Advertisement

ಅಭಿವೃದ್ಧಿ ಕಾಮಗಾರಿ ಅನುದಾನಕ್ಕೆ ಪ್ರಸ್ತಾವನೆ

12:05 PM Sep 01, 2019 | Team Udayavani |

ಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖಾ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿ, ಅವರ ಸಮ್ಮುಖದಲ್ಲಿ ಚರ್ಚಿಸಿ, ಅಗತ್ಯ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗುವುದು ಎಂದು ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಹೇಳಿದರು.

Advertisement

ಶನಿವಾರ ಜಿಪಂ ಅಬ್ದುಲ್ ನಜೀರ್‌ಸಾಬ್‌ ಸಭಾಂಗಣದಲ್ಲಿ ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಲಾಖೆ ಸಿಬ್ಬಂದಿ ಕೊರತೆಯನ್ನು ನೀಗಿಸಲು ನಿವೃತ್ತ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದೆಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಮತ್ತು ಅಂಗನವಾಡಿ ಕಟ್ಟಡಗಳ ಸರ್ವಾಂಗೀಣ ವಿಕಾಸಕ್ಕಾಗಿ ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ಕೊಡುಗೈ ದಾನಿಗಳ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಅನೇಕ ಸಂಘ-ಸಂಸ್ಥೆಗಳು ಸಹಕಾರ ನೀಡುವುದಾಗಿ ಭರವಸೆ ನೀಡಿವೆ. ಶಿವಮೊಗ್ಗ ನಗರದಲ್ಲಿ ಈಗಾಗಲೇ ಸಭೆ ನಡೆಸಿ, ಕಟ್ಟಡಗಳ ದುರಸ್ತಿಯ ಅಂದಾಜುಪಟ್ಟಿ ತಯಾರಿಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಭೆಗಳನ್ನು ನಡೆಸಿ, ಕಟ್ಟಡ ದುರಸ್ತಿಗಾಗಿ ಯತ್ನಿಸಲಾಗುವುದೆಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಶಾಲೆಗಳ ರಿಪೇರಿಗೆ ಆರ್‌ಡಿಪಿಆರ್‌ ಕಾಯ್ದೆಯಲ್ಲಿ ಗರಿಷ್ಠ 1.50 ಲಕ್ಷ ರೂ. ಮಾತ್ರ ಬಳಸಿಕೊಳ್ಳಬಹುದು. ಕೆಲವು ಶಾಲೆಗಳಿಗೆ 3 ರಿಂದ 4 ಲಕ್ಷ ರೂ. ಬೇಕಾಗುತ್ತದೆ. ಅರೆವರೆ ಕಾಮಗಾರಿ ಮಾಡಿದರೆ ಮತ್ತೆ ತೊಂದರೆಯಾಗುತ್ತದೆ. ಕಾಯಿದೆಯಲ್ಲಿ ಬದಲಾವಣೆ ತರಬೇಕು ಎಂದು ಒತ್ತಾಯಿಸಿದರು. ಸಚಿವರು ಇದಕ್ಕೆ ಪರಿಹಾರ ಸೂಚಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವೆ ಎಂದರು. ಸರಕಾರದಿಂದ ಕೊಡುವ 1.5 ಲಕ್ಷ ಪರಿಹಾರದ ಜತೆ ದಾನಿಗಳು ನೀಡುವ ಹಣವನ್ನೂ ಬಳಸಿಕೊಂಡು ದುರಸ್ತಿ ಮಾಡಲಾಗುವುದು. ಎಲ್ಲ ಶಾಲೆಗಳನ್ನು ಮತ್ತೂಮ್ಮೆ ಅಂದಾಜು ಪಟ್ಟಿ ತಯಾರಿಸಿ. ಪ್ರತಿ ತಾಲೂಕಿನಲ್ಲೂ ಸಭೆ ನಡೆಸಿ ದಾನಿಗಳಿಂದ ನೆರವು ಯಾಚಿಸಲಾಗುವುದು ಎಂದರು.

Advertisement

ಜಿಲ್ಲೆಯಲ್ಲಿ ಮಳೆಹಾನಿಯಿಂದ ಒಡೆದು ಹೋಗಿರುವ ಕೆರೆಕಟ್ಟೆ ಕಾಲುವೆಗಳ ದುರಸ್ತಿಗೊಳಿಸಿ, ನೀರನ್ನು ಸಂಗ್ರಹಿಸುವ ತುರ್ತು ಅಗತ್ಯವಿದೆ. ಇದು ಮುಂದೆ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಸೃಷ್ಟಿಸಬಹುದಾಗಿದೆ. ಆದ್ದರಿಂದ ಅವುಗಳ ದುರಸ್ತಿಗೆ ಅಗತ್ಯ ಅನುದಾನ ಮಂಜೂರು ಮಾಡುವಂತೆ ಶಾಸಕ ಕೆ.ಬಿ. ಅಶೋಕನಾಯ್ಕ ಅವರ ಕೋರಿಕೆಗೆ ಸಚಿವರು ಅಗತ್ಯ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.

ಈಗಾಗಲೇ ಜಿಲ್ಲೆಯಲ್ಲಿ ಶಿಥಿಲವಾಗಿರುವ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಕಡಿಮೆ ಮೊತ್ತದ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸಿ, ನಂತರ ಹೆಚ್ಚಿನ ಮೊತ್ತವನ್ನು ನಿರೀಕ್ಷಿಸುವ ಕಾಮಗಾರಿಗಳನ್ನು ನಂತರದ ಹಂತಕ್ಕೆ ಬೇಡಿಕೆ ಪಟ್ಟಿಯನ್ನು ಸಲ್ಲಿಸುವಂತೆ ಅವರು ಸೂಚಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ನೆರವಿನಿಂದ 2012ರಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಕೋಟ್ಯಂತರ ರೂ.ಗಳ ಅನುದಾನ ಬಿಡುಗಡೆಯಾಗಿದ್ದರೂ ಇನ್ನೂ ಅನೇಕ ಕಟ್ಟಡಗಳು ಪೂರ್ಣಗೊಳ್ಳದೆ ಹಾಗೇ ಉಳಿದಿವೆ. ಇನ್ನೂ ಕೆಲವು ಕಟ್ಟಡಗಳ ಕಾಮಗಾರಿಗಳೇ ಆರಂಭಗೊಂಡಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಸಚಿವರ ಗಮನಕ್ಕೆ ತಂದರು. ಅದಕ್ಕೆ ಸಚಿವರು ಈ ಸಂಬಂಧ ಗುತ್ತಿಗೆದಾರರು ಹಾಗೂ ಇಲಾಖೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ತ್ವರಿತವಾಗಿ ಕಟ್ಟಡ ನಿರ್ಮಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿಕೊಡಲು ಸೂಚಿಸುವುದಾಗಿ ತಿಳಿಸಿದರು.

ಮಲೆನಾಡಿನ ಶಾಲೆಗಳ ಅಡುಗೆ ಕೋಣೆಗಳು ಸೋರುತ್ತಿವೆ. ತಕ್ಷಣವೇ ಅವುಗಳ ದುರಸ್ತಿಗೆ ಹಣ ಬಿಡುಗಡೆ ಮಾಡಬೇಕು ಎಂದರು. 2006-07ರಲ್ಲಿ ಅಡುಗೆ ಕೋಣೆ ನಿರ್ಮಾಣಕ್ಕೆ 60 ಸಾವಿರ ನೀಡಲಾಗಿತ್ತು. ಸ್ಲೋಪ್‌ ಮಾಡಿದ್ದರೆ ಸೋರುತ್ತಿರಲಿಲ್ಲ. 60 ಸಾವಿರಕ್ಕೆ ಮಾಡಿ ಅಂದರೆ ಈ ರೀತಿ ಸಮಸ್ಯೆ ಆಗುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಅಗತ್ಯವಿರುವಷ್ಟು ಹಣ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 4836 ಮನೆಗಳ ನಿರ್ಮಾಣಕ್ಕೆ ರಾಜೀವ ಗಾಂಧಿ ವಸತಿ ಯೋಜನೆಯಡಿ ಮಂಜೂರಾತಿ ದೊರೆತಿದ್ದು, ಅದಕ್ಕೆ ಪೂರಕವಾಗಿ ಫಲಾನುಭವಿಗಳು ಇಲ್ಲದಿರುವುದರಿಂದ ಸದ್ಯ ಅರ್ಜಿ ಸಲ್ಲಿಸಿರುವ ನಗರ ಆಶ್ರಯ ಮನೆಗಳ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು. ಆಗ ಸಚಿವರು ಉಳಿದ ಮನೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸುವಂತೆ ಆಯುಕ್ತರಿಗೆ ಸೂಚಿಸಿದರು. ಉಳಿದಂತೆ ಸಿದ್ಲೀಪುರದಲ್ಲಿ ಕೈಗಾರಿಕಾ ಕಾರ್ಮಿಕರಿಗಾಗಿ ಕಾಯ್ದಿರಿಸಲಾಗಿರುವ ಜಾಗದಲ್ಲಿ ಮನೆಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜ್‌, ಮಹಾನಗರ ಪಾಲಿಕೆ ಮಹಾಪೌರರಾದ ಲತಾ ಗಣೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next