Advertisement

ಸಾವಿರಾರು ಜನ ಓಡಾಡುವ ದಾರಿಯೇ ಮೃತ್ಯುಕೂಪ

03:54 PM Sep 27, 2019 | Naveen |

ಶಿವಮೊಗ್ಗ: ಜೋರು ಮಳೆಯ ಬಳಿಕ ನಗರದ ವಿವಿಧ ರಸ್ತೆಗಳಲ್ಲಿ ಭಾರೀ ಗಾತ್ರದ ಗುಂಡಿಗಳು ಬಾಯೆ¤ರೆದಿವೆ. ಅದರಲ್ಲೂ ಸಾವಿರಾರು ವಾಹನಗಳು ಓಡಾಡುವ ಸರ್ಕಲ್‌ಗ‌ಳು ಮೃತ್ಯುಕೂಪವಾಗಿಬಿಟ್ಟಿವೆ.

Advertisement

ವಾಹನ ದಟ್ಟಣೆ ಹೆಚ್ಚಿರುವ ಶಿವಮೊಗ್ಗದ ಎಂಆರ್‌ಎಸ್‌ ಸರ್ಕಲ್‌ನಲ್ಲಿ ದೊಡ್ಡ ಗಾತ್ರದ ಗುಂಡಿಗಳು ಪ್ರತ್ಯಕ್ಷವಾಗಿವೆ. ದ್ವಿಚಕ್ರ ವಾಹನ ಸವಾರರ ಪಾಲಿಗಂತೂ ಈ ಗುಂಡಿಗಳು ದೊಡ್ಡ ಕಂಟಕವಾಗಿ ಬಿಟ್ಟಿವೆ.

ಈ ಯಮ ಸ್ವರೂಪಿ ಗುಂಡಿಗಳಿಂದಾಗಿ ಬಿದ್ದು ಗಾಯಗೊಂಡವರು ಹಲವರಿದ್ದಾರೆ. ಈಚೆಗೆ ಜಲ್ಲಿ ಪುಡಿ ಮುಚ್ಚಲಾಗಿತ್ತು. ಭಾರೀ ವಾಹನಗಳ ಓಡಾಟದಿಂದ ಜಲ್ಲಿ ಮೇಲೆದ್ದು ರಸ್ತೆ ತುಂಬಾ ಹರಡಿದೆ. ಸ್ವಲ್ಪ ಎಚ್ಚರ ತಪ್ಪಿದರೂ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು, ಗಂಭೀರವಾಗಿ ಗಾಯಗೊಳ್ಳುವ ಸಂಭವವಿದೆ. ಇನ್ನು, ಎಂಆರ್‌ಎಸ್‌ ಸರ್ಕಲ್‌ ನಲ್ಲೇ ಬಸ್‌ ನಿಲ್ದಾಣವಿದೆ. ಹಾಗಾಗಿ ಸರ್ಕಲ್‌ ನಲ್ಲಿ ಯಾವಾಗಲೂ ಜನ ಇರುತ್ತಾರೆ.

ಶಾಲೆ- ಕಾಲೇಜುಗಳು ಇರುವುದರಿಂದ ಸಂಜೆ ಮತ್ತು ಬೆಳಗಿನ ಹೊತ್ತು ಬಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿರುತ್ತದೆ. ವಾಹನಗಳು ಹೋಗುವಾಗ, ರಸ್ತೆಯಲ್ಲೆಲ್ಲ ಬಿದ್ದಿರುವ ಗುಂಡಿಯ ಜೆಲ್ಲಿ ಕಲ್ಲುಗಳು, ಅಕ್ಕಪಕ್ಕ ನಿಂತವರತ್ತ ಹಾರುತ್ತಿವೆ.

ಈಚೆಗೆ ರಾತ್ರಿ ವೇಳೆ ಜೋರಾಗಿ ಬಂದ ಬೈಕ್‌ ಸವಾರನೊಬ್ಬ ಜಲ್ಲಿ ಕಲ್ಲುಗಳಿದ್ದ ಕಾರಣ ಸ್ಕಿಡ್‌ ಆಗಿ ಬಿದ್ದು ಗಾಯಗೊಂಡ.

Advertisement

ಇಂತಹ ಅನೇಕ ಪ್ರಕರಣಗಳು ಈಸರ್ಕಲ್‌ನಲ್ಲಿ ಕಾಣಸಿಗುತ್ತಿವೆ. “ಗುಂಡಿ ಮುಚ್ಚುವುದಿರಲಿ ಕನಿಷ್ಠ ಇಲ್ಲಿ ಬಿದ್ದಿರುವ ಕಲ್ಲುಗಳನ್ನಾದರೂ ತೆಗೆಸಿದ್ದರೆ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಇವು ಸಿಡಿದು ಕಣ್ಣು ಕಳೆದುಕೊಳ್ಳುತ್ತೇವೋ, ಗಾಯ ಮಾಡಿಕೊಳ್ಳುತ್ತೇವೋ ಗೊತ್ತಿಲ್ಲ ಅಂತಾರೆ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿ ರೂಪಾ. ರಾತ್ರಿ ವೇಳೆ ಈ ರಸ್ತೆಯಲ್ಲಿ ಬರುವಾಗ ಎಚ್ಚರದಿಂದ ಗಾಡಿ ಓಡಿಸಬೇಕಿದೆ. ವಿದ್ಯಾನಗರದ ಕಡೆಯಿಂದ ಬರುವಾಗ ರಸ್ತೆ ಚೆನ್ನಾಗಿದೆ. ಸರ್ಕಲ್‌ನಲ್ಲಿ ದೊಡ್ಡ ಗುಂಡಿಗಳಿವೆ. ವೇಗವಾಗಿ ಬಂದರೆ ಗಾಡಿ ಕಂಟ್ರೋಲ್‌ ಮಾಡುವುದೇ ಕಷ್ಟವಾಗುತ್ತದೆ. ಕೆಲವೊಮ್ಮೆ ಸರ್ಕಲ್‌ನಲ್ಲಿ ಲೈಟ್‌ ಇರುವುದಿಲ್ಲ ಅನ್ನುತ್ತಾರೆ ಚಾಲಕ ಪ್ರಶಾಂತ್‌.

ಹೊಳೆ ಬಸ್‌ನಿಲ್ದಾಣ: ಹೊಳೆಹೊನ್ನೂರು ರಸ್ತೆಗೆ ಸಂಪರ್ಕಿಸುವ ಹೊಳೆ ಬಸ್‌ ನಿಲ್ದಾಣ ಸರ್ಕಲ್‌ ಬಳಿ ರಸ್ತೆ ಹಾಳಾಗಿದ್ದು ಗುಂಡಿಗಳು ಹೆಚ್ಚಾಗಿವೆ. ಹಳೇ ಸೇತುವೆ ಸಂಚಾರ ನಿರ್ಬಂಧವಿರುವುದರಿಂದ ಹೊಸ ಸೇತುವೆ ಮೇಲೆ ಎಲ್ಲ ವಾಹನಗಳು ಓಡಾಡುತ್ತಿವೆ. ಸೇತುವೆ ಮೇಲೆ ಎರಡ್ಮೂರು ಕಡೆ ಗುಂಡಿ ಬಿದ್ದಿದ್ದು,
ಸೇತುವೆ ಕೊನೆ ಭಾಗದಲ್ಲೂ ಗುಂಡಿಮಯಾಗಿದೆ. ಈ
ಸಂದರ್ಭದಲ್ಲಿ ವಾಹನ ಸವಾರರು ನಿಧಾನವಾಗಿ ಚಲಿಸುವುದರಿಂದ ಸಣ್ಣ ಪುಟ್ಟ ಅಪಘಾತಗಳು ಸಾಮಾನ್ಯವಾಗಿದೆ.

ಮಹಾವೀರ ಸರ್ಕಲ್‌: ಮಹಾವೀರ ಸರ್ಕಲ್‌ನಫ್ರೀ ಟರ್ನ್ ಇರುವ ಕಡೆ ಅಡಿಗೂ ಹೆಚ್ಚು ಆಳದ ಗುಂಡಿ ಬಿದ್ದಿದ್ದು ಕತ್ತಲಲ್ಲಿ ಯಮಾರಿದರೆ ವಾಹನದ ಸಮೇತ ಬೀಳುವುದು ಗ್ಯಾರಂಟಿ. ಜಿಲ್ಲಾ ಧಿಕಾರಿ ಕಚೇರಿ ಕಡೆಯಿಂದ ರೈಲ್ವೆ ಸ್ಟೇಷನ್‌ ಹೋಗುವಾಗ ಫ್ರೀ ಟರ್ನ್ ಇದ್ದು ಅದೇ ಜಾಗದಲ್ಲಿ ದೊಡ್ಡ ಗುಂಡಿ ಇದೆ. ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಗುಂಡಿ ಸರಿಯಾಗಿ ಗೋಚರಿಸುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next