ಉರಿಯೋ ಸೂರ್ಯ ಒಬ್ಬ ಸಾಕು
ಭೂಮಿ ಬೆಳಗೋಕೆ, ಈ ಭೂಮಿ ಬೆಳಗೋಕೆ
ರಾಜೀವ ಒಬ್ಬ ಸಾಕು
ಹಳ್ಳಿನಾ ಬೆಳಗೋಕೆ, ಈ ಹಳ್ಳಿನಾ ಬೆಳಗೋಕೆ
“ಬಂಗಾರದ ಮನುಷ್ಯ’ ಚಿತ್ರದ ಹಾಡೊಂದರಲ್ಲಿ ಬರುವ ಈ ಸಾಲುಗಳು ಶಿವರಾಜ ಕುಮಾರ್ ಅವರಿಗೆ ತುಂಬಾ ಇಷ್ಟವಂತೆ. ಯಾರಿಗಾದರೂ ಸ್ಫೂರ್ತಿ ತುಂಬುವ ಈ ಸಾಲುಗಳನ್ನು ಕೇಳಿದಾಗಲೆಲ್ಲ ಶಿವಣ್ಣ ಖುಷಿಯಾಗುತ್ತಾರೆ. ಆ ಮಟ್ಟಿಗೆ ಅವರು “ಬಂಗಾರದ ಮನುಷ್ಯ’ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಆ ಚಿತ್ರದ ನಂತರ ಅವರಿಗೆ “ರಾಜೀವ’ ಎಂಬ ಹೆಸರು ತುಂಬಾ ಇಷ್ಟವಾಗಿಬಿಟ್ಟಿದೆ. ಏಕೆಂದರೆ, ಆ ಹೆಸರಿನಲ್ಲೆ ಒಂದು ಪವರ್ ಇದೆ, ಸ್ಫೂರ್ತಿ ಇದೆ ಎಂಬುದು ಅವರ ಮಾತು.
“ನನಗೆ “ಬಂಗಾರದ ಮನುಷ್ಯ’ ಚಿತ್ರದ ಈ ಸಾಲುಗಳು ತುಂಬಾ ಇಷ್ಟ. ಅದು ಸ್ಫೂರ್ತಿ ತುಂಬುವಂತಹ ಸಾಲುಗಳು. ಎಷ್ಟೋ ಜನ ಓದಿ ಪಟ್ಟಣ ಸೇರಿದರೂ ರಾಜೀವ ಮಾತ್ರ ಕೃಷಿಯತ್ತ ವಾಲುವ ಸನ್ನಿವೇಶವನ್ನು ಕಟ್ಟಿಕೊಟ್ಟ ರೀತಿ ಅದ್ಭುತ’ ಎಂದು ಖುಷಿಯಿಂದ ಹೇಳುತ್ತಾರೆ. “ಬಂಗಾರದ ಮನುಷ್ಯ’ ಆ ಸನ್ನಿವೇಶವನ್ನು ಶಿವಣ್ಣ ಈಗ ನೆನಪು ಮಾಡಿಕೊಳ್ಳಲು ಕಾರಣ “ಬಂಗಾರ ಸನ್‌ಆಫ್ ಬಂಗಾರದ ಮನುಷ್ಯ’.
ರೈತರ ಸಮಸ್ಯೆಯನ್ನೇ ಮೂಲವಾಗಿಟ್ಟುಕೊಂಡು ಬಂದ ಈ ಸಿನಿಮಾ ಈಗ ಶಿವರಾಜಕುಮಾರ್ ಅವರ ಕೆರಿಯರ್‌ನಲ್ಲಿ ಮತ್ತೂಂದು ವಿಭಿನ್ನ ಸಿನಿಮಾವಾಗಿ ಗುರುತಿಸಿಕೊಂಡಿದೆ. ಸಿನಿಮಾ ನೋಡಿದವರೆಲ್ಲ ಈ ತರಹದ ಒಂದು ಹೊಸ ಬಗೆಯ, ಕಮರ್ಷಿಯಲ್ ಜೊತೆಗೆ ಕಾಳಜಿ ಇರುವ ಸಿನಿಮಾದಲ್ಲಿ ತೊಡಗಿಸಿಕೊಂಡ ಬಗ್ಗೆ ಶಿವರಾಜಕುಮಾರ್ ಅವರಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಯಾರೇ ಸಿಕ್ಕಲಿ, “ನಿಮ್ಮ ಬಂಗಾರ ಸಿನಿಮಾ ನೋಡಿದೆ. ತುಂಬಾ ವಿಭಿನ್ನವಾಗಿದೆ. ಒಳ್ಳೆಯ ಸಂದೇಶವಿದೆ’ ಎನ್ನುತ್ತಿದ್ದಾರಂತೆ. ಇತ್ತೀಚೆಗೆ ಸಿನಿಮಾ ನೋಡಿದವರೊಬ್ಬರು ಫೋನ್ ಮಾಡಿ ಖುಷಿ ವ್ಯಕ್ತಪಡಿಸಿದ್ದಲ್ಲದೇ, ಮನೆಯವರಿಂದಲೂ ಫೋನ್ ಮಾಡಿಸಿ ಈ ತರಹದ ಸಿನಿಮಾ ಮಾಡಿದ ಬಗ್ಗೆ ಸಂತಸ ಹಂಚಿಕೊಂಡರಂತೆ. “ಕೇವಲ ನನ್ನ ಅಭಿಮಾನಿಗಳಷ್ಟೇ ಅಲ್ಲದೇ, ಸಿನಿಮಾ ನೋಡಿದ ಪ್ರತಿಯೊಬ್ಬರಿಂದಲೂ “ಬಂಗಾರ’ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದು ಖುಷಿಯಿಂದ ಹೇಳುತ್ತಾರೆ.
ಶಿವರಾಜಕುಮಾರ್ ಅವರಿಗೂ ಹೊಸ ಬಗೆಯ, ಸಂದೇಶವಿರುವ ಸಿನಿಮಾಗಳನ್ನು ಮಾಡಲು ಇಷ್ಟವಂತೆ. “ಎಷ್ಟು ದಿನಾಂತ ನಾನು ಅದೇ ಫೈಟ್, ಅದೇ ಡ್ಯಾನ್ಸ್ ಮಾಡಿಕೊಂಡಿರಲಿ. ನನಗೂ ಬೇರೆ ರೀತಿಯ ಸಿನಿಮಾಗಳನ್ನು ಮಾಡಬೇಕೆಂಬ ಆಸೆ ಇದೆ. ಈಗ ಅಂತಹ ಕಥೆಗಳು ಸಿಗುತ್ತಿವೆ. ಮುಂದೆ ಬರಲಿರುವ “ಲೀಡರ್’ನಲ್ಲಿ ಯೋಧರ ಬಗ್ಗೆ ಹೇಳಿದ್ದೇವೆ. ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಜೊತೆಗೆ ಕಮರ್ಷಿಯಲ್ ಆಗಿಯೂ ಹೇಳಬೇಕು. ಅತಿಯಾಗಿ ಹೇಳಿದರೆ ಅದು ಡಾಕ್ಯುಮೆಂಟರಿಯಾಗುತ್ತದೆ’ ಎನ್ನುವುದು ಶಿವರಾಜಕುಮಾರ್ ಮಾತು.