Advertisement

3.5 ಲಕ್ಷ ಜನರಿಂದ 6 ಲಕ್ಷ ಜನರ ನೀರು ಬಳಕೆ!

12:35 PM Jun 03, 2019 | Naveen |

ಶಿವಮೊಗ್ಗ: ಮಹಾನಗರಗಳಲ್ಲಿ ವಾರಕ್ಕೆ ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ಪ್ರತಿ ದಿನ ನೀರು ಸಿಗುತ್ತಿದ್ದು, ಜನರಿಗೆ ಈ ವರೆಗೂ ನೀರಿನ ಸಮಸ್ಯೆ ಕಾಡಿಲ್ಲ. ಆದರೆ ನೀರಿನ ಬಳಕೆ ಮತ್ತು ಉಳಿತಾಯದಲ್ಲಿ ಮಾತ್ರ ಇಲ್ಲಿನ ಜನ ತುಂಬಾ ಹಿಂದುಳಿದಿದ್ದು, ರಾಜ್ಯದ ಬೇರ್ಯಾವ ಮಹಾನಗರಗಳು ಬಳಸದಷ್ಟು ನೀರನ್ನು ಇಲ್ಲಿನ ಜನ ಬಳಸುತ್ತಿದ್ದಾರೆ. ಅತಿ ಹೆಚ್ಚು ನೀರು ಪೋಲು ಮಾಡುವ ನಗರಗಳಲ್ಲಿ ಶಿವಮೊಗ್ಗ ಮುಂದಿದೆ.

Advertisement

ರಾಜಧಾನಿ ಬೆಂಗಳೂರು, ದೊಡ್ಡ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಹಾನಗರಗಳ ಜನ ಎರಡರಿಂದ ಐದು ದಿನಗಳಿಗೊಮ್ಮೆ ನೀರು ಪಡೆಯುತ್ತಿದ್ದರೆ ಮಲೆನಾಡಿನ ಹೆಬ್ಟಾಗಿಲು ಶಿವಮೊಗ್ಗ ನಗರದ ಜನರಿಗೆ ಮಾತ್ರ ಪ್ರತಿದಿನವೂ ನೀರು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿ ಪ್ರತಿದಿನವೂ ಬಳಕೆಯಾಗುತ್ತಿರುವ ನೀರು ಶಿವಮೊಗ್ಗದಂಥಹ ಮತ್ತೂಂದು ನಗರಕ್ಕೆ ಪೂರೈಕೆ ಮಾಡಬಹುದು ಎನ್ನುತ್ತಾರೆ ಅಧಿಕಾರಿಗಳು.

ಒಬ್ಬ ವ್ಯಕ್ತಿಗೆ ಎಷ್ಟು ನೀರು?: ದಿನನಿತ್ಯ ಬಳಕೆ ಮಾಡುವ ನೀರಿನ ಪ್ರಮಾಣಕ್ಕೆ ಯಾವುದೇ ಮಾನದಂಡ ಇಲ್ಲವಾದರೂ ತಜ್ಞರು ಹೇಳುವ ಪ್ರಕಾರ ಗ್ರಾಮಾಂತರ ಪ್ರದೇಶದಲ್ಲಿ ಒಬ್ಬ ವ್ಯಕ್ತಿಗೆ ದಿನಕ್ಕೆ ಸರಾಸರಿ 40 ಲೀಟರ್‌ ಇದ್ದರೆ, ನಗರ ಪ್ರದೇಶದಲ್ಲಿ ಅದು 70 ಲೀಟರ್‌ ಇದೆ. ಶಿವಮೊಗ್ಗ ನಗರ ಪ್ರದೇಶ ಜನತೆ ಬಳಕೆ ಮಾಡುತ್ತಿರುವುದು 135 ಲೀಟರ್‌ಗೂ ಅಧಿಕ ಇದೆ. ಇದರ ಪ್ರಕಾರವೇ ಆದರೂ 3.50 ಲಕ್ಷ ಜನಸಂಖ್ಯೆ ಇರುವ ಶಿವಮೊಗ್ಗಕ್ಕೆ ಪ್ರತಿದಿನ 65 ದಶಲಕ್ಷ ಲೀಟರ್‌ ನೀರು ಬೇಕಾಗುತ್ತದೆ.

ಬಳಕೆ ಎಷ್ಟು: ಪಾಲಿಕೆಯಲ್ಲಿ ನೀರು ಪೂರೈಕೆ ಜವಾಬ್ದಾರಿ ಹೊತ್ತಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಮಾಹಿತಿ ಪ್ರಕಾರ ನಗರಕ್ಕೆ ತುಂಗಾನದಿಯಿಂದ 10 ದಶಲಕ್ಷ ಲೀಟರ್‌ ಮತ್ತು ತುಂಗಾ ಜಲಾಶಯದಿಂದ 84 ದಶಲಕ್ಷ ಲೀಟರ್‌ ಸೇರಿ ಒಟ್ಟು 94 ದಶಲಕ್ಷ ಲೀಟರ್‌ ನೀರೆತ್ತಲಾಗುತ್ತಿದೆ. ಶುದ್ಧೀಕರಣ ಮತ್ತು ಪೂರೈಕೆ ಹಂತದಲ್ಲಿ ಪೈಪ್‌ಗ್ಳಲ್ಲಿ 5 ದಶಲಕ್ಷ ಲೀಟರ್‌ ಸೋರಿಕೆ ಸಾಮಾನ್ಯವಂತೆ. ಶಿವಮೊಗ್ಗದ ಪೈಪ್‌ಲೈನ್‌ ಸೋರಿಕೆ ಅಧಿಕವಾಗಿರುವುದರಿಂದ 10 ದಶಲಕ್ಷ ಲೀಟರ್‌ ಸೋರಿಕೆಯಾಗಬಹುದು. ಉಳಿದ 84 ದಶಲಕ್ಷ ಲೀಟರ್‌ ನೀರನ್ನು ಜನ ಬಳಕೆ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ 19 ದಶಲಕ್ಷ ಲೀಟರ್‌ ಬಳಕೆಯಾಗುತ್ತಿದೆ.

ಭದ್ರಾವತಿಗೂ ಹಂಚಬಹುದು: ಉತ್ತರ ಕರ್ನಾಟಕದ ನಗರಗಳಲ್ಲಿ 5ರಿಂದ 6 ಲಕ್ಷ ಜನತೆ ಬಳಸಬಹುದಾದಷ್ಟು ನೀರನ್ನು ಶಿವಮೊಗ್ಗದಲ್ಲಿ ಕೇವಲ 3.50 ಲಕ್ಷ ಜನ ಬಳಕೆ ಮಾಡುತ್ತಿದ್ದಾರೆ. ಅಂದರೆ ಇಲ್ಲಿ ಬಳಕೆಯಾಗುತ್ತಿರುವ ನೀರನ್ನು ಉಳಿತಾಯ ಮಾಡಿದಲ್ಲಿ ಇಡೀ ಭದ್ರಾವತಿಗೆ ಪ್ರತಿದಿನ ನೀರು ಹರಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next