Advertisement

ಬತ್ತಿದ ತುಂಗೆ-ಬರಿದಾದ ಜಲಾಶಯ

12:25 PM Jun 01, 2019 | Naveen |

ಶಿವಮೊಗ್ಗ: ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಎಂಬಂತೆ ಜಿಲ್ಲೆಯ ಜೀವನಾಡಿಯಾಗಿರುವ ತುಂಗಾ ನದಿ ಬತ್ತಿದ್ದು, ಇದನ್ನೇ ನಂಬಿಕೊಂಡಿರುವ ಶಿವಮೊಗ್ಗ ನಗರಕ್ಕೂ ಈಗ ನೀರಿಗಾಗಿ ಹಾಹಾಕಾರ ಉಂಟಾಗುವ ಸ್ಥಿತಿ ಎದುರಾಗಿದೆ.

Advertisement

ಕಳೆದ ವರ್ಷ ಮುಂಗಾರು ಉತ್ತಮವಾಗಿ ಆದ ಪರಿಣಾಮ ಡ್ಯಾಂನಿಂದ ಭರ್ಜರಿ ನೀರು ಹೊರಬಿಡಲಾಗಿತ್ತು. ನಂತರದ ಅವಧಿಯಲ್ಲಿ ಬರಬೇಕಿದ್ದ ಹಿಂಗಾರು ಕೈಕೊಟ್ಟಿತ್ತು. ಈಗ ಮುಂಗಾರು ಪೂರ್ವ ಮಳೆಯೂ ಕೈ ಕೊಟ್ಟಿರುವುದರಿಂದ ಸರ್ವಋತು ತುಂಗೆ ಸಂಪೂರ್ಣ ಬತ್ತಿದೆ. ಡ್ಯಾಂಗೆ ಒಳಹರಿವು ಇಲ್ಲದ ಕಾರಣ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರಸ್ತುತ ಡ್ಯಾಂನಲ್ಲಿ 15ದಿನಕ್ಕೆ ಆಗುವಷ್ಟು ಮಾತ್ರ ನೀರಿದೆ. ನೈಋತ್ಯ ಮಾನ್ಸೂನ್‌ ಮಳೆಯು ಈ ಹಿಂದಿನ ಐದಾರು ವರ್ಷಗಳಂತೆ ಈ ವರ್ಷ ಸಹ ಜೂನ್‌ನಲ್ಲಿ ಕೈಕೊಟ್ಟಲ್ಲಿ ಶಿವಮೊಗ್ಗದಲ್ಲಿ ಕುಡಿವ ನೀರಿನ ತುಟ್ಟಾಗ್ರತೆ ಉಂಟಾಗುವುದು ನಿಶ್ಚಿತ.

3.24 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 1.25 ಟಿಎಂಸಿ ನೀರಿದೆ. ನೀರಿನ ಸಂಗ್ರಹ 0.989ಕ್ಕೆ ಇಳಿದಲ್ಲಿ ಶಿವಮೊಗ್ಗ ನಗರಕ್ಕೆ ನೀರೆತ್ತುವ ಜಾಕ್ವೆಲ್ನಿಂದಲೂ ನೀರು ಕೆಳಗೆ ಇಳಿಯಲಿದೆ.

ಮಳೆಯಾಗದ ಕಾರಣ ಸದ್ಯ ದಾವಣಗೆರೆ, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ 2-3 ದಿನಕ್ಕೊಮ್ಮೆ, ಕೆಲವೆಡೆ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಶಿವಮೊಗ್ಗದಲ್ಲಿ ಮಾತ್ರ ಕಡು ಬೇಸಿಗೆಯಲ್ಲೂ ಹೊರ ವಲಯದ ಕೆಲ ಬಡಾವಣೆಗಳನ್ನು ಹೊರತುಪಡಿಸಿ ಪ್ರತಿದಿನವೂ ನೀರು ಪೂರೈಕೆ ಮಾಡಲಾಗುತ್ತಿದೆ. 3.50 ಲಕ್ಷ ಜನಸಂಖ್ಯೆ ಇರುವ ನಗರಕ್ಕೆ ತುಂಗಾ ನದಿ (10 ಎಂಎಲ್ಡಿ) ಮತ್ತು ಜಲಾಶಯದಿಂದ (90 ಎಂಎಲ್ಡಿ) ಒಟ್ಟು 100 ಎಂಎಲ್ಡಿ ನೀರೆತ್ತಿ ಪೂರೈಕೆ ಮಾಡಲಾಗುತ್ತದೆ.

ಬತ್ತಿದ ನದಿ: ಕಳೆದ ಎರಡು ತಿಂಗಳಿಂದ ತುಂಗಾ ನದಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋದ ಕಾರಣ ಕುಡಿವ ನೀರಿಗೆ ಜಲಾಶಯವನ್ನೇ ಅವಲಂಬಿಸಲಾಗಿದೆ. ಇದೇ ರೀತಿ ಜಲಾಶಯದ ನೀರು ಬಳಕೆ ಮಾಡಿದಲ್ಲಿ ಮುಂದಿನ 15 ದಿನದೊಳಗೆ ಖಾಲಿಯಾಗಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಳೆದ ಐದಾರು ವರ್ಷಗಳಿಂದ ನೈಋತ್ಯ ಮಾನ್ಸೂನ್‌ ಮಳೆ ಜೂನ್‌ನಲ್ಲಿ ನಿರಂತರವಾಗಿ ಕೈಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಇರುವ ನೀರನ್ನು ಕನಿಷ್ಠ ಒಂದು ತಿಂಗಳಿಗಾದರೂ ಉಳಿಸಿಕೊಳ್ಳಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಮೇಯರ್‌ ಲತಾ ಗಣೇಶ್‌, ಉಪ ಮೇಯರ್‌ ಚನ್ನಬಸಪ್ಪ ಮತ್ತು ಅಧಿಕಾರಿಗಳು ಜಲಾಶಯಕ್ಕೆ ಬುಧವಾರ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ್ದಾರೆ.

ನಾಲೆಗಳಿಗೆ ನೀರಿಲ್ಲ
ತುಂಗಾ ಜಲಾಶಯದ ಬಲ ಮತ್ತು ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಇಲ್ಲದೆ ತೋಟದ ಬೆಳೆಗಳಾದ ಅಡಕೆ ಮತ್ತು ಬಾಳೆ ಒಣಗುತ್ತಿದೆ. ಹೀಗಾಗಿ ನಾಲೆಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದ್ದರು. ಆದರೆ, ಜಲಾಶಯದಲ್ಲಿ ನಿರೀನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದ್ದು, ಕುಡಿವ ನೀರು ಪೂರೈಕೆಗೂ ಕೊರತೆ ಎದುರಾಗಿದೆ. ಸರಕಾರದ ಆದೇಶದ ಪ್ರಕಾರ ಜಲಾಶಯದ ನೀರನ್ನು ಕುಡಿಯುವ ನೀರಿಗೆ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ನಾಲೆಗಳಿಗೆ ನೀರು ಹರಿಸುವುದು ಅಸಾಧ್ಯದ ಮಾತಾಗಿದೆ.

ಎರಡು ದಿನಕ್ಕೊಮ್ಮೆ ನೀರು
ಮಳೆಯಾಗಿ ನದಿಯಲ್ಲಿ ನೀರು ಬರುವವರೆಗೆ ಪ್ರತಿದಿನದ ಬದಲಾಗಿ ಎರಡು ದಿನಕ್ಕೊಮ್ಮೆ ನೀರು ಬಿಡುವ ಬಗ್ಗೆ ಪಾಲಿಕೆ ಚಿಂತನೆ ನಡೆಸಿದೆ. ಆಗ ಮಳೆ ಬರುವುದು ಒಂದು ತಿಂಗಳು ತಡವಾದರೂ ನೀರಿಗೆ ತೊಂದರೆ ಆಗುವುದನ್ನು ತಪ್ಪಿಸಬಹುದು. ಕೃಷ್ಣರಾಜ ನೀರು ಸರಬರಾಜು ಮತ್ತು ಶುದ್ಧೀಕರಣ ಕೇಂದ್ರದ ಬಳಿ ತುಂಗಾ ನದಿಯಲ್ಲಿ ನೀರು ಬತ್ತಿ ನೀರು ಪೂರೈಕೆಯಲ್ಲಿ 10 ಎಂಎಲ್ಡಿ ಕೊರತೆಯಾದ ಬಳಿಕ ನಗರ ಹೊರವಲಯದ ಬಡಾವಣೆಗಳಲ್ಲಿ ಕುಡಿವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ.

ಮಳೆಗಾಲ ಇನ್ನೂ ಆರಂಭವಾಗಿಲ್ಲ. ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ಇರುವುದು ನಿಜ. ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಕುಡಿಯುವ ನೀರಿಗೆ ಸದ್ಯ ಯಾವುದೇ ಸಮಸ್ಯೆ ಇಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಪರಿಸ್ಥಿತಿ ಬಿಗಡಾಯಿಸಲಿದೆ
•ಕೆ.ಎ. ದಯಾನಂದ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next