Advertisement

ಸ್ಮಾರ್ಟ್‌ಸಿಟಿ ಯೋಜನೆಗೆ ಸಹಭಾಗಿತ್ವ ಅಗತ್ಯ

01:28 PM May 29, 2019 | Team Udayavani |

ಶಿವಮೊಗ್ಗ: ಸ್ಮಾರ್ಟ್‌ಸಿಟಿ ಯೋಜನೆ ಜಾರಿಯಲ್ಲಿ ಸಾರ್ವಜನಿಕರು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಕತ್ತಲಲ್ಲಿ ಇಡದೆ ಪ್ರತಿಯೊಂದು ಹಂತದಲ್ಲೂ ತೊಡಗಿಸಿಕೊಳ್ಳಬೇಕೆಂದು ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಸ್ಮಾರ್ಟ್‌ಸಿಟಿ ಯೋಜನೆ ಚೇರ್ಮನ್‌ ಚಕ್ರವರ್ತಿ ಮೋಹನ್‌ ಅವರಿಗೆ ಮನವಿ ಸಲ್ಲಿಸಿದ ಮಹಾನಗರ ಪಾಲಿಕೆ ಸದಸ್ಯರು, ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಹಲವು ಲೋಪಗಳಾಗಿದ್ದು ಕೂಡಲೇ ಅವುಗಳನ್ನು ಸರಿಪಡಿಸಿ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಕೂಡಲೇ ನಿಯಂತ್ರಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದ ಸ್ಮಾರ್ಟ್‌ಸಿಟಿ ಯೋಜನೆಯ ಜಾರಿಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರೊಂದಿಗೆ ಚರ್ಚಿಸಲಾಗಿದೆ. ಯಾವ ರೀತಿಯ ಯೋಜನೆಗಳನ್ನು ಕೈಗೊಳ್ಳಬಹುದು ಎಂಬುದನ್ನು ಗುರುತಿಸಿ ಅದಕ್ಕೆ ಪೂರಕವಾಗಿ ಬ್ಲ್ಯೂ ಪ್ರಿಂಟ್ ಸಿದ್ಧಪಡಿಸಲಾಗಿದೆ. ಆದರೆ, ಅಂತಹ ಯೋಜನೆಗಳನ್ನು ಕೈಬಿಟ್ಟು ಅಥವಾ ಕಾಮಗಾರಿಗಳನ್ನು ಬದಲಿಸಿ ಟೆಂಡರ್‌ ಕರೆಯಲಾಗಿದೆ. ರವೀಂದ್ರನಗರದಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ಅನವಶ್ಯಕವಾದ ಕೆಫೆಟೇರಿಯ (ಹೊಟೇಲ್) ನಿರ್ಮಿಸಲಾಗುತ್ತಿದೆ. ಅದಕ್ಕೆ ಸ್ಥಳೀಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ವಿರೋಧ ವ್ಯಕ್ತಪಡಿಸಿದೆ. ಹಳೆ ಬಸ್‌ ನಿಲ್ದಾಣದ ದುರಸ್ತಿಗೆ ಆದ್ಯತೆಯನ್ನೇ ನೀಡಿಲ್ಲ ಎಂದು ಆಪಾದಿಸಿದರು.

ರವೀಂದ್ರ ನಗರದಲ್ಲಿ ಸ್ಮಾರ್ಟ್‌ಸಿಟಿ ಪ್ಯಾಕೆೇಜ್‌ 2- ಎ ಕಾಮಗಾರಿ ಪ್ರಾರಂಭಿಸಿ ಮನೆಗಳ ಮುಂದಿನ ಚರಂಡಿ ಕಲ್ಲುಗಳನ್ನು ಕಿತ್ತು 2 ತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಸಾರ್ವಜನಿಕರು ತಮ್ಮ ವಾಹನಗಳನ್ನು ಮನೆ ಒಳಗೆ ತೆಗೆದುಕೊಂಡು ಹೋಗಲಾಗದೆ ರಸ್ತೆ ಬದಿಯಲ್ಲೇ ನಿಲ್ಲಿಸುತ್ತಿದ್ದಾರೆ. ಕಾಮಗಾರಿ ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಬೈಯುತ್ತಿದ್ದಾರೆ. ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳಿಗೆ ಕಾರಣ ಕೇಳಿದರೆ ಇದುವರೆಗೆ ಡ್ರಾಯಿಂಗ್‌ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಡ್ರಾಯಿಂಗ್‌ ಇಲ್ಲದೆಯೇ ಕಾಮಗಾರಿಗೆ ಚಾಲನೆ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು.

ಸ್ಮಾರ್ಟ್‌ಸಿಟಿಯಲ್ಲಿ 460.95ಕೋಟಿ ರೂ. ಮೊತ್ತಕ್ಕೆ ಟೆಂಡರ್‌ ಆಗಿದೆ. ಇದರಲ್ಲಿ ಗುತ್ತಿಗೆದಾರರಿಗೆ ಶೇ.9ರಿಂದ 10ರಷ್ಟು ಹೆಚ್ಚುವರಿ ನೀಡಲಾಗಿದೆ. ಕಾಮಗಾರಿಗೆ ಬಳಕೆ ಮಾಡುತ್ತಿರುವ ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷೆ ಮಾಡದಿರುವುದು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಅನುಮಾನ ಮೂಡಿಸಿದೆ. ಕನ್ಸರ್‌ವೆನ್ಸಿಗಳಲ್ಲಿ ಮ್ಯಾನ್‌ಹೋಲ್ಗಳು ಹಾಳಾದರೂ ಮುಚ್ಚುವುದಕ್ಕೆ ವ್ಯವಸ್ಥೆ ಮಾಡಿಲ್ಲ. ವಿವಿಧೆಡೆ ಕಾಮಗಾರಿಗಳಿಗಾಗಿ ಗುಂಡಿ ತೆಗೆದು ತಿಂಗಳುಗಟ್ಟಲೆ ಹಾಗೆಯೇ ಬಿಡಲಾಗಿದೆ ಎಂದು ಆಪಾದಿಸಿದರು. ಕಾಮಗಾರಿಗಳನ್ನು ಬೆಂಗಳೂರು, ಆಂಧ್ರ ಮತ್ತು ದಿಲ್ಲಿ ಮೂಲದ ಗುತ್ತಿಗೆದಾರರ ಮೂಲಕ ನಡೆಸಲಾಗುತ್ತಿದೆ. ಅವರಿಗೆ ಅನುಭವದ ಕೊರತೆ ಇದೆ. ಈ ಎಲ್ಲ ವಿಷಯಗಳ ಬಗ್ಗೆ ಗಮನ ವಹಿಸಿ ಲೋಪಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು. ನಿಯೋಗದಲ್ಲಿ ಪಾಲಿಕೆ ಸದಸ್ಯರಾದ ರಮೇಶ್‌ ಹೆಗಡೆ, ಯೋಗೇಶ್‌, ನಾಗರಾಜ ಕಂಕಾರಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next