ದು, ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೈಟಲ್‌ ಪೋಸ್ಟರ್‌ ರಿಲೀಸ್‌ ಆಗಲಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗು ಮಲಯಾಳಂನಲ್ಲಿ ಈ ಚಿತ್ರ ತಯಾರಾಗುತ್ತಿದೆ. ನಿರ್ಮಾಪಕ ರಮೇಶ್‌ ರೆಡ್ಡಿ ಅದ್ಧೂರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next