Advertisement

ಯೋಗರಾಜ್ ಭಟ್ರ ‘ಕರಟಕ ದಮನಕ’ದಲ್ಲಿ ಶಿವಣ್ಣ- ಪ್ರಭುದೇವ ಬ್ಯುಸಿ

03:08 PM Aug 25, 2023 | Team Udayavani |

ನಟ ಶಿವರಾಜಕುಮಾರ್‌ ಮತ್ತು ಪ್ರಭುದೇವ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿರುವ “ಕರಟಕ ದಮನಕ’ ಸಿನಿಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ.

Advertisement

ಈಗಾಗಲೇ “ಕರಟಕ ದಮನಕ’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಅಂತಿಮ ಹಂತದಲ್ಲಿ ಸಿನಿಮಾದ ಹಾಡುಗಳನ್ನು ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದೆ. ಇದೇ ವೇಳೆ “ಕರಟಕ ದಮನಕ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ “ರಾಕ್‌ ಲೈನ್‌ ಸ್ಟುಡಿಯೋ’ಗೆ ಮಾಧ್ಯಮಗಳನ್ನು ಆಹ್ವಾನಿಸಿದ್ದ ಚಿತ್ರತಂಡ, ಸಿನಿಮಾ ಇಲ್ಲಿಯವರೆಗೆ ಸಾಗಿಬಂದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿತು.

ಮೊದಲಿಗೆ “ಕರಟಕ ದಮನಕ’ ಬಗ್ಗೆ ಮಾತಿಗಿಳಿದ ನಿರ್ದೇಶಕ ಯೋಗರಾಜ್‌ ಭಟ್‌, “ಈ ಸಿನಿಮಾ ಶುರುವಾಗಿ ಸುಮಾರು ಒಂದು ವರ್ಷವಾಯಿತು. “ಕರಟಕ ದಮನಕ’ ಎನ್ನುವುದು “ಪಂಚತಂತ್ರ’ ಕಥೆಗಳಲ್ಲಿ ಬರುವ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಇಬ್ಬರು ಒಟ್ಟಿಗೆ ಇರುವುದನ್ನು ನೋಡಿದಾಗ ಅವರನ್ನು “ಕರಟಕ ದಮನಕ’ ಎನ್ನುವುದು ಉಂಟು. ಈ ಸಿನಿಮಾದಲ್ಲಿ ಶಿವಣ್ಣ “ಕರಟಕ’ ಹಾಗೂ ಪ್ರಭುದೇವ “ದಮನಕ’ ಪಾತ್ರಗಳನ್ನು ಮಾಡಿದ್ದಾರೆ. ಲಾಕ್‌ಡೌನ್‌ಗೂ ಮುಂಚೆ ಹೊಳೆದ ಕಥೆ. ಹ್ಯೂಮರ್‌, ವಿಚಿತ್ರ ಆ್ಯಕ್ಷನ್‌, ಕೊನೆಗೆ ಎಮೋಶನ್‌ ಎಲ್ಲವೂ ಇದರಲ್ಲಿದೆ. ಮೊದಲ ಬಾರಿಗೆ ಇವರಿಬ್ಬರನ್ನು ತೆರೆಮೇಲೆ ನೋಡುವುದೇ ಒಂದು ಖುಷಿ. ಇಬ್ಬರೂ ನಟರ ಎನರ್ಜಿ ಸಿನಿಮಾವನ್ನು ಮತ್ತೂಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇಲ್ಲಿ ನಾನಾ, ನೀನಾ ಎನ್ನುವುದಕ್ಕಿಂತ ನಾವು ಎನ್ನುವ ಥರ ಪಾತ್ರವಿರುತ್ತದೆ’ ಎಂದು ಕಥಾಹಂದರದ ಪರಿಚಯ ಮಾಡಿಕೊಟ್ಟರು.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮಾತನಾಡಿ, “ಒಂದು ಒಳ್ಳೆಯ ಕಥೆ ಸಿಗಬೇಕು ಅಂದ್ರೆ ಕಷ್ಟ. ಸಾಕಷ್ಟು ಕಥೆಗಳನ್ನು ಹುಡುಕಿದ ಮೇಲೆ ಈ ಕಥೆಯನ್ನು ಆರಿಸಿಕೊಂಡು ಸಿನಿಮಾ ಮಾಡುವ ಯೋಜನೆ ಮಾಡಿಕೊಂಡೆವು. ಯೋಗರಾಜ್‌ ಭಟ್‌ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಇದೊಂದು ಕಂಪ್ಲೀಟ್‌ ಎಂಟರ್‌ ಟೈನ್ಮೆಂಟ್‌ ಸಿನಿಮಾ, ಪ್ರೇಕ್ಷಕರನ್ನು ಹೊಟ್ಟೆತುಂಬ ನಗಿಸಬೇಕು ಎಂದು ಈ ಸಿನಿಮಾ ಮಾಡುತ್ತಿದ್ದೇವೆ. ನಮ್ಮ ಸಂಸ್ಥೆಯಿಂದ ಶಿವರಾಜಕುಮಾರ್‌ ಅವರ ಜೊತೆ ಸಿನಿಮಾ ಮಾಡಿ ಬಹಳ ವರ್ಷಗಳಾಗಿತ್ತು. ಪ್ರಭುದೇವ ಜೊತೆಗೊಂದು ಸಿನಿಮಾ ಮಾಡಬೇಕು ಎಂಬ ಕನಸಿತ್ತು. ಇಬ್ಬರೂ ನಟರನ್ನು ಈ ಸಿನಿಮಾದಲ್ಲಿ ಸೇರಿಸುವ ಅವಕಾಶ ಸಿಕ್ಕಿತು. ಶಿವಣ್ಣ-ಪ್ರಭುದೇವ ಕಾಂಬಿನೇಶನ್‌ ಕುತೂಹಲ ಮೂಡಿಸುತ್ತದೆ’ ಎಂದರು.

ನಾಯಕ ನಟ ಶಿವರಾಜ್‌ ಕುಮಾರ್‌ ಮಾತನಾಡಿ, “ರಾಕ್‌ ಲೈನ್‌ ಪ್ರೊಡಕ್ಷನ್ಸ್‌ ನಮ್ಮ ಕುಟುಂಬವಿದ್ದಂತೆ. ಇನ್ನು ಯೋಗರಾಜ್‌ ಭಟ್‌ ಸಿನಿಮಾಗಳು ನನಗೆ ಇಷ್ಟ. ಅವರ ಅನೇಕ ಸಿನಿಮಾಗಳನ್ನು ಥಿಯೇಟರಿಗೆ ಹೋಗಿ ನೋಡಿದ್ದೇನೆ. ನನಗೆ ಯಾವಾಗ ಸಿನಿಮಾ ಮಾಡ್ತೀರಾ ಅಂಥ ಯೋಗರಾಜ್‌ ಭಟ್‌ಗೆ ಅನೇಕ ಬಾರಿ ಕೇಳುತ್ತಿದ್ದೆ. ಈಗ ಅವರೊಂದಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಹೊಸ ಅನುಭವ ಕೊಡುವ ಸಿನಿಮಾ. ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಸಂತೋಷ. ಗೆಳೆಯ ಪ್ರಭುದೇವ ನಾವು ಯಾವುದಾದರೂ ಕಾರ್ಯಕ್ರಮದಲ್ಲಿ ಸಿಗುತ್ತಿದ್ದೆವು. ಈಗ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇವೆ. ಈ ಸಿನಿಮಾದಲ್ಲೂ ನಾವಿಬ್ಬರು ಸ್ನೇಹಿತರಾಗಿಯೇ ನಟಿಸುತ್ತಿದ್ದೇವೆ’ ಎಂದರು.

Advertisement

“ಶಿವರಾಜಕುಮಾರ್‌ ಜೊತೆ ನಟಿಸುತ್ತಿರುವುದೇ ಖುಷಿಯ ವಿಚಾರ. ಅವರ ಎನರ್ಜಿ ನೋಡಿದರೆ ಖುಷಿಯಾಗುತ್ತದೆ ಎಂಬುದು ನಟ ಪ್ರಭುದೇವ ಮಾತು.

Advertisement

Udayavani is now on Telegram. Click here to join our channel and stay updated with the latest news.

Next