Advertisement

ಪರಭಾಷಾ ಚಿತ್ರಗಳಿಂದ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ: ಕಾಸರವಳ್ಳಿ

05:32 PM Feb 02, 2020 | Naveen |

ಶಿವಮೊಗ್ಗ: ಕನ್ನಡ ಚಲನಚಿತ್ರರಂಗ ಇಂದು ಪರಭಾಷಾ ಚಿತ್ರದೊಂದಿಗೆ ಸಾಕಷ್ಟು ಪೈಪೋಟಿ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಹೇಳಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಕನ್ನಡ ಚಿತ್ರರಂಗ ಇಂದು ಕನ್ನಡಿಗರ ನಿಯಂತ್ರಣದಲ್ಲಿರುವ ಉದ್ಯಮವಾಗಿಲ್ಲ. ಪರಭಾಷಾ ಚಿತ್ರಗಳೊಂದಿಗೆ ಸಾಕಷ್ಟು ಪೈಪೋಟಿ ಎದುರಿಸಬೇಕಿದೆ. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುವವರಿದ್ದಾರೆ. ಆದರೆ ಬೇರೆ ರಾಜ್ಯದಲ್ಲಿ ಈ ಸಮಸ್ಯೆ ಇಲ್ಲ. ಪರಭಾಷಾ ಚಿತ್ರಗಳ ಪೈಪೋಟಿ ನಡುವೆಯೇ ಕನ್ನಡ ಚಿತ್ರರಂಗ ಕೂಡ ಮುಂದೆ ಸಾಗಬೇಕಿದೆ. ಕನ್ನಡ ಚಲನಚಿತ್ರ ಕಮರ್ಶಿಯಲ್‌ ಮತ್ತು ಕಲಾತ್ಮಕ ಎಂದು ಎರಡು ವರ್ಗಗಳನ್ನು ಒಳಗೊಂಡಿದೆ. ಕನ್ನಡದಲ್ಲಿ ಮೊದಲಿನಿಂದಲೂ ಸಾಹಿತ್ಯ ಮತ್ತು ಸಿನಿಮಾ ಒಂದಕೊಂದು ಪೂರಕವಾಗಿ ನಡೆದುಕೊಂಡು ಬಂದಿದೆ. ಅಲ್ಲದೆ, ಕನ್ನಡ ಚಿತ್ರಗಳಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ದೊರೆತಿತ್ತು. ಕೊಡು- ಕೊಳ್ಳುವಿಕೆ ಸಂಬಂಧವಿತ್ತು. ಆದರೆ ಕ್ರಮೇಣ ಕಂದಕ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಹಲವಾರು ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಚಿತ್ರಗಳ ವಿತರಣೆ ಇಂದು ಕನ್ನಡಿಗರಿಗಿಂತ ಬೇರೆಯವರ ಬಳಿಯೇ ಇರುವುದು ಹೆಚ್ಚು. ಪರಭಾಷೆಯ ದೊಡ್ಡ ಸಿನಿಮಾ ಬಿಡುಗಡೆಯಾದರೆ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ರಾಜ್ಯದಲ್ಲಿ ಅವಕಾಶವೇ ಸಿಗದ ವಾತಾವರಣ ಇದೆ. ಇನ್ನು ಕಲಾತ್ಮಕ ಚಿತ್ರಗಳಾದರೆ ಇನ್ನೂ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದರು.

ಒಂದು ಕಾಲದಲ್ಲಿ ಕನ್ನಡ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರಿಗೆ ಸಾಕಷ್ಟು ಉತ್ತೇಜನ ಸಿಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾವಣೆ ಕಂಡಿದೆ. ವಿತರಣೆ ಕನ್ನಡಿಗರ ನಿಯಂತ್ರಣದಲ್ಲಿ ಇಲ್ಲ. ಹೀಗಾಗಿ ಕನ್ನಡ ಚಿತ್ರಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ ಎಂದರು.

ರಾಜ್ಯದಲ್ಲಿ ಸಣ್ಣ ಸಣ್ಣ ಚಿತ್ರಮಂದಿರಗಳನ್ನು ನಿರ್ಮಿಸಬೇಕೆಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದ ರಾಜೇಂದ್ರಸಿಂಗ್‌ ಬಾಬು ಅವರು ಈ ಹಿಂದೆ ಸರ್ಕಾರಕ್ಕೆ ಸಲಹೆ ನೀಡಿದ್ದರು. ಸರಕಾರ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿತ್ತು. ಇದು ಫಲಪ್ರದವಾದರೆ ಕನ್ನಡ ಚಿತ್ರಕ್ಕೆ ಉತ್ತೇಜನ ಸಿಗಬಹುದು ಎಂದರು.

Advertisement

ಚಿತ್ರದ ಆರ್ಥಿಕತೆ ಬಗ್ಗೆ ಮಾತ್ರ ಪ್ರಸ್ತಾಪವಾಗುತ್ತದೆ. ಸಿನಿಮಾ ಒಂದು ಗಂಭೀರವಾದ ಮಾಧ್ಯಮ ಎಂದು ಪರಿಗಣಿತವಾಗಿದೆ. ಚಿತ್ರದ ಸಾಂಸ್ಕೃತಿಕ ಆಯಾಮವನ್ನು ಕೂಡ ಪರಿಗಣಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಮೀಟು ಅಭಿಯಾನ ಕುರಿತು ಮಾತನಾಡಿದ ಅವರು, ಸ್ತ್ರೀ ಸಮಾಜಕ್ಕೆ ಇದೊಂದು ಪ್ರಬಲ ಅಸ್ತ್ರವಾಗಿದೆ ನಿಜ. ಸ್ತ್ರೀಯರಿಗೆ ಅಗೌರವ ತೋರಿದರೆ ಪ್ರಶ್ನೆ ಮಾಡುತ್ತಿದ್ದಾರೆ. ಜನರು ಕೂಡ ಎಚ್ಚರವಾಗಿದ್ದಾರೆ. ಆದರೆ ಅದು ದುರುಪಯೋಗವಾಗಬಾರದು ಎಂದರು.

ಕೇಂದ್ರ ಸರ್ಕಾರ ಕೊಡಮಾಡುವ ಪದ್ಮಪ್ರಶಸ್ತಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಶಸ್ತಿಗೆ ಸಂಬಂಧಪಟ್ಟಂತೆ ದಕ್ಷಿಣ ಭಾರತಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕುತ್ತಿಲ್ಲ. ಕನ್ನಡ ಚಿತ್ರರಂಗಕ್ಕೂ ಸಾಕಷ್ಟು ಅನ್ಯಾಯವಾಗಿದೆ. ಕನ್ನಡದಲ್ಲೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ಮುಂದಿನ ದಿನದಲ್ಲಿ ಪರಿಗಣಿಸಬೇಕು ಎಂದು ಹೇಳಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್‌, ಅರುಣ್‌, ವೈದ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next