ಶಿವಮೊಗ್ಗ: ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಲಕ್ಷಾಂತರ ನಕಲಿ ಕಾರ್ಡ್‌ಗಳನ್ನು ಪತ್ತೆ ಹಚ್ಚಿದ ಸರಕಾರ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದೆ. ಕುಟುಂಬದಲ್ಲಿ ಮೃತಪಟ್ಟವರು, ಕುಟುಂಬ ಬಿಟ್ಟು ವಾಸವಾಗಿರುವವರ ಹೆಸರಲ್ಲಿ ರೇಷನ್ ಪಡೆಯುವವರ ಮೇಲೆ ಸರಕಾರ ಹದ್ದಿನ ಕಣ್ಣಿಟ್ಟಿದ್ದು ಇನ್ನೆರಡು ತಿಂಗಳಲ್ಲಿ ಅನಧಿಕೃತ ಸದಸ್ಯರು ರೇಷನ್ ಕಾರ್ಡ್‌ನಿಂದ ಡಿಲೀಟ್ ಆಗಲಿದ್ದಾರೆ.
Advertisement
ಕಾರ್ಡ್ ಬೇರೆಯವರಿಗೆ ವರ್ಗಾಯಿಸಿರುವುದು, ಒಂದು ಕುಟುಂಬಸ್ಥರ ಹೆಸರಲ್ಲಿ ಬೇರೆಯವರು ರೇಷನ್ ಪಡೆಯುತ್ತಿರುವುದು ಕುಟುಂಬದೊಂದಿಗೆ ವಾಸವಿಲ್ಲದವರ ಹೆಸರು ಕಾರ್ಡಿನಲ್ಲಿ ಇರುವುದು ಹೀಗೆ ನಾನಾ ಕಾರಣಗಳಿಂದ ಪಡಿತರ ದುರುಪಯೋಗವಾಗುತ್ತಿತ್ತು. ಈ ರೀತಿಯ ಅನೇಕ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲೆಂದೇ ಸರಕಾರ ಆಧಾರ್ ಕಾರ್ಡ್ ದೃಢೀಕರಣಕ್ಕೆ (ಇ-ಕೆವೈಸಿ) ಮುಂದಾಗಿದೆ.
Related Articles
Advertisement
ಉಚಿತ ದೃಢೀಕರಣ: ದೃಢೀಕರಣಗೊಳಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸ್ಪಷ್ಟಪಡಿಸಿದೆ. ಪ್ರತಿ ತಿಂಗಳ ಪಡಿತರ ಪಡೆಯುವ ವೇಳೆ ಈಗಾಗಲೇ ಹಲವು ಕಡೆ ಬಯೋಮೆಟ್ರಿಕ್ ಪಡೆಯಲು 10, 20ರೂ. ವಸೂಲಿ ಮಾಡುತ್ತಿರುವ ಆರೋಪಗಳಿವೆ. ಆರೋಪಗಳ ನಡುವೆಯೂ ಸರಕಾರ ದೊಡ್ಡ ಮಟ್ಟದ ಕಾರ್ಯಕ್ಕೆ ಕೈ ಹಾಕಿದ್ದು ಯಾವ ರೀತಿಯ ಯಶಸ್ಸು ಸಿಗಲಿದೆ ಕಾದು ನೋಡಬೇಕಿದೆ.
ಪಡಿತರದಾರರಿಂದ ಯಾವುದೇ ಹಣ ಪಡೆಯಬಾರದೆಂದು ಹೇಳಿರುವ ಸರಕಾರ ಪ್ರತಿ ದೃಢೀಕರಣಕ್ಕೆ ಪಡಿತರ ಅಂಗಡಿ ಮಾಲೀಕರಿಗೆ ಶುಲ್ಕ ನಿಗದಿ ಮಾಡಿದೆ. ಪ್ರತಿ ಫಲಾನುಭವಿಯ ದೃಢೀಕರಣಕ್ಕೆ 5 ರೂ.ನಂತೆ ಒಂದು ಕುಟುಂಬಕ್ಕೆ ಗರಿಷ್ಠ 20 ರೂ./ ನೀಡಲು ಸರಕಾರ ಸೂಚಿಸಿದೆ.
60 ದಿನ ತೆಗೆದಿರಬೇಕು: ಪಡಿತರ ಅಂಗಡಿ ಮಾಲೀಕರು ಆಧಾರ್ ಕಾರ್ಡ್ ದೃಢೀಕರಣಕ್ಕಾಗಿ 60 ದಿನವೂ ಲಭ್ಯವಿರುವಂತೆ ಇಲಾಖೆ ಖಡಕ್ ಸೂಚನೆ ನೀಡಿದೆ. ಸರಕಾರಿ ರಜೆ ಹಾಗೂ ಮಂಗಳವಾರದಂದು ಮಾತ್ರ ವಿನಾಯಿತಿ ನೀಡಿದ್ದು, ಉಳಿದಂತೆ ಎಲ್ಲ ದಿನವೂ ಲಭ್ಯವಿರಬೇಕು. ಪ್ರತಿ ದಿನ ಪ್ರಗತಿ ಪರಿಶೀಲನೆಗೆ ಸಿಬ್ಬಂದಿ ನೇಮಿಸಲಾಗಿದ್ದು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
4 ಕೋಟಿ ಪಡಿತದಾರರು: ರಾಜ್ಯದಲ್ಲಿ 12462801 ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳಿದ್ದು, 41700813 ಮಂದಿ ಫಲಾನುಭವಿಗಳಿದ್ದಾರೆ. ಇದರಲ್ಲಿ ಶೇ.99ರಷ್ಟು ಮಂದಿಯ ಆಧಾರ್ ದಾಖಲೆಗಳು ಇಲಾಖೆ ಬಳಿ ಇವೆ. ಶೇ.17.07 ಮಂದಿಯ ಆಧಾರ್ ದೃಢೀಕರಣ ಆಗಿದ್ದು, ಉಳಿದ ಫಲಾನುಭವಿಗಳ ದೃಢೀಕರಣಕ್ಕೆ (ಇಕೆವೈಸಿ) ಸರಕಾರ ಸೂಚಿಸಿದೆ.
ಮರಣ, ಕುಟುಂಬದೊಂದಿಗೆ ವಾಸವಿಲ್ಲದ ಎಷ್ಟೋ ಮಂದಿ ಇದ್ದು, ಅವರು ಈಗಲೂ ಪಡಿತರ ಪಡೆಯುತ್ತಿದ್ದಾರೆ. ಜೂನ್ 1ರಿಂದಲೇ ದೃಢೀಕರಣಕ್ಕೆ ಚಾಲನೆ ನೀಡಲಾಗಿದ್ದು, ಜು. 31ರವರೆಗೆ ಈ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಈ ಎರಡೂ ತಿಂಗಳು ಪಡಿತರ ಪಡೆಯವುದಕ್ಕೆ ತೊಂದರೆ ಇಲ್ಲ. 60 ದಿನಗಳ ಅವಧಿಯಲ್ಲಿ ಆಧಾರ್ ದೃಢೀಕರಣಗೊಳ್ಳದ ಫಲಾನುಭವಿಯ ರೇಷನ್ ತಡೆಹಿಡಿಯಲಾಗುವುದು. ಅವರು ದೃಢೀಕರಣ ಕೊಡುವವರೆಗೂ ರೇಷನ್ ಬರುವುದಿಲ್ಲ. ರೇಷನ್ ಅಂಗಡಿಯವರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಯಾವುದೇ ಲೋಪವಾಗದಂತೆ ಕ್ರಮ ವಹಿಸಲಾಗಿದೆ. ಫಲಾನುಭವಿಗಳು ಯಾವುದೇ ಹಣ ನೀಡುವಂತಿಲ್ಲ. ಹಣ ವಸೂಲಿ ಮಾಡುವುದು ಕಂಡು ಬಂದರೆ ಅಂತವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.•ಎ.ಟಿ. ಜಯಪ್ಪ,
ಜಂಟಿ ನಿರ್ದೇಶಕ.