ಶಿವಮೊಗ್ಗ: ನಗರದ ಗಾಂಧಿ ಪಾರ್ಕ್ ಆವರಣದಲ್ಲಿ ಭಾನುವಾರ ಮಕ್ಕಳ ಹಬ್ಬ ವಿಶೇಷ ಉಚಿತ ಬೇಸಿಗೆ ತರಬೇತಿ ಶಿಬಿರ ಉದ್ಘಾಟನೆ ನಡೆಯಿತು. ಜಿಲ್ಲೆಯ ನಾನಾ ಭಾಗದಲ್ಲಿ ಬಡ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ನಡೆಯುತ್ತಿದೆ. ಕೆಲ ಸಮಾನ ಮನಸ್ಕ ಸರಕಾರಿ ಇಲಾಖೆಗಳ ಅಧಿಕಾರಿಗಳು ಮಕ್ಕಳಿಗೆ ತರಬೇತಿ ನೀಡಲು ಸಜ್ಜಾಗಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಇದು ಮಾದರಿ ಶಿಬಿರವಾಗಿ ಗುರುತಿಸಿಕೊಂಡಿದೆ.
ಶಿಬಿರದಲ್ಲಿ ಏನೇನಿದೆ?
ನಗರದಲ್ಲಿ ಈಗಾಗಲೇ ಬಹಳಷ್ಟು ಶಿಬಿರಗಳು ನಡೆಯುತ್ತಿವೆ. ಆದರೆ, ಹಣ ಕೊಟ್ಟು ಶಿಬಿರಕ್ಕೆ ಹೋಗಲು ಆಗದ ಬಡಮಕ್ಕಳಿಗೆ ಒಂದು ವೇದಿಕೆ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ 8 ದಿನಗಳ ಕಾಲ ಮಕ್ಕಳ ಹಬ್ಬ ಶೀರ್ಷಿಕೆಯಡಿ ಉಚಿತ ವಿಶೇಷ ಬೇಸಿಗೆ ಶಿಬಿರ ಏರ್ಪಡಿಸಿದ್ದಾರೆ.
ಬಡ ಮಕ್ಕಳು, ಅದರಲ್ಲೂ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಶಿವಮೊಗ್ಗ ಸುತ್ತಮುತ್ತ ಹಲವು ಪ್ರದೇಶಗಳಲ್ಲಿ ಉಚಿತ ಮತ್ತು ಮಧ್ಯಾಹ್ನದ ಅನ್ನದಾಸೋಹದೊಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ನಗರದ ವಿವಿಧ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 100ಕ್ಕೂ ಹೆಚ್ಚು ಮಕ್ಕಳು ಈ ತರಬೇತಿ ಕೇಂದ್ರದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಹಿಂದೆ ಬೇಸಿಗೆ ರಜೆ ಬಂತೆಂದರೆ ಮಕ್ಕಳು ಅಜ್ಜಿ ಮನೆಯತ್ತ ಧಾವಿಸುತ್ತಿದ್ದ ಕಾಲವಿತ್ತು. ಈಗ ಕಾಲ ಬದಲಾಗಿದ್ದು, ವಾರ್ಷಿಕ ಪರೀಕ್ಷೆಗಳು ಮುಗಿಯುತ್ತಿದ್ದಂತೆ ಮಕ್ಕಳಿಗೆ ಬೇಸಿಗೆ ಶಿಬಿರದ ಸಿದ್ಧತೆ ಜೋರಾಗಿ ನಡೆಯುತ್ತಿದೆ. ನಗರದ ಕೆಲವು ಕಡೆಗಳಲ್ಲಿ ಈಗಾಗಲೇ ಶಿಬಿರಗಳು ಆರಂಭವಾಗಿವೆ. ಪ್ರವೇಶ ಶುಲ್ಕ ಆಧಾರ ಮೇಲೆ ಶಿಬಿರಗಳು ನಡೆಯುತ್ತಿರುವುದರಿಂದ ಆರ್ಥಿಕವಾಗಿ ಹಿಂದುಳಿದರುವ ಮಕ್ಕಳು ಬೇಸಿಗೆ ಶಿಬಿರಗಳಿಂದ ದೂರ ಉಳಿಯುತ್ತಾರೆ. ಇಂತಹ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೂ ಶಿಬಿರದ ಅನುಭವ ರುಚಿ ತಿನಿಸಲು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಮಕ್ಕಳ ಹಬ್ಬ ವಿಶೇಷ ಶಿಬಿರ ಹೆಸರಿನಲ್ಲಿ ಉಚಿತವಾಗಿ ತರಬೇತಿಗೆ ವೇದಿಕೆ ಸಿದ್ಧ್ದಪಡಿಸಿದ್ದಾರೆ.
ಮಕ್ಕಳಿಗೆ ಒತ್ತಡ ಹೇರಬೇಡಿ
ಮಕ್ಕಳಿಗೆ ಏನು ಬೇಕು, ಏನು ಬೇಡ ಎನ್ನುವ ಚಿಂತನೆ ನಡೆಸದೇ, ಕೇವಲ ಅಂಕಗಳನ್ನು ತೆಗೆದುಕೊಳ್ಳುವ ಯಂತ್ರಗಳನ್ನಾಗಿ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಬೇಸಿಗೆ ಶಿಬಿರಗಳನ್ನು ಮಕ್ಕಳಲ್ಲಿ ಹೊಸ ಆಲೋಚನೆಗಳನ್ನು ಹುಟ್ಟುಹಾಕಲು ಮತ್ತು ಯಾಂತ್ರೀಕೃತ ಬದುಕಿನಿಂದ ಹೊರ ಬರಲು ಸಹಾಯಕವಾಗುತ್ತವೆ. ಶಿಕ್ಷಣವೆಂದರೆ ಕೇವಲ ಮಾರ್ಕ್ಸ್ ಅಷ್ಟೇ ಅಲ್ಲ. ಎಲ್ಲ ರೀತಿಯಿಂದಲೂ ಸಂಸ್ಕಾರವನ್ನು ಹೊತ್ತು ಸಮಾಜದಲ್ಲಿ ಪ್ರಬುದ್ಧ ಮಗುವಾಗಿ ಬೆಳೆಯುವ ರೀತಿಯದ್ದಾಗಿರಬೇಕು. ಅದು ಬಿಟ್ಟು ಬರೀ ಓದು, ಓದು ಎನ್ನುವ ಒತ್ತಡದಿಂದಾಗಿ ಓದಬೇಕಾದ ಅಪಾಯದಲ್ಲಿ ನೂಕಲ್ಪಡುವ ಸ್ಥಿತಿಯಾಗಬಾರದು.
•
ಕೆ.ಎ. ದಯಾನಂದ್, ಜಿಲ್ಲಾಧಿಕಾರಿ