Advertisement

ಹೂಳೆತ್ತಿದ ಬಳಿಕ ತುಂಬಿದ ಶಿರ್ವ ಕಡಂಬು ಕೆರೆ

10:17 PM May 27, 2020 | mahesh |

ಶಿರ್ವ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮಸ್ಥರು ಮತ್ತು ನರೇಗಾ ಕಾರ್ಮಿಕರ ಶ್ರಮದಿಂದ ದುರಸ್ತಿಗೊಂಡ ಶಿರ್ವ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಟ್ಟಾರು ಕಡಂಬು ಬಳಿಯಿರುವ ಕೆಳಗಿನ ಮನೆ ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿದ್ದು ಗ್ರಾಮಸ್ಥರನ್ನು ಪುಳಕಿತರನ್ನಾಗಿಸಿದೆ.

Advertisement

ಶಿರ್ವ ಗ್ರಾಮ ಪಂಚಾಯತ್‌ ಅಧ್ಯಕ್ಷೆ ವಾರಿಜಾ ಪೂಜಾರ್ತಿ ಮತ್ತು ಪಿಡಿಒ ಅನಂತ ಪದ್ಮನಾಭ ನಾಯಕ್‌ ನೇತೃತ್ವದಲ್ಲಿ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಮನೆಯಲ್ಲಿರುವ ಯುವಕರ ಮನವೊಲಿಸಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ನೀಡುವ ಮೂಲಕ ಕೃಷಿಗೆ ಬೇಕಾಗಿರುವ ನೀರು ಮತ್ತು ಅಂತರ್ಜಲ ಮಟ್ಟ ವೃದ್ಧಿಗಾಗಿ ಸಾಮೂಹಿಕವಾಗಿ ಕೆಲಸ ಮಾಡಲು ನಿರ್ಧರಿಸಲಾಗಿತ್ತು.

ನೀರಿನ ಒರತೆ
ಕಡಂಬು ಮತ್ತು ಸುತ್ತಮುತ್ತಲಿನ ಪರಿಸರದ ಯುವಕರು ಮತ್ತು ಮಹಿಳೆ ಯರು, ಗ್ರಾಮಸ್ಥರು ಉತ್ಸಾಹದಿಂದ ಕೆರೆ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಕಡಂಬು ನಮೋ ಫ್ರೆಂಡ್ಸ್‌ ಬಳಗ ಅವರೊಂದಿಗೆ ಕೈ ಜೋಡಿಸಿತ್ತು. ಮೇಲೆತ್ತಿದ ಹೂಳನ್ನು ಸಿಮೆಂಟ್‌ ಚೀಲದಲ್ಲಿ ತುಂಬಿ ಕೆರೆಯ ಸುತ್ತ ದಂಡೆ ಕಟ್ಟಲಾಗಿದೆ. ನೀರಿನ ಒರತೆ ಹೆಚ್ಚಾದ ಕಾರಣ ಇನ್ನೂ ಹೆಚ್ಚು ಗುಂಡಿ ತೋಡಲು ಆಗಲಿಲ್ಲ ಎಂದು ಕಾರ್ಮಿಕ ಮುಂದಾಳು ಗೀತಾ ಕಡಂಬು ತಿಳಿಸಿದ್ದಾರೆ.

ಕೆರೆ ದುರಸ್ತಿಯ ಪ್ರಾರಂಭದಲ್ಲಿಯೇ ಭೂಮಿಯ ಒಡಲಿನಿಂದ ನೀರಿನ ಬುಗ್ಗೆಯೊಂದು ಚಿಮ್ಮಿತ್ತು. ಕಾರ್ಮಿಕರ ಪರಿಶ್ರಮಕ್ಕೆ ಪ್ರತಿಫಲವೆಂಬಂತೆ ಕೆರೆಯಲ್ಲಿ 5 ಅಡಿಗೂ ಹೆಚ್ಚು ನೀರು ತುಂಬಿದ್ದು, ಪರಿಸರದ ಕೃಷಿಕರು ಹಡಿಲು ಬಿದ್ದ ಭೂಮಿಯನ್ನು ಕೃಷಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಖಾಸಗಿಯವರ ಸ್ವಾಧೀನದಲ್ಲಿದ್ದ ಈ ಕೆರೆಯಲ್ಲಿ ಈಗ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಗ್ರಾಮ ಪಂಚಾಯತ್‌ ವತಿಯಿಂದ ಅವಶ್ಯವಿದ್ದಲ್ಲಿ ಆವರಣಗೋಡೆ, ಕಾಲುವೆ ಇತ್ಯಾದಿ ನಿರ್ಮಿಸಿ, ಪಂಚಾಯತ್‌ನ ಪ್ರತ್ಯೇಕ ಯೋಜನೆಯ ಮೂಲಕ ಗ್ರಾಮಸ್ಥರಿಗೆ ನೀರನ್ನು ಬಳಸಲು ಯೋಜನೆ ರೂಪಿಸುವುದಾಗಿ ಗ್ರಾ.ಪಂ. ಪಿಡಿಒ ಅನಂತ ಪದ್ಮನಾಭ ನಾಯಕ್‌ ತಿಳಿಸಿದ್ದಾರೆ.

Advertisement

ಗ್ರಾ.ಪಂ. ಸದಸ್ಯ ಗೋಪಾಲ ಆಚಾರ್ಯ, ಗೀತಾ ಕಡಂಬು, ರಕ್ಷಿತ್‌, ಭಾಸ್ಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಯಶಸ್ಸು
ಗ್ರಾಮದ ಕೆರೆಗಳ ಹೂಳೆತ್ತುವ ಮೊದಲ ಪ್ರಯತ್ನವಾಗಿ ಕಡಂಬು ಕೆರೆಯನ್ನು ದುರಸ್ತಿಗೊಳಿಸಲಾಗಿದ್ದು, ಯಶಸ್ಸು ಕಂಡಿದ್ದೇವೆ. ಮುಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿರುವ ಕೆರೆಗಳ ಹೂಳೆತ್ತಿ ಅಭಿವೃದ್ಧಿಗೊಳಿಸಿ ಜಲಮೂಲ ಉಳಿಸಲು ಪ್ರಯತ್ನಿಸಲಾಗುವುದು.
-ವಾರಿಜಾ ಪೂಜಾರ್ತಿ, ಶಿರ್ವ ಗ್ರಾ.ಪಂ. ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next