Advertisement

ನೈಸರ್ಗಿಕ ವಿಕೋಪ ತಡೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ

05:08 PM May 04, 2019 | Naveen |

ಶಿವಮೊಗ್ಗ: ಸಂಭಾವ್ಯ ನೈಸರ್ಗಿಕ ವಿಕೋಪಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಪ್ರತಿ ಇಲಾಖೆಗಳು ತಮ್ಮ ಹಂತದಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ತಿಳಿಸಿದರು.

Advertisement

ಅವರು ಶುಕ್ರವಾರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನೈಸರ್ಗಿಕ ವಿಕೋಪ ಎದುರಿಸಲು ಜಿಲ್ಲಾಡಳಿತದ ಸನ್ನದ್ಧತೆ ಕುರಿತು ಜಿಲ್ಲಾ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಅವರು ಮಾತನಾಡಿದರು.

ಕಳೆದ ಮಾನ್ಸೂನ್‌ ಅವಧಿಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದರೂ, ಅದೃಷ್ಟವಶಾತ್‌ ಹೆಚ್ಚಿನ ನಷ್ಟ ಸಂಭವಿಸಿಲ್ಲ. ಕೊಡಗಿನಲ್ಲಿ ಸಂಭವಿಸಿದ ವ್ಯಾಪಕ ಹಾನಿ ಹಿನ್ನೆಲೆಯಲ್ಲಿ ಅಂತಹ ಸಂಭಾವ್ಯ ಅನಾಹುತಗಳು ಸಂಭವಿಸಿದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿ ಇಲಾಖೆಗಳು ಸ್ಪಷ್ಟ ಮಾರ್ಗಸೂಚಿ ಹೊಂದಿರಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದರು.

ಮುಂಗಾರು ಪೂರ್ವದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಚೆಕ್‌ಲೀಸ್ಟ್‌ ಪ್ರಕಾರ ಪ್ರತಿ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇಂಜಿನಿಯರ್‌ಗಳು ಮಳೆಗಾಲ ಪೂರ್ವದಲ್ಲಿ ಹಾಗೂ ಆರಂಭದಲ್ಲಿ ಅನಾಹುತಗಳು ಸಂಭವಿಸಬಹುದಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನೀರಿನಲ್ಲಿ ಮುಳುಗಿ ಮಕ್ಕಳು ಸಾವಿಗೀಡಾಗುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜೆ ಪೂರ್ವದಲ್ಲಿ ಶಾಲೆಗಳಲ್ಲಿ ಈ ಕುರಿತು ಮಕ್ಕಳಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು. ಕಳೆದ ಮೂರು ವರ್ಷಗಳಲ್ಲಿ ಮಕ್ಕಳು ಸಾವಿಗೀಡಾಗಿರುವ ಪ್ರಕರಣ ಪರಿಶೀಲನೆ ನಡೆಸಿ ಇದನ್ನು ತಪ್ಪಿಸಲು ಕೈಗೊಳ್ಳಬಹುದಾಗಿದ್ದ ಕ್ರಮಗಳ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಮಾಣಿ ಜಲಾಶಯ ತುಂಬಿದ ಸಂದರ್ಭಗಳಲ್ಲಿ ಹಿನ್ನೀರಿನಲ್ಲಿರುವ ಬಿಚ್ಚೋಡಿ ಗ್ರಾಮ ಸಂಪರ್ಕ ಕಡಿದುಕೊಳ್ಳುತ್ತಿದೆ. ಇದಕ್ಕಾಗಿ ಸ್ಥಳ ಪರಿಶೀಲನೆ ನಡೆಸಿ ಸಂಪರ್ಕ ಕಲ್ಪಿಸಲು ಮಾಡಬಹುದಾದ ಕ್ರಮಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿ. ಅಣೆಕಟ್ಟು ವ್ಯಾಪ್ತಿಯಲ್ಲಿ ಭೂಕಂಪನ ಮಾಪಕ ಕೇಂದ್ರ ಆರಂಭಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು. ಹುಲಿಕಲ್ ಘಾಟಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಕುಸಿತ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಅವರು ಹೇಳಿದರು.

Advertisement

ಕ್ರಿಮಿನಲ್ ಮೊಕದ್ದಮೆ: ಯಾವುದೇ ಇಲಾಖೆ ವತಿಯಿಂದ ರಸ್ತೆ ಬದಿ ಅಗೆದು ಕಾಮಗಾರಿ ನಿರ್ವಹಿಸಿ. ಸರಿಯಾಗಿ ಅದನ್ನು ಮುಚ್ಚದೇ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವರಾಮೇ ಗೌಡ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೇಖರ್‌, ರೆಡ್‌ಕ್ರಾಸ್‌ ಸಂಸ್ಥೆಯ ಡಾ| ಕುಮಾರ್‌, ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಅಲೆಕ್ಸ್‌ ಲೋಬೊ, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್‌ ಖಾನ್‌, ಇಲಾಖಾ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next