Advertisement

ಆಧಾರ್‌ ಕೇಂದ್ರ ತೆರೆಯಲು ಒತ್ತಾಯಿಸಿ ಪ್ರತಿಭಟನೆ

12:04 PM Jun 22, 2019 | Team Udayavani |

ಶಿಕಾರಿಪುರ: ಪಟ್ಟಣದಲ್ಲಿ ಆಧಾರ್‌ ಕೇಂದ್ರ ಇಲ್ಲದೆ ಜನರು ಪರದಾಡುತ್ತಿದ್ದು ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ತಹಶೀಲ್ದಾರ್‌ ಕಚೇರಿ ಎದುರು ಜನಸಾಮಾನ್ಯರು ಪ್ರತಿಭಟನೆ ನಡೆಸಿದರು.

Advertisement

ಆಧಾರ್‌ ಕೇಂದ್ರ ತಹಶೀಲ್ದಾರ್‌ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಎಸ್‌ಬಿಐ ಬ್ಯಾಂಕ್‌ನಲ್ಲಿ ತಿಂಗಳು ಕಳೆದರೂ ಸರತಿ ಬರುವುದಿಲ್ಲ. ಜನರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಮಹಿಳೆಯರು, ಮಕ್ಕಳ ತಂಡ ಉಪತಹಶೀಲ್ದಾರ್‌ ಶೈಲಜಾ ಅವರಿಗೆ ತಿಳಿಸಿದರು. ಆಗ ಅವರು ನೀವು ಎಲ್ಲಾದರೂ ಆಧಾರ್‌ ಮಾಡಿಸಿ. ನಮ್ಮಲ್ಲಿ ಈಗ ಆಗುವುದಿಲ್ಲ ಎಂದು ಹೇಳಿದ್ದರಿಂದ ಸಿಟ್ಟಾದ ಜನರು ತಹಶೀಲ್ದಾರ್‌ ಕಚೇರಿ ಎದುರಲ್ಲೇ ಪ್ರತಿಭಟನೆ ನಡೆಸಿ ತಾಲೂಕು, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗೆ ಮಕ್ಕಳನ್ನು ನೋಂದಾಯಿಸಲು, ಪಡಿತರ ಚೀಟಿ ತಿದ್ದುಪಡಿಗೆ, ಆದಾಯ ಪ್ರಮಾಣ ಪತ್ರ ಮೊದಲಾದ ಸೌಲಭ್ಯಕ್ಕಾಗಿ ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಹೊಸ ಆಧಾರ್‌ ಕಾರ್ಡ್‌ತಿದ್ದುಪಡಿಗಾಗಿ ಪಟ್ಟಣದಲ್ಲಿ ಯಾವುದೇ ಸೌಲಭ್ಯ ಇಲ್ಲವಾಗಿದೆ. ಎಸ್‌ಬಿಐ ಬ್ಯಾಂಕ್‌ನಲ್ಲಿ ಕೇಂದ್ರ ಇದ್ದರೂ ಎರಡು ತಿಂಗಳ ಕಾಲ ಕಾಯಬೇಕಿದೆ. 4 ಗಂಟೆ ನಂತರ ಮಾಡುವಂತಿಲ್ಲ. ಸರ್ವರ್‌ ಸಮಸ್ಯೆಯಿಂದಾಗಿ ದಿನಕ್ಕೆ 20 ಜನರಿಗೆ ಮಾತ್ರ ಸೌಲಭ್ಯ ಸಿಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮೀಣ ಪ್ರದೇಶದ ಜನರು ಕೂಲಿ ಬಿಟ್ಟು, ಮಕ್ಕಳನ್ನು ಶಾಲೆ ಬಿಡಿಸಿ ಆಧಾರ್‌ ಕಾರ್ಡ್‌ ಮಾಡುವುದಕ್ಕೆ ತಿಂಗಳುಗಟ್ಟಲೆ ಅಲೆಯುವಂತಾಗಿದೆ. ಹಣ ಇದ್ದವರು ಶಿರಾಳಕೊಪ್ಪ, ಆನಂದಪುರ, ಹೊನ್ನಾಳಿ ಎಸ್‌ಬಿಐ ಬ್ಯಾಂಕ್‌ಗೆ ತೆರಳಿ ತಾಲೂಕಿನ ಜನರು ಆಧಾರ್‌ ಕಾರ್ಡ್‌ ಮಾಡಿಸುತ್ತಿದ್ದಾರೆ. ಬಡವರು ಮಾತ್ರ ಸೌಲಭ್ಯವೂ ಸಿಗದೆ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುಮ್ಮನಾಗುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next