ಶಿವಮೊಗ್ಗ: ಪತಂಗಗಳು ತಿಳಿದು ಸುಡುವ ದೀಪದ ಜ್ವಾಲೆಗೆ ಬಲಿಯಾಗುವಂತೆ ಜನರು ತಂಬಾಕು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಅರಿತು ಅವುಗಳ ದಾಸರಾಗಿ ತಮ್ಮ ಅಮೂಲ್ಯ ಬದುಕನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಎ. ದಯಾನಂದ್ ಬೇಸರ ವ್ಯಕ್ತಪಡಿಸಿದರು.
ನಗರದ ಕೋರ್ಟ್ ಆವರಣದಲ್ಲಿ ‘ವಿಶ್ವ ತಂಬಾಕು ರಹಿತ ದಿನಾಚರಣೆ’ ಅಂಗವಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಆಯೋಜಿಸಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಂಬಾಕಿನ ಉತ್ಪನ್ನಗಳಿಗೆ ಜನರು ದಾಸರಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಜನತೆ ತಂಬಾಕಿನಿಂದ ಮುಕ್ತರಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ತಂಬಾಕಿನಲ್ಲಿ ಅನೇಕ ರಾಸಾಯನಿಕ ಅಂಶಗಳಿದ್ದು ಅವುಗಳಲ್ಲಿ ಬಹುತೇಕ ಕ್ಯಾನ್ಸರ್ ಕಾರಕಗಳಾಗಿವೆ ಮತ್ತು ಅತಿ ಹೆಚ್ಚು ಪ್ರಮಾಣದ ಕ್ಯಾನ್ಸರ್ ರೋಗಕ್ಕೆ ಕಾರಣ ಧೂಮಪಾನ, ತಂಬಾಕು ಜಗಿಯುವುದು, ನಶ್ಯೆಪುಡಿ ಹಾಗೂ ತಂಬಾಕಿನ ಉತ್ಪನ್ನಗಳ ಬಳಕೆಯೆ ಆಗಿದೆ. ಅದ್ದರಿಂದ ಜನರು ದುಶ್ಚಟವನ್ನು ಬಿಟ್ಟು ಸಂಗೀತ, ಸಾಹಿತ್ಯ, ಕಲೆ, ಕ್ರೀಡೆ, ದ್ಯಾನ ಇನ್ನಿತರೆ ಉತ್ತಮ ಹವ್ಯಾಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಅಪ್ರಾಪ್ತರಿಗೆ ತಂಬಾಕಿನ ಉತ್ಪನ್ನ ಮಾರಾಟ ಹಾಗೂ ಅಪ್ರಾಪ್ತರಿಂದ ತಂಬಾಕಿನ ಮಾರಾಟ ಮಾಡಿಸಬಾರದು. ಶಾಲೆಗಳಿಂದ ನಿಗದಿತ ಅಂತರದಲ್ಲಿ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಹಾಗೂ ಈ ವಿಷಯದಲ್ಲಿ ಕಾನೂನು ಬಾಹಿರ ವಿಚಾರಗಳು ತಿಳಿದು ಬಂದಲ್ಲಿ ಅಧಿಕಾರಿಗಳು ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರೊಂದಿಗೆ ಇನ್ನಿತರೆ ಕ್ರಮಗಳನ್ನು ಸರಿಯಾಗಿ ಪಾಲಿಸುವುದರ ಮೂಲಕ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಜಾಥಾದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ, ಜಿಪಂ ಸಿಇಒ ಕೆ. ಶಿವರಾಮೇಗೌಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಸರಸ್ವತಿ ಕೆ. ಎನ್., ಜಿಲ್ಲಾ ರಕ್ಷಣಾಧಿಕಾರಿ ಎಂ. ಅಶ್ವಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಶ್ ಸುರಗೀಹಳ್ಳಿ ಮುಂತಾದ ಗಣ್ಯರು ಮತ್ತು ಸುಬ್ಬಯ್ಯ ಹಾಗೂ ಶರಾವತಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.