Advertisement

ಯೋಜನೆಗಳ ಸಮರ್ಪಕ ಅನುಷ್ಠಾನವಾಗಲಿ

11:51 AM Jun 19, 2019 | Team Udayavani |

ಶಿವಮೊಗ್ಗ: ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ವಿವಿಧ ಇಲಾಖೆಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ತಿಳಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಎಲ್ಲಾ ಇಲಾಖೆಗಳಲ್ಲಿನ ಅನುದಾನದ ಶೇ.15ರಷ್ಟನ್ನು ಜೈನರು, ಸಿಖ್ಕರು, ಪಾರ್ಸಿಗಳು, ಮುಸ್ಲಿಮರು, ಕ್ರೈಸ್ತರು ಹಾಗೂ ಬೌದ್ಧರನ್ನು ಒಳಗೊಂಡ ಅಲ್ಪಸಂಖ್ಯಾತ ಸಮುದಾಯದ ಜನರ ಅಭಿವೃದ್ಧಿಗಾಗಿ ಮೀಸಲಿರಿಸಿ ಅನುಷ್ಠಾನಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಹಲವು ಇಲಾಖೆಗಳಲ್ಲಿ ಅಲ್ಪಸಂಖ್ಯಾತರಿಗಾಗಿ ನಿಗದಿಪಡಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಅರ್ಜಿಗಳು ಬರಲಿಲ್ಲ ಎಂದು ನೆಪಗಳನ್ನು ಹೇಳದೆ ಲಭ್ಯ ಯೋಜನೆಗಳ ಕುರಿತು ಜನರಿಗೆ ಮಾಹಿತಿಯನ್ನು ನೀಡಿ ಅನುಷ್ಠಾನಗೊಳಿಸಬೇಕು ಎಂದು ಅವರು ಹೇಳಿದರು.

ಶಿಕ್ಷಣ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ, ತೋಟಗಾರಿಕಾ ಇಲಾಖೆ, ಪಶುಪಾಲನಾ ಮತ್ತು ಪಶು ಸಂಗೋಪನಾ ಇಲಾಖೆ, ಮೀನುಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಳಚೆಗೇರಿ ಅಭಿವೃದ್ಧಿ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಸತಿ ಯೋಜನೆಗಳು ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ನಿಧಿಯನ್ನು ಮೀಸಲಿರಿಸಲಾಗಿದ್ದು, ಕಾಲಮಿತಿಯ ಒಳಗಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಕೃಷಿ ಇಲಾಖೆಯಲ್ಲಿ ಕಳೆದ ಸಾಲಿನಲ್ಲಿ ಅಲ್ಪಸಂಖ್ಯಾತರಿಗಾಗಿ ರಾಜ್ಯ ವಲಯದಲ್ಲಿ 1.97ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದ್ದು, ಕೇವಲ 62ಲಕ್ಷ ರೂ. ವೆಚ್ಚ ಮಾಡಲಾಗಿದೆ. ಕೃಷಿ ಯಾಂತ್ರೀಕರಣದಲ್ಲಿ ಶೇ.9ರಷ್ಟು, ಕೃಷಿ ಸಂಸ್ಕರಣಾ ಘಟಕದಲ್ಲಿ ಶೇ.3ರಷ್ಟು, ಸೂಕ್ಷ್ಮ ನೀರಾವರಿ ಯೋಜನೆಯಡಿ ಕೇವಲ ಶೇ.3ರಷ್ಟು ಪ್ರಗತಿ ಸಾಧಿಸಲಾಗಿದ್ದು, ಒಟ್ಟಾರೆಯಾಗಿ ಶೇ.6ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಇದೇ ರೀತಿ ಜಿಲ್ಲಾ ವಲಯದಲ್ಲಿ ಶೇ.3ರಷ್ಟು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಶೇ.4ರಷ್ಟು ಮಾತ್ರ ಪ್ರಗತಿ ಇದೆ.

Advertisement

ತೋಟಗಾರಿಕಾ ಇಲಾಖೆಯಲ್ಲಿ ಕಳೆದ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ 18.95ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕೇವಲ 26ಲಕ್ಷ ರೂ. ವೆಚ್ಚ ಮಾಡಲಾಗಿದೆ. ರಾಜ್ಯ ಯೋಜನೆಯಡಿ 3.11ಕೋಟಿ ರೂ. ಬಿಡುಗಡೆಯಾಗಿದ್ದು 18ಲಕ್ಷ ರೂ. ವೆಚ್ಚವಾಗಿದೆ. ಜಿಲ್ಲಾ ಯೋಜನೆಯಡಿ 91ಲಕ್ಷ ರೂ. ಬಿಡುಗಡೆಯಾಗಿದ್ದು 5ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಮೀನುಗಾರಿಕಾ ಇಲಾಖೆಯಲ್ಲಿ ಒಟ್ಟು 12.80ಲಕ್ಷ ರೂ. ಬಿಡುಗಡೆಯಾಗಿದ್ದು, 1.80 ಲಕ್ಷ ರೂ. ವೆಚ್ಚ ಮಾಡಲಾಗಿದೆ. ರೇಷ್ಮೆ ಇಲಾಖೆಯಲ್ಲಿ 69ಲಕ್ಷ ರೂ. ಬಿಡುಗಡೆಯಾಗಿದ್ದು, 3.54 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಅಡಿಯಲ್ಲಿ ಪ್ರಧಾನಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯಡಿ 40ಭೌತಿಕ ಗುರಿ ಇದ್ದು ಕೇವಲ 5 ಗುರಿ ಸಾಧಿಸಲಾಗಿದೆ. ಈ ಅವಧಿಯಲ್ಲಿ 1 ಕೋಟಿ ರೂ. ಗುರಿ ನಿಗದಿಪಡಿಸಲಾಗಿದ್ದು, 9.76ಲಕ್ಷ ರೂ. ವೆಚ್ಚ ಮಾಡಲಾಗಿದೆ. ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನೆ ಯೋಜನೆಯಡಿ 43 ಭೌತಿಕ ಗುರಿ ಇದ್ದು ಕೇವಲ 2 ಗುರಿ ಸಾಧಿಸಲಾಗಿದೆ. 1.20 ಕೋಟಿ ರೂ. ಗುರಿ ನಿಗದಿ ಪಡಿಸಲಾಗಿದ್ದು 2.90 ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಯೋಜನೆಗಳ ಬಗ್ಗೆ ಅಲ್ಪಸಂಖ್ಯಾತ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಇಲಾಖೆ ವತಿಯಿಂದ ಮಾಡಬೇಕು. ನಿಗದಿತ ಗುರಿಯನ್ನು ಸಾಸದೇ ಇರುವ ಇಲಾಖೆಗಳು ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು. ಜಿಪಂ ಉಪ ಕಾರ್ಯದರ್ಶಿ ರಂಗಸ್ವಾಮಿ, ಅಲಸ್ಪಂಖ್ಯಾತ ಕಲ್ಯಾಣ ಅಧಿಕಾರಿ ಧರ್ಮಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next