Advertisement

ಪ್ರತಿಭೆ ಬೆಳಗಲು ಸೂಕ್ತ ವೇದಿಕೆ ಅಗತ್ಯ

04:26 PM May 23, 2019 | Naveen |

ಶಿವಮೊಗ್ಗ: ಪುಟ್ಟ ಮಗು ಅತ್ಯುತ್ತಮವಾಗಿ ಹಾಡಿದ್ದನ್ನು ಕೇಳಿದಾಗ ಮನಸ್ಸು ಉಲ್ಲಾಸಗೊಂಡಿತು. ಈ ಕಾರ್ಯಕ್ರಮದ ಅಗತ್ಯ ಎಷ್ಟಿದೆ ಎಂಬುದನ್ನು ಆ ಹಾಡುಗಳು ಸಾರಿ ಹೇಳುತ್ತಿವೆ. ಈ ವಾತಾವರಣ ಅದರ ಸಾರ್ಥಕತೆಯನ್ನು ಹೇಳುತ್ತದೆ. ಪ್ರತಿಭೆ ಬೆಳಗಲು ಈ ವೇದಿಕೆ ಮಹತ್ವ ಪಡೆದಿದೆ ಎಂದು ಜಿಲ್ಲಾ ಎಸ್‌.ಎ.ಡಿ.ಎ. ಅಧ್ಯಕ್ಷ ಪ್ರಭಾಕರ್‌ ರಾವ್‌ ಆಮ್ಟೆ ಅವರು ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ನಗರದ ಶಂಕರಮಠ ರಸ್ತೆಯಲ್ಲಿನ ಆವರಣದಲ್ಲಿ ಆಯೋಜಿಸಿದ್ದ 163ನೇ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಚಲನಚಿತ್ರ ನಟ, ಜಾದೂಗಾರ ಓಂಗಣೇಶ್‌ ಮಾತನಾಡಿ, ದೇಶಕ್ಕೆ ಅತ್ಯಂತ ಅಗತ್ಯವಾದ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ. ಸಮಾಜ ತಪ್ಪಿ ಹೋಗದಂತೆ ಜಾಗೃತಗೊಳಿಸುವ ಕೆಲಸ ಸಾಹಿತ್ಯ ಹುಣ್ಣಿಮೆ ಮಾಡುತ್ತಿದೆ. ವ್ಯವಹಾರಿಕ ಚಿಂತನೆಯಲ್ಲಿ ಸಂವೇದನೆ ಕಳೆದುಕೊಂಡ ಸ್ಥಿತಿಯಲ್ಲಿ ಅದನ್ನು ಅನುಭವಿಸುವ ವೇದನೆ ಮಾತ್ರ ಉಳಿದಿದೆ. ಉದ್ಯಮ ಅಭಿವೃದ್ಧಿ ಮಾಡುತ್ತದೆ. ಅನೇಕ ಸಂಸಾರಗಳು ಬದುಕುತ್ತವೆ. ಉದ್ಯಮ ವೇದನೆಯಾಗಿದೆ. ಆ ಬದುಕಿಗೆ ಸಂವೇದನೆ ಶೀಲ ಬದುಕು ಕಟ್ಟಿಕೊಡುವುದು ಈ ಕಾರ್ಯಕ್ರಮದ ಹೆಗ್ಗಳಿಕೆ ಎಂದು ವಿವರಿಸಿದರು.

ಸಾಹಿತ್ಯ ನಂಜನ್ನು ಕಾರೋ ಕೆಲಸವಲ್ಲ. ಬದುಕನ್ನು ಗೆಲ್ಲುವ ಕಾರ್ಯದೊಂದಿಗೆ, ಮನಸ್ಸಿಗೆ ಚಿಂತನೆಯ ಆಹಾರ ಒದಗಿಸುವ ಕೆಲಸ ಆಗುತ್ತದೆ. ಒಳಗಣ್ಣಿಗೆ ಆಹಾರ ಕೊಡುವ ಕೆಲಸ ಸಾಹಿತ್ಯದ ಸಾಂಗತ್ಯದಿಂದ ಬರುತ್ತದೆ ಎಂದು ವಿವರಿಸಿದರು.

ಶೃತಿ ಮೋಟಾರ್‌ ಸಂಸ್ಥೆಯ ಮಾಲೀಕ ಡಿ. ಟಿ. ಪರಮೇಶ್‌ ಅವರು ಮಾತನಾಡಿ, ಉತ್ತಮ ಭಾವನೆಗಳನ್ನು ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು. ಅದಕ್ಕೆ ಬೇಕಾದ ವಾತಾವರಣ ಸೃಷ್ಟಿಸಲು ಎಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.

Advertisement

ಹಾಸ್ಯ ಕಾರ್ಯಕ್ರಮ ನೀಡಿದ ನಾಡಿನ ಹೆಸರಾಂತ ಕಲಾವಿದ ರಿಚರ್ಡ ಲೂಯಿಸ್‌ ಮಾತನಾಡಿ, ಅನ್ನ ಮತ್ತು ಬುದ್ಧಿ ಎರಡನ್ನು ಕುರಿತು ಜಾಗೃತಿ ಮಾಡುವ ಕಾರ್ಯಕ್ರಮ. ಸಾಹಿತ್ಯದ ಕೆಲಸ, ಪುಸ್ತಕ ಮುದ್ರಣ ಇವೆಲ್ಲ ನಷ್ಟದ ಕೆಲಸ. ಆದರೂ ನಿರಂತರವಾಗಿ 163 ತಿಂಗಳು ನಡೆದು ಬಂದ ಈ ಕಾರ್ಯಕ್ರಮದ ಮಹತ್ವ, ಅದರ ಹಿಂದಿರುವ ಪರಿಶ್ರಮವನ್ನು ಮೆಚ್ಚಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಟ್ಟೆಹಕ್ಲು ವರ್ಷಿಣಿ ಪಿ. ಭಟ್ ಅವರ ತಂಡದವರು ಕನ್ನಡ ಗೀತೆಗಳನ್ನು ಹಾಡಿದರು. ಹಾಡಿನ ನಂತರ ನೂತನ ಟ್ರ್ಯಾಕ್ಟರ್‌ 9500 ಸ್ಮಾಲ್ ಸೀರಿಯಸ್‌ ಭಾರತದ ಮೊದಲ ಬುದ್ಧಿಶಾಲಿಯಾಗಿ ಕೆಲಸ ಮಾಡುವ ಟ್ರ್ಯಾಕ್ಟರ್‌ ಲೋಕಾರ್ಪಣೆ ಕಾರ್ಯ ನಡೆಯಿತು. ಕಂಪನಿಯ ಮಾರುಕಟ್ಟೆ ವ್ಯವಸ್ಥಾಪಕ ರಾಜಭಕ್ಷಿ ಹೊಸವಾಹನದ ವಿಚಾರವಾಗಿ ಮಾಹಿತಿ ನೀಡಿದರು.

ಓಂಗಣೇಶ್‌ ಸಮೂಹ ಸಂಸ್ಥೆಯ ಸಿ.ಇ.ಒ. ಹರ್ಷಾ ಕಾಮತ್‌ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಜಿ. ಎಫ್‌. ಕುಟ್ರಿ ಕಥೆ ಹೇಳಿದರು. ಗಾಯಕಿಯರಾದ ಪ್ರತಿಭಾ ನಾಗರಾಜ್‌, ಲಕ್ಷ್ಮೀ ಮಹೇಶ್‌ ರೈತಗೀತೆ ಹಾಡಿದರು. ಉದ್ಯಮಿ, ಸಪ್ತಸ್ವರ ಸಂಗೀತಸಭಾದ ಗೌರವಾಧ್ಯಕ್ಷ ಭಾಸ್ಕರ್‌ ಜಿ. ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಓಂ ಗಣೇಶ್‌ ಸಂಸ್ಥೆಯ ಪಾಲುದಾರ ವಿಶ್ವಾಸ್‌ ಕಾಮತ್‌ ವಂದಿಸಿದರು. ಭಾವನಾ ಆನವಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಡಿ. ಗಣೇಶ್‌, ಸಂಘಟನಾ ಕಾರ್ಯದರ್ಶಿ ಶಿವಪ್ಪ ಮೇಸ್ಟ್ರೆ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next