ದಿನ ಕಳೆದಂತೆ ಸ್ಯಾಂಡಲ್‌ವುಡ್‌ಗೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ “ಅಂದುಕೊಂಡಂತೆ’ ಸಿನಿಮಾ ತಂಡವೂ ಒಂದು. ಹೌದು, ಈ ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಇದು ಮೊದಲ ಚಿತ್ರ. ಹಾಗಂತ, ಅವರಿಗೆ ಅನುಭವ ಇಲ್ಲವೆಂದಲ್ಲ, ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವದ ಮೇಲೆ “ಅಂದುಕೊಂಡಂತೆ’ ಚಿತ್ರ ಮಾಡಿದ್ದಾರೆ. ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಜನವರಿ ಅಂತ್ಯದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರು ಮಾಡಿಕೊಂಡಿದೆ.
ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಅನ್ನು ಶಿವರಾಜಕುಮಾರ್ ಅವರು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಹೊಸಬರ ಆಲೋಚನೆಗಳು ಹೊಸದಾಗಿರಲಿ ಎಂದು ಕಿವಿಮಾತು ಹೇಳಿದ್ದಾರೆ. ಈ ಚಿತ್ರದ ಮೂಲಕ ಶ್ರೇಯಸ್ ನಿರ್ದೇಶಕರಾಗುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಈ ಹಿಂದೆ ಶ್ರೇಯಸ್, ಬಿ.ರಾಮಮೂರ್ತಿ ಹಾಗು ಶರಣ್ ಕಬ್ಬೂರು ಬಳಿ ಕೆಲಸ ಮಾಡಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಅವರದೇ. ಇನ್ನು, ಶುಕ್ರ ಫಿಲಂಸ್ ಬ್ಯಾನರ್‌ನಡಿ ರಮೇಶ್ ಕೊಯಿರ ಅವರೊಂದಿಗೆ ಶ್ರೇಯಸ್ ಕೂಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ಶ್ರೇಯಸ್, “ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ. ಜನರ ಪ್ರತಿ ದಿನದ ಲೈಫ್ ಹೇಗೆಲ್ಲಾ ಇರುತ್ತೆ, ಹೇಗೆಲ್ಲಾ ನಡೆದು ಹೋಗುತ್ತೆ ಎನ್ನುವುದರ ಸುತ್ತ ಕಥೆ ಸಾಗುತ್ತದೆ. ಟ್ರಾಫಿಕ್ ಮಧ್ಯೆ ಏನೋ ಯೋಚಿಸುತ್ತಾ, ಅಲ್ಲೇನೋ ಅಂದುಕೊಂಡಂತೆಯೇ ಆಗುತ್ತೆ ಎಂಬ ಭರವಸೆಯಲ್ಲಿ ಹೋದರೆ, ಅಲ್ಲಿ ಅಂದುಕೊಂಡಂತೆ ನಡೆಯೋದಿಲ್ಲ.
ಇಂತಹ ಅನೇಕ ಘಟನೆಗಳು ಚಿತ್ರದ ಹೈಲೈಟ್. ಪ್ರೇಕ್ಷಕರು ಕೂಡ ಕ್ಲೈಮ್ಯಾಕ್ಸ್‌ನಲ್ಲಿ ಹೀಗೆ ಆಗುತ್ತೆ ಅಂದುಕೊಂಡರೆ, ಅಲ್ಲಿ ಆಗುವುದೇ ಬೇರೆ. ಒಟ್ಟಾರೆ, ಈಗಿನ ವಾಸ್ತವ ಅಂಶಗಳು ಚಿತ್ರದಲ್ಲಿವೆ’ ಎಂಬುದು ಶ್ರೇಯಸ್ ಮಾತು. ಚಿತ್ರದಲ್ಲಿ ಪ್ರಮೋದ್ ಬೋಪಣ್ಣ ಹೀರೋ ಆಗಿ ಕಾಣಿಸಿಕೊಂಡರೆ, ರಿಷ್ವಿಭಟ್ ನಾಯಕಿಯಾಗಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿಶ್ರುತ್‌ರಾಜ್ ನಟಿಸಿದ್ದಾರೆ. ಉಳಿದಂತೆ, ಲೋಕೇಶ್, ಲೋಕೇಶ್‌ಗೌಡ, ಕಿರಣ್, ವಿನಯ್‌ರಾಜ್, ಎಂ.ಡಿ.ಕೌಶಿಕ್, “ಉಗ್ರಂ’ ರೆಡ್ಡಿ, ಗಿರೀಶ್ ಜತ್ತಿ, ರಾಜು ಹೆಮ್ಗೆಪುರ, ಡಾನ್‌ಬಾಬು ಇತರರು ನಟಿಸಿದ್ದಾರೆ.
ಅನಂತ ಕಾಮತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್, ಚೇತನ್ ಅನಿಕೇತ್ ಸಾಹಿತ್ಯವಿದೆ. ರಮೇಶ್ ಕೊಯಿರ ಛಾಯಾಗ್ರಹಣವಿದೆ. ಕಿರಣ್ ಕುಮಾರ್ ಸಂಕಲನವಿದೆ. ನಾಗ್ ಕೀರ್ತಿ ಅವರು ಚಿತ್ರದಲ್ಲಿ ಮೂರು ಫೈಟ್ಸ್ ಸಂಯೋಜಿಸಿದ್ದಾರೆ. ಬೆಂಗಳೂರು, ಕನಕಪುರ, ಮಾಗಡಿ ಸುತ್ತಮುತ್ತ ಚಿತ್ರೀಕರಣಗೊಂಡಿರುವ “ಅಂದುಕೊಂಡಂತೆ’ ಚಿತ್ರದ ಹಾಡುಗಳನ್ನು ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.