ತುಮಕೂರು: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಳಪೆ ಕಾಮಗಾರಿ ಶನಿವಾರಬೆಳಗ್ಗೆ ಖುದ್ದು ಪರಿಶೀಲಿಸಿದ ಮಾಜಿ ಸಚಿವ ಸೊಗಡು ಎಸ್. ಶಿವಣ್ಣ ಸ್ಮಾರ್ಟ್‌ಸಿಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಗರ ಸ್ಮಾರ್ಟ್‌ಸಿಟಿಯಾಗಿ ಆಭಿವೃದ್ಧಿಯಾಗುತ್ತಿರುವುದಕ್ಕೆ ಜನರು ಸಂತಸಗೊಂಡಿದ್ದರು. ಆದರೆ ನಡೆಯುತ್ತಿರುವ ಕಾಮಗಾರಿಯಿಂದ ಓಡಾಡೋಕೆ ತೊಂದರೆ ಅನುಭವಿಸುವಂತಾಗಿದೆ. ಸ್ಮಾರ್ಟ್‌ಸಿಟಿ ಕಾಮಗಾರಿ ಎಂದು ನಗರವನ್ನೇ ಗುಂಡಿಮಯ ಮಾಡಿದ್ದಾರೆ.
ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ಜನರಿಗೆ ತೊಂದರೆ ನೀಡುತ್ತ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಗರಿ ಮುಡಿಗೇರಿಸಿಕೊಂಡಿರುವ ತುಮಕೂರಿನಲ್ಲಿ ಧೂಳಿನದ್ದೇ ಕಾರುಬಾರು. ಎಲ್ಲಾ ಮುಖ್ಯರಸ್ತೆಗಳನ್ನು ಮನಸ್ಸಿಗೆ ಬಂದಂತೆ ಅಗೆದು ಅರ್ಧಂಬರ್ಧ ಬಿಟ್ಟಿರುವ ಗುತ್ತಿಗೆದಾರರ ವಿರುದ್ಧ ಜನರು ಹಿಡಿಶಾಪ ಹಾಕುವಂತಾಗಿದೆ ಎಂದು ಕಿಡಿಕಾರಿದರು. ನಗರದ ಅಶೋಕ ರಸ್ತೆಯ ಚರ್ಚ್ ಸರ್ಕಲ್ ಬಳಿ ನಡೆಯುತಿದ್ದ ಡೆಕ್ಟಿಂಗ್ ಲೈನ್ ಸ್ಪೇಸರ್ಸ್ ಕಾಮಗಾರಿಗೆ ಕ್ಯೂರಿಂಗ್ ಮಾಡದೆ ಪೈಪ್ ಅಳವಡಿಸಲಾಗಿದೆ.
ಇದರಿಂದ ಕಾಂಕ್ರಿಟ್ ಕಳಚಿ ಬೀಳುತ್ತಿದ್ದು, ಸ್ಥಳದಲ್ಲಿದ್ದ ಸ್ಮಾರ್ಟ್ ಸಿಟಿ ಎಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಕಳಪೆಯಾಗಿರುವುದಕ್ಕೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿ ರುವ ಸ್ಮಾರ್ಟ್‌ಸಿಟಿ ಅಧ್ಯಕ್ಷೆ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕಾರಣ. ಆರೇಳು ವರ್ಷದಿಂದ ಇಲ್ಲಿಯೇ ಠಿಕಾಣಿ ಹೂಡಿ ಸರ್ಕಾರದ ದಿಕ್ಕು ತಪ್ಪಿಸುತಿದ್ದಾರೆ . ಟೆಂಡರ್ ಕರೆಯುವಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ ಎಂದರು. ತುಮಕೂರಿನಲ್ಲಿ ನಡೆಯುವ ಕಾಮಗಾರಿಗೆ ಬೆಂಗಳೂರಿನಲ್ಲಿ ಟೆಂಡರ್ ಕರೆದು ತಮಗೆ ಬೇಕಾದವರಿಗೆ ಕಾಮಗಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಕಾಮಗಾರಿ ಅನುಷ್ಠಾನಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕ ಸಲಹೆ ಸೂಚನೆ ತೆಗೆದುಕೊಳ್ಳಬೇಕು. ಆದರೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಇಂಥವರನ್ನ ಅಮಾನತಿನಲ್ಲಿಟ್ಟು ಸಿಬಿಐ ತನಿಖೆ ಮಾಡಬೇಕು ಎಂದು ಗುಡುಗಿದರು.