ವಿಜಯಪುರ : ರಾಜ್ಯದಲ್ಲಿ ಜನರು ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪದಂಥ ಸಂಕಷ್ಟದಲ್ಲಿದ್ದಾಗ ಕನ್ನಡಗಿರ ನೋವಿಗೆ ಸ್ಪಂದಿಸಲು ಆಗಮಿಸಿದ ಪ್ರಧಾನಿ ಈಗ ಯೋಗ ದಿನಾಚರಣೆ ನೆಪದಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಬಸವನಬಾಗೇವಾಡಿ ಶಾಸಕರೂ ಆಗಿರುವ ಮಾಜಿ ಸಚಿವ ಶಿವಾನಂದ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳು ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ರಾಜ್ಯದಲ್ಲಿ ಎರಡು ವರ್ಷ ಸಂಭವಿಸಿದ ಪ್ರವಾಹ ಉಂಟಾದ ಸಂದರ್ಭದಲ್ಲಿ ಜನರೆಲ್ಲ ಬೀದಿಗೆ ಬಿದ್ದಿದ್ದರು. ಅಂಥ ಸಂಕಷ್ಟದಲ್ಲಿ ರಾಜ್ಯಕ್ಕೆ ಬೇಟಿ ನೀಡುವ ಸೌಜನ್ಯದ ಸ್ಪಂದನೆ ತೋರಲಿಲ್ಲ. ಯೋಗ ಎಂಬುದು ಒಂದು ದಿನಕ್ಕೆ ಸೀಮಿತವಲ್ಲ, ನಿರಂತರ ನಡೆಯುವ ಪ್ರಕ್ತಿಯೆ ಎಂದರು.
ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಅಗ್ನಿಪಥ ಯೋಜನೆ ಘೋಷಿಸುವ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಆತುರದ ನಿರ್ಧಾರ ಕೈಗೊಂಡಿದ್ದಾರೆ. ಉದ್ಯೋಗ ಭದ್ರತೆ ಇಲ್ಲದ ಇಂಥ ಯೋಜನೆ ರೂಪಿಸುವ ಮುನ್ನ ಸರ್ಕಾರ ಕೊಂಚ ಯೋಜಿಸಬೇಕಿತ್ತು. ಈ ಉದ್ಯೋಗ ಭಧ್ರತೆಗಾಗಿಯೇ ಯುವಕರು ದೇಶದಲ್ಲಿ ಸದರಿ ಯೋಜನೆ ವಿರುದ್ಧ ಬಂಡೆದ್ದಿರುವುದು ಎಂದರು.
ಕನಿಷ್ಟ 20 ವರ್ಷ ಸೇವೆಗೆ ಅವಕಾಶ ಕಲ್ಪಿಸಿದಲ್ಲಿ ಯವಕರಿಗೆ ಬದುಕಿನ ಆಸರೆ ಆಗಲಿದೆ. ಕೇಂದ್ರ ಸರ್ಕಾರದಲ್ಲಿ 60 ಲಕ್ಷ ಹುದ್ದೆಗಳು ಖಾಲಿ ಇದ್ದು, ದೇಶದಲ್ಲಿ ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇದರಿಂದ ದೇಶದಲ್ಲಿ ಕಳೆದ 7-8 ವರ್ಷಗಳಿಂದ ನಿರುದ್ಯೋಗ ಸಮಸ್ಯೆಗೆ ಗಂಭೀರ ಸ್ವರೂಪದಲ್ಲಿ ಬೆಳೆಯುತ್ತಿದ್ದು, ಸರ್ಕಾರ ಈ ಗಂಭೀರ ವಿಷಯದಲ್ಲಿ ಕಾಳಜಿ ವಹಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಯಾವುದೇ ಸರ್ಕಾರವಿರಲಿ ಸಾಲ ಪಡೆದು ಸರ್ಕಾರ ನಡೆಸುವುದು ಸಾಧನೆಯಲ್ಲ. ರಾಜ್ಯ ಸರ್ಕಾರ 5 ಲಕ್ಷ ಕೋಟಿ ಸಾಲ ಮಾಡಿದ್ದು, ಕೇಂದ್ರ ಸರ್ಕಾರ ಕೂಡ 60 ಲಕ್ಷ ಕೋಟಿ ಸಾಲ ಮಾಡಿದೆ. ಇದರಿಂದ ಮುಂದಿನ ¨ಭವಿಷ್ಯ ಕಗ್ಗತ್ತಿನಲ್ಲಿ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.