ಸಾಗರ: ಮೇ 14 ರಂದು ಉಡುಪಿಯಲ್ಲಿ ನಡೆಯುವ ರಾಜ್ಯಮಟ್ಟದ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ ನಾಡಿನ ಬಹುತ್ವ ಕಾಪಾಡುವಲ್ಲಿ ಪ್ರಮುಖಪಾತ್ರ ವಹಿಸಲಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತ್ವ ಭಾರತ ನಿರ್ಮಾಣ ಮತ್ತು ಸೌಹಾರ್ದ ಪರಂಪರೆ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸಹಬಾಳ್ವೆ ಉಡುಪಿ ಮತ್ತು ಕರ್ನಾಟಕದ ಸಮಸ್ತ ಸೌಹಾರ್ದಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಸಮಾವೇಶ ನಡೆಯಲಿದೆ ಎಂದರು.
ಮಧ್ಯಾಹ್ನ 2 ಕ್ಕೆ ಉಡುಪಿಯ ಅಜ್ಜರಕಾಡು ಹುತಾತ್ಮ ಚೌಕದಿಂದ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಗುತ್ತದೆ. ಸಂಜೆ 4 ಕ್ಕೆ ಉಡುಪಿ ಕ್ರಿಶ್ಚಿಯನ್ ಶಾಲಾ ಮೈದಾನದಲ್ಲಿ ಸಹಬಾಳ್ವೆ ಸಮಾವೇಶ ನಡೆಯಲಿದ್ದು, ಎಂ.ಡಿ.ಪಲ್ಲವಿ ಮತ್ತು ತಂಡದಿಂದ ಸೌಹಾರ್ದ ಗೀತೆ ಗಾಯನ ನಡೆಯಲಿದೆ. ನಂತರ ಸರ್ವಧರ್ಮಗಳ ಗುರುಗಳಿಂದ ಸಮಾವೇಶಕ್ಕೆ ಚಾಲನೆ ನೀಡಲಾಗುತ್ತದೆ. ಶ್ರೀ ಗುರುಬಸವ ಪಟ್ಟದೇವರು, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್, ಕ್ಯಾಥೋಲಿಕ್ ಚರ್ಚ್ ಬೀಷಪ್ ವರ್ಗೀಸ್ ಮಾರ್ ಮಕರಿಯೋಸ್, ಡಾ. ಮಾತೆ ಬಸವಾಂಜಲಿ ದೇವಿ ಸೇರಿದಂತೆ ಬೇರೆಬೇರೆ ಧರ್ಮದ ಧರ್ಮಗುರುಗಳು ಸಮಾವೇಶ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ವಿಶೇಷ ಅತಿಥಿಗಳಾಗಿ ಯೋಗೇಂದ್ರ ಯಾದವ್, ಡಾ. ರೊನಾಲ್ಡ್ ಕೊಲಾಸೋ, ಶಶಿಕಾಂತ್ ಸೆಂಥಿಲ್, ಮಾವಳ್ಳಿ ಶಂಕರ್, ಆರ್. ಮೋಹನ್ ರಾವ್, ಎಚ್.ಆರ್.ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಕೆ.ನೀಲಾ, ಡಾ. ಬೆಳಗಾಮಿ ಮಹ್ಮದ್ ಸಅದ್, ಸಬೀಹ ಫಾತಿಮಾ, ನಜ್ಮಾ ಚಿಕ್ಕನೇರಳೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಸಾಗರದಿಂದ ಉಡುಪಿ ಸಮಾವೇಶಕ್ಕೆ ಬೆಳಿಗ್ಗೆ 9ಕ್ಕೆ ಬಸ್ ಮೂಲಕ ಹೊರಡಲಾಗುತ್ತದೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮೊ. 9663653263, 9448082158 ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲ್ಲಿ ಮಂಜುನಾಥ ಬಳಸಗೋಡು, ರಮೇಶ್ ಐಗಿನಬೈಲು, ಮೋಹನ್ ಮೂರ್ತಿ ಎಸ್., ಫೆಡ್ರಿಕ್ ಸಾಲ್ಡಾನಾ, ಎಜಾಜ್ ಭಾಷಾ, ಸೈಯದ್ ಸುಹೇಲ್, ಆರೀಫ್ ಸಾಗರ್, ಶಶಿಕಾಂತ್ ಎಂ.ಎಸ್. ಹಾಜರಿದ್ದರು.