Advertisement

ವರುಣನ ಅಬ್ಬರ; ದ್ವೀಪವಾದ ಶಿವಮೊಗ್ಗ!

12:03 PM Aug 11, 2019 | Naveen |

ಶಿವಮೊಗ್ಗ: ನಾಲ್ಕು ದಿನಗಳಿಂದ ಅಬ್ಬರಿಸಿದ ವರುಣದೇವ ಇಡೀ ಶಿವಮೊಗ್ಗವನ್ನೇ ದ್ವೀಪ ಮಾಡಿದ್ದಾನೆ. ಸೋಮವಾರದಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು ನಗರದ 10ಕ್ಕೂ ಹೆಚ್ಚು ಬಡಾವಣೆಗಳು ಜಲಾವೃತಗೊಂಡಿವೆ. ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳು ನೀರಿನಲ್ಲಿ ಮುಳುಗಿರುವುದರಿಂದ ಹೊರ ಹೋಗುವ, ಒಳಬರುವ ಅನೇಕ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.

Advertisement

ನಗರದ ಸೀಗೆಹಟ್ಟಿ, ವಿದ್ಯಾನಗರ, ಹರಕೆರೆ, ಇಮಾಮ್‌ ಬಡಾ, ಹೊಸಮನೆ, ಕುಂಬಾರ್‌ ಗುಂಡಿ, ವೆಂಕಟೇಶ್‌ ನಗರ, ಬಾಪೂಜಿನಗರ, ಲಷ್ಕರ್‌ ಮೊಹಲಾ, ಟ್ಯಾಂಕ್‌ ಮೊಹಲ್ಲಾ, ಗೋಪಾಳಕ್ಕೆ ಹೊಂದಿಕೊಂಡ ಸ್ಲಂ ಏರಿಯಾಗಳು ಸೇರಿದಂತೆ ಕೆ.ಆರ್‌. ಪುರಂ, ಎನ್‌.ಟಿ. ರಸ್ತೆ, ಶೇಷಾದ್ರಿ ಪುರಂ ಭಾಗಗಳಲ್ಲಿ ನೀರು ಮಿತಿ ಮೀರಿ ನಿಂತಿದೆ.

ಜನನಿಬಿಡ ಕೋಟೆ ರಸ್ತೆಯಲ್ಲಿಯೇ ನೀರು ಹೊಳೆಗೆ ಸೇರದೆ ಅಲ್ಲಿನ ಒತ್ತಡದಿಂದ ಎಲ್ಲೆಲ್ಲೂ ಜಲಾವೃತವಾಗಿ ಬದುಕುವುದು ಕಷ್ಟವಾಗಿದೆ. ಶಿವಮೊಗ್ಗ ನಗರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಹಶೀಲ್ದಾರ್‌ ಬಿ.ಎನ್‌. ಗಿರೀಶ್‌, ನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ನೇತೃತ್ವದ ತಂಡಗಳು ಹಗಲು ರಾತ್ರಿಯೆನ್ನದೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುತ್ತಿವೆ.

ಭದ್ರಾವತಿಯಿಂದ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ತುಂಗೆಯ ನೀರು ಇಲ್ಲಿ ಹರಿಯುತ್ತಿದೆ. ಈ ರಸ್ತೆಯ ಸಂಚಾರವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗ ಉಳಿದಿರುವ ಬೈಪಾಸ್‌ ಮೂಲಕ ಶಿವಮೊಗ್ಗ ನಗರಕ್ಕೆ ಆಗಮಿಸಬಹುದು. ಹೊಳೆಹೊನ್ನೂರು- ಶಿವಮೊಗ್ಗ ರಸ್ತೆಯ ಪಿಳ್ಳಂಗಿರಿ ಬಳಿ ಮುಳುಗಡೆಯಾಗಿರುವುದರಿಂದ ಆ ರಸ್ತೆಯನ್ನು ಬಂದ್‌ ಮಾಡಲಾಗಿದೆ. ಶಿವಮೊಗ್ಗ- ಆಯನೂರು ರಸ್ತೆಯಲ್ಲಿ ಬೃಹತ್‌ ಗಾತ್ರವ ಮರವೊಂದು ಉರುಳಿದ ಪರಿಣಾಮ 10ಗಂಟೆವರೆಗೂ ಸಂಚಾರಕ್ಕೆ ತೊಡಕಾಗಿತ್ತು. ಕುವೆಂಪು ವಿವಿ, ಕೊಪ್ಪ, ಎನ್‌.ಆರ್‌. ಪುರ – ಶಿವಮೊಗ್ಗ ಸಂಪರ್ಕಿಸುವ ರಸ್ತೆಯಲ್ಲಿ ಲಕ್ಕಿನಕೊಪ್ಪ ಬಳಿ ಕೆರೆ ನೀರಿನ ಸೆಳೆತಕ್ಕೆ ರಸ್ತೆ ಕೊಚ್ಚಿ ಹೋಗಿದ್ದರಿಂದ ಆ ರಸ್ತೆ ಕೂಡ ಬಂದ್‌ ಆಗಿತ್ತು. ಎಂಆರ್‌ಎಸ್‌ ಸರ್ಕಲ್ನಿಂದ ಹೊಳೆ ಬಸ್‌ ನಿಲ್ದಾಣದವರೆಗಿನ ರಸ್ತೆಯಲ್ಲಿ ನೀರು ಆವರಿಸಿದ್ದರಿಂದ ಈ ರಸ್ತೆಯನ್ನೂ ಬಂದ್‌ ಮಾಡಲಾಗಿತ್ತು. ಈ ರಸ್ತೆಯಲ್ಲಿ ವಾಹನಗಳು ಓಡಾಡಲು ಅವಕಾಶ ಇದ್ದರೂ ಜನದಟ್ಟಣೆಯಿಂದ ಸಂತ್ರಸ್ತರ ರಕ್ಷಣೆಗೆ ತೊಡಕಾಗಿತ್ತು. ಆ ಕಾರಣಕ್ಕೆ ರಸ್ತೆಯನ್ನೂ ಬಂದ್‌ ಮಾಡಲಾಗಿತ್ತು.

ಸೇತುವೆಗೆ ಭದ್ರತೆ: ಬ್ರಿಟಿಷರ ಕಾಲದ 157 ವರ್ಷ ಹಳೆಯ ಸೇತುವೆ ಬಳಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಈ ಸೇತುವೆಯನ್ನೂ ಬಂದ್‌ ಮಾಡಲಾಗಿದೆ. ಬೆಂಗಳೂರಿನ ತಜ್ಞರ ತಂಡ ಬಂದು ಪರಿಶೀಲನೆ ನಡೆಸಲಿದೆ. ತುಂಗೆಯಲ್ಲಿ 31 ಅಡಿ ಎತ್ತರದಷ್ಟು 1.15 ಲಕ್ಷ ಕ್ಯೂಸೆಕ್‌ ನೀರು ಹೊರಹೋಗುತ್ತಿರುವುದರಿಂದ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ನದಿ ಪಾತ್ರದ ಎಲ್ಲ ಬಡಾವಣೆಗಳಿಗೂ ಬಹುತೇಕ ನೀರು ನುಗ್ಗಿದೆ. ಶಿವಮೊಗ್ಗ- ಹೊನ್ನಾಳಿ ಸಂಪರ್ಕ ಕಲ್ಪಿಸುವ ಚೀಲೂರು ಬಳಿ ತುಂಗಾ-ಭದ್ರಾ ನದಿಯ ನೀರು ಯಥೇಚ್ಛವಾಗಿ ಹರಿದಿದ್ದು, ಇಡೀ ಸಂಚಾರ ವ್ಯವಸ್ಥೆ ಬಂದ್‌ ಆಗಿದೆ.

Advertisement

ಈ ಮೊದಲು ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಹನಸವಾಡಿ ಬಳಿಯ ರಸ್ತೆಯಲ್ಲಿ ನೀರು ನುಗ್ಗಿದ್ದರಿಂದ ಸಂಚಾರ ಕಷ್ಟವಾಗಿತ್ತು. ಶಿವಮೊಗ್ಗದ ವಿನೋಬನಗರ ಬಿಟ್ಟರೆ ಉಳಿದೆಲ್ಲಾ ವಾರ್ಡ್‌ಗಳಲ್ಲಿ ನೀರಿ ನ ಪ್ರಮಾಣ ಮಿತಿಮೀರಿದೆ. ದಾವಣಗೆರೆ, ಹಾವೇರಿಯಿಂದ ರಕ್ಷಣಾ ತಂಡಗಳು ಆಗಮಿಸಿದ್ದು ಸಂತ್ರಸ್ತರ ನೆರವಿಗೆ ಧಾವಿಸಿವೆ.

ರೈಲು ನಿಲುಗಡೆ: ಅತಿಯಾದ ಮಳೆಯಿಂದ ತಾಳಗುಪ್ಪ- ಶಿವಮೊಗ್ಗ ಮೈಸೂರು- ತಾಳಗುಪ್ಪ ರೈಲು ಸಂಚಾರವನ್ನು ಶನಿವಾರ ರದ್ದುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next