Advertisement

ಕಾಶಿಯ ಸುಪುತ್ರಿ ಶಿವಾಂಗಿ ರಫೆಲ್‌ನ ಮೊದಲ ಮಹಿಳಾ ಪೈಲಟ್‌

08:17 PM Sep 23, 2020 | Karthik A |

ಮಣಿಪಾಲ: ವಾರಣಸಿಯಲ್ಲಿ ಬೆಳೆದು ಬಿಎಚ್‌ಯು ಮತ್ತು ಎನ್‌ಸಿಸಿಯಲ್ಲೂ ಪಳಗಿದ ಶಿವಾಂಗಿ ಇನ್ನು ರಫೇಲ್‌ ಪೈಲಟ್‌. ಭಾರತೀಯ ವಾಯುಪಡೆಯ ರಾಫೇಲ್‌ ಸ್ಕ್ವಾಡ್ರನ್‌ನ ಮೊದಲ ಮಹಿಳಾ ಫೈಟರ್‌ ಪೈಲಟ್‌ ಆಗಿ ಶಿವಾನಿ ನೇಮಕವಾಗಿದ್ದಾರೆ.

Advertisement

ಶಿವಾಂಗಿ ಸಿಂಗ್‌ ಈ ಹಿಂದೆ ಮಿಗ್‌ -21 ವಿಮಾನವನ್ನು ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ಈಗ ಅವರು ರಫೇಲ್‌ ಅವರ 17 ಗೋಲ್ಡನ್‌ ಆ್ಯರೋ ಸ್ಕ್ವಾಡ್ರನ್‌ (17 Golden Arrow Squadron) ತಂಡವನ್ನು ಸೇರಿದ್ದಾರೆ.

ಶಿವಾಂಗಿಗೆ ಅಂಬಾಲಾ ವಾಯುಪಡೆ ನಿಲ್ದಾಣದಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ಶಿವಾಂಗಿ 2017ರಲ್ಲಿ ಭಾರತೀಯ ವಾಯುಪಡೆಗೆ ಸೇರಿದರು. ಅವರು ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರೊಂದಿಗೆ ಕೆಲಸ ಮಾಡಿದ್ದಾರೆ. ಶಿವಾಂಗಿ ಜುಲೈ 2016ರಲ್ಲಿ ಮೈಸೂರಿನಲ್ಲಿ ನಡೆದ ಕಾಮನ್‌ ಆಪ್ಟಿಟ್ಯೂಡ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. ಬಳಿಕ ಇಲ್ಲಿಂದಲೇ ಅವರು ವಾಯುಪಡೆಯ ತರಬೇತಿಯನ್ನು ಪ್ರಾರಂಭಿಸಿದ್ದಾರೆ.

ಶಿವಾಂಗಿಯ ಸೋದರ ಸಂಬಂಧಿ ಸುಧೀರ್‌ ಸಿಂಗ್‌ ಅವರು ಹೇಳುವಂತೆ ಶಿವಾಂಗಿ ತನ್ನ ಬಾಲ್ಯದಲ್ಲಿ ವಿಮಾನವನ್ನು ನೋಡುತ್ತಾ ಮೈಮರೆಯುತ್ತಿದ್ದರು. ಅಂದು ಇದನ್ನು ನಾವು ಸಾಮಾನ್ಯ ಎಂದು ಭಾವಿಸಿದ್ದೆವು. ಇದೀಗ ಅವಳ ಕಠಿನ ಶ್ರಮ ಮತ್ತು ಅದೃಷ್ಟದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಶಿವಾನಿ ಅವರು ಮನೆಯ ಹೊರಗೆ ಇದ್ದಿದ್ದೇ ಹೆಚ್ಚು. ತನ್ನ ಗೆಳೆಯರ ಬಳಗದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. ಅವರು ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟು ರಾತ್ರಿ 8 ಗಂಟೆಗೆ ಮನೆಗೆ ಬರುತ್ತಿದ್ದರು. ಇದನ್ನು ಜನರು ತುಂಬಾ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರು. ಇಂದು ಅದೇ ಜನರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.

Advertisement

ಬಿಎಚ್‌ಯುನಿಂದ ಪದವಿ ಪಡೆದಿರುವ ಇವರು ಉತ್ತಮ ಕ್ರೀಡಾಪಟುವಾಗಿದ್ದು, ಗಿಟಾರ್‌ ನುಡಿಸುವುದು ಅವರ ಹವ್ಯಾಸವಾಗಿದೆ. ವಿಶೇಷ ಎಂದರೆ ಶಿವಾಂಗಿಯ ಮನೆ ಕಂಟೋನ್ಮೆಂಟ್‌ ಪ್ರದೇಶದಲ್ಲಿದೆ. ಸೈನಿಕರನ್ನು ನೋಡುತ್ತಾ ಬೆಳೆದ ಅವರು ಬಾಲ್ಯದಿಂದಲೂ ದೇಶ ಸೇವೆಯ ಪ್ರಜ್ಞೆಯನ್ನು ಹೊಂದಿದ್ದರು ಎನ್ನುತ್ತಾರೆ ಮನೆಯವರು. 9ನೇ ತರಗತಿಯಲ್ಲಿರ ಬೇಕಾದರೆ ಏರ್‌ ಬೇಸ್‌ನ ಮ್ಯೂಸಿಯಂಗೆ ಭೇಟಿ ನೀಡಲಾಗಿತ್ತು. ಆ ಸಂದರ್ಭ ಅವಳು ನಾನು ಅದರಲ್ಲಿ ಹಾರಲು ಬಯಸುತ್ತೇನೆ ಎನ್ನುತ್ತಿದ್ದರು ಎಂದು ತಂದೆ ಕಾಮೇಶ್ವರ ಸಿಂಗ್‌ ಹೇಳಿದ್ದಾರೆ. ಶಿವಾನಿಯ ಅಜ್ಜ ಸೈನಿಕರಾಗಿದ್ದರು.

ಬಾಲ್ಯದಲ್ಲಿ ಶಿವಾಂಗಿ ಅವರನ್ನು ಅವರ ಅಮ್ಮ ಗೋಲ್ಡನ್‌ ಗರ್ಲ್‌ ಎಂದು ಕರೆಯುತ್ತಿದ್ದರಂತೆ. ಈ ಹೆಸರಿನಿಂದ ಕರೆದರೆ ಮಾತ್ರ ಅವರು ಖುಷಿ ಪಡುತ್ತಿದ್ದರು. ಶಿವಾಂಗಿ ಅವರು ವಿಮಾನಗಳಲ್ಲಿ ಬಹಳ ಆಸಕ್ತಿ ಹೊಂದಿದ್ದರು. ವಿಮಾನವನ್ನು ನೋಡಿ ಅವಳು ತುಂಬಾ ಸಂತೋಷ ಪಡುತ್ತಿದ್ದರು. ಪೈಲಟ್‌ ಉಡುಪನ್ನು ನೋಡುತ್ತಾ ಒಂದು ದಿನ ನಾನು ಅದನ್ನು ಧರಿಸುತ್ತೇನೆ’ ಎಂದು ಹೇಳುತ್ತಿದ್ದರು ಎಂದು ಅಮ್ಮ ಸೀಮಾ ಸಿಂಗ್‌  ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next