ಮಣಿಪಾಲ: ಭಾರತದ ಸಂಸ್ಕೃತಿ ತ್ಯಾಗ ಜೀವನವನ್ನು ಜಗತ್ತಿಗೆ ಬೋಧಿಸಿದೆ. ಯಾವುದನ್ನೂ ಯಾರ ಮೇಲೂ ಹೇರದ ಸಂಸ್ಕೃತಿಯನ್ನು ಹೊಂದಿದ ಭಾರತವನ್ನು ದೈವಿಕ ಶಕ್ತಿ ಕಾಪಾಡುತ್ತಿದೆ. ಅದು ಸಿದ್ಧರು, ಸಾಧುಗಳ ತಪಃ ಶಕ್ತಿಯ ಫಲ ಎಂದು ಹಿಂಜಾವೇ ಜಿಲ್ಲಾ ಸಮಿತಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.
ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ರವಿವಾರ ನಡೆದ ಅತಿರುದ್ರ ಮಹಾಯಾಗದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ಹಣಕ್ಕಿಂತ ಸಾತ್ವಿಕ ಶಕ್ತಿ ಮೇಲು ಎಂಬುದನ್ನು ಪ್ರಪಂಚಕ್ಕೆ ಭಾರತ ತೋರಿಸಿಕೊಟ್ಟಿದೆ. ನಾವು ಬದುಕ ಬೇಕು, ಇನ್ನೊಬ್ಬರನ್ನೂ ಬದುಕಲು ಬಿಡಬೇಕು ಎಂದು ಸಾರಿ ನಡೆಯು ತ್ತಿರುವ ದೇಶವಿದ್ದರೆ ಅದು ಭಾರತ. ಶಿವನ ಅಘೋರ ಮುಖದಿಂದ ದೈವಗಳ ಸಾಕ್ಷಾತ್ಕಾರ ಎಂಬ ಕಲ್ಪನೆ ತುಳು ನಾಡಿನಲ್ಲಿದೆ. ಆಂಗ್ಲ ಪ್ರಣೀತ ಶಿಕ್ಷಣ ಕ್ರಮದಿಂದ ಭಾರತದ ಪ್ರಗತಿ ಎಂದು ಕೆಲವು ಬುದ್ಧಿಜೀವಿಗಳು ಹೇಳಿ ದ್ದರೂ ಅಷ್ಟೊಂದು ಸುಶಿಕ್ಷಿತರಲ್ಲದ ನಮ್ಮ ತುಳುನಾಡಿನ ದೈವನರ್ತಕರು ಬಹಳ ಹಿಂದೆಯೇ ಭವ್ಯ ಭಾರತದ ವಿಸ್ತಾರದ ಅರಿವು ಹೊಂದಿದ್ದರು ಎಂದರು.
ಧಾರ್ಮಿಕ ಸಭೆಯನ್ನು ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಅರವಿಂದೋ ಪತ್ರಿಕೆ ಸಂಪಾದಕ ಮಹೋಪಾಧ್ಯಾಯ ಪುಟ್ಟು ಪರಶುರಾಮ ಕುಲಕರ್ಣಿ ಮಾತನಾಡಿ, ಶಿವಾರಾಧನೆಯಿಂದ ಸನ್ಮಂಗಲವಾಗಲಿದೆ. ಈ ಮಹಾನ್ ಯಾಗದಿಂದ ಲೋಕ ಕಲ್ಯಾಣವಾಗಲಿದೆ ಎಂದರು.
ಯಾಗ ಸಮಿತಿ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್, ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್, ಉದ್ಯಮಿಗಳಾದ ಗಣನಾಥ ಹೆಗ್ಡೆ, ಗಣೇಶ್ ಪ್ರಭು, ರಂಜಿತ್ ಶೆಟ್ಟಿ, ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇಗುಲದ ಅಡಳಿತ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ದ.ಕ., ಉಡುಪಿ ಜಿಲ್ಲಾ ಗುರುವಂದನ ಸಮಿತಿಯ ಮಾಧವ ಖಾರ್ವಿ, ಬಂಟರ ಚಾವಡಿಯ ತಾರಾನಾಥ ಹೆಗ್ಡೆ, ಆಡಳಿತ ಮೊಕ್ತೇಸರರಾದ ಶುಭಕರ ಸಾಮಂತ್, ದಿನೇಶ್ ಪ್ರಭು, ಶಾಶ್ವತ ಟ್ರಸ್ಟಿ ದಿನೇಶ್ ಶ್ರೀಧರ ಸಾಮಂತ್, ಕೋಶಾಧಿಕಾರಿ ಸತೀಶ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಉಗ್ರಾಣ ಸಮಿತಿ ಉಸ್ತುವಾರಿ ಪ್ರಕಾಶ್ ಪ್ರಭು ಸ್ವಾಗತಿಸಿ, ಸುಚೇತಾ ನಾಯಕ್ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ಅತಿಥಿ ಗಳನ್ನು ಪರಿಚಯಿಸಿ ವಂದಿಸಿದರು.