ಸ್ವಾತಂತ್ರ್ಯೊತ್ಸವ ಎಂದ ಕೂಡಲೇ ತಟ್ಟನೆ ನೆನಪಾಗುವುದು ಮಂಡ್ಯ ಜಿಲ್ಲೆಯ ಶಿವಪುರದ ಧ್ವಜ ಸತ್ಯಾಗ್ರಹ ಸೌಧ. ಕರ್ನಾಟಕದಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದ ಈ ಶಿವಪುರ, ಇತಿಹಾಸದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
ಮದ್ದೂರು ಸಮೀಪದ ಶಿಂಷಾನದಿ ತೀರದಲ್ಲಿದ್ದ ಶಿವಪುರ ಗ್ರಾಮದಲ್ಲಿ 1938ರ ಎ.9ರಿಂದ ಮೂರು ದಿನಗಳ ಕಾಲ ಧ್ವಜ ಸತ್ಯಾಗ್ರಹ ಚಳವಳಿ ನಡೆಯಿತು.
ದೇಶಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹತ್ತಿದ್ದಾಗಲೇ, ಇತ್ತ ಮೈಸೂರು ಸಂಸ್ಥಾನದಲ್ಲೂ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಿದ್ಧತೆ ಆರಂಭವಾಗಿತ್ತು. ಮೈಸೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಸ್ತಿತ್ವಕ್ಕೂ ಬಂದಿತು. ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುವ ಸಲುವಾಗಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ, ಚಳವಳಿಯಲ್ಲಿ ತೊಡಗಿದ್ದ ಅನೇಕ ಮುಖಂಡರನ್ನು ತ್ರಿವರ್ಣ ಧ್ವಜ ಹಾರಿಸಿದ ಹಿನ್ನೆಲೆಯಲ್ಲಿ ಬಂಧಿಸಲಾಯಿತು.
ಇದರಿಂದ ರೊಚ್ಚಿಗೆದ್ದ ಹೋರಾಟಗಾರರು ಮೈಸೂರಿನ ಹೊರಗೆ ಧ್ವಜ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದರು. ಅದರಂತೆ ಮದ್ದೂರಿನ ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಶಿವಪುರ ಗ್ರಾಮದ ತಿರುಮಲಗೌಡ ಅವರ ಕೃಷಿ ಜಮೀನಿನಲ್ಲಿ ಧ್ವಜಸ್ತಂಭ ನಿಲ್ಲಿಸಿ ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ ನಡೆಸಲಾಯಿತು. ಆದರೆ, ಮೈಸೂರು ಮ್ಯಾಜಿಸ್ಟ್ರೇಟರು ಮದ್ದೂರು ಸುತ್ತಮತ್ತ ಒಂದು ತಿಂಗಳ ಕಾಲ ಸಭೆ, ಮೆರವಣಿಗೆ, ಧ್ವಜಾರೋಹಣ ಮಾಡಬಾರದು ಎಂದು ನಿಷೇಧಾಜ್ಞೆ ಹೊರಡಿಸಿದರು.
ಈ ನಿಷೇಧಾಜ್ಞೆಗೂ ಬಗ್ಗದ ಚಳವಳಿಗಾರರು 1938 ಎಪ್ರಿಲ್ 9ರಂದು ಧ್ವಜಾರೋಹಣ ಮಾಡಲು ಮುಂದಾದರು. ಇದಕ್ಕೆ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಸೇರಿದಂತೆ ಸುಮಾರು 10 ಸಾವಿರ ಮಂದಿ ಜಮಾಯಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಸಿದ್ದಲಿಂಗಯ್ಯ ಅವರನ್ನು ಪೊಲೀಸರು ಬಂಧಿಸಿದರು. ಆದರೆ ಅಲ್ಲೇ ಇದ್ದ ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್.ಜೋಯಿಸ್ ಅವರು, ಕ್ಷಣಾರ್ಧದಲ್ಲಿ ಹಗ್ಗವನ್ನು ಎಳೆದು ಧ್ವಜ ಹಾರಿಸಿಯೇ ಬಿಟ್ಟರು. ಇದರಿಂದ ಸಿಟ್ಟಿಗೆದ್ದ ಸರಕಾರ ಪೊಲೀಸರ ಮೂಲಕ ಅಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಬಂಧಿಸಿತು.
ಅನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಸ್ವಾತಂತ್ರ್ಯದ ಹೋರಾಟದ ಕಿಚ್ಚು ಹೊತ್ತಿ ಕೊಂಡಿತು. ಇದರ ನೆನಪಿಗಾಗಿ ಶಿವಪುರ ಧ್ವಜ ಸತ್ಯಾಗ್ರಹ ಸೌಧವನ್ನು ನಿರ್ಮಿಸ ಲಾಯಿತು. ಮಾಜಿ ಸಿಎಂಗಳಾದ ಡಿ. ದೇವರಾಜ ಅರಸು ಮತ್ತು ಕೆಂಗಲ್ ಹನುಮಂತಯ್ಯ ಅವರು 1979ರ ಸೆ. 26ರಂದು ಉದ್ಘಾಟಿಸಿದರು.
-ಶಿವರಾಜ್ ಎಚ್.