ಶಿವಮೊಗ್ಗ: ಎಂದೂ ಕಾಣದ ಮಳೆಯಿಂದ ಇಡೀ ಶಿವಮೊಗ್ಗ ಜಿಲ್ಲೆಯೇ ನರಕಸದೃಶವಾಗಿತ್ತು. ಮಳೆ ನೀರು ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ಜನ ರಸ್ತೆ, ನೆಲ ಕಾಣದೇ ಆತಂಕಗೊಂಡಿದ್ದರು. ಇಂತಹ ಸಂದರ್ಭದಲ್ಲಿ ನೆರವಾಗಿದ್ದೆ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ಪೊಲೀಸ್, ಮೆಸ್ಕಾಂ, ಅರಣ್ಯ ಹಾಗೂ ಇತರೆ ಇಲಾಖೆಗಳ ಸಿಬ್ಬಂದಿ.
Advertisement
ಅಗ್ನಿಶಾಮಕ ದಳ ಎಂದರೆ ಬೆಂಕಿ ನಂದಿಸುವುದಷ್ಟೇ ಎಂದು ಬಹುತೇಕರು ತಿಳಿದಿದ್ದಾರೆ. ಆದರೆ ಅವರಲ್ಲೊಬ್ಬ ಈಜುಗಾರ, ಸಾಹಸಿ ಇದ್ದಾನೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಶಿವಮೊಗ್ಗ ಅಗ್ನಿಶಾಮಕ ದಳವು ನೆರೆ ಸಂದರ್ಭದಲ್ಲಿ ಹಗಲು- ರಾತ್ರಿ, ನೀರು ಪ್ರವಾಹ ಲೆಕ್ಕಿಸದೆ ಕೆಲಸ ಮಾಡಿದೆ. 991 ಮಂದಿಯನ್ನು ರಕ್ಷಣೆ ಮಾಡಿರುವುದೇ ಇದಕ್ಕೆ ಉದಾಹರಣೆ. ಶಿವಮೊಗ್ಗದ ಅಣ್ಣಾ ನಗರ, ಆರ್.ಎಂ.ಎಲ್. ನಗರ, ಶಾಂತಮ್ಮ ಲೇಔಟ್, ಗುಡ್ಡೇಕಲ್, ರಾಮಣ್ಣ ಶ್ರೇಷ್ಠಿ ಪಾರ್ಕ್, ಗುಂಡಪ್ಪ ಶೆಡ್, ಮಲ್ಲೇಶ್ವರ ನಗರ, ವಿದ್ಯಾನಗರ, ಶಾದಿ ಮಹಲ್, ನ್ಯೂ ಮಂಡ್ಲಿ, ಭಾರತಿ ಕಾಲೋನಿ, ನಿಸರ್ಗ ಲೇಔಟ್ ಜಲಾವೃತವಾಗಿ, ಮನೆಯಿಂದ ಜನರು ಹೊರಗೆ ಬಾರದ ಸ್ಥಿತಿಗೆ ತಲುಪಿದ್ದರು. ಮಳೆ ಪ್ರಮಾಣ ಹೆಚ್ಚಳವಾಗಿ ನೀರಿನ ಮಟ್ಟ ಏರಿಕೆ ಆಗಿದ್ದರೆ ಇಲ್ಲಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ ಅಷ್ಟರಲ್ಲಿ ಕಾರ್ಯಾಚರಣೆಗೆ ಇಳಿದ ಅಗ್ನಿಶಾಮಕ ಸಿಬ್ಬಂದಿ ಇಲ್ಲಿಂದ 831 ಜನರನ್ನು ಕಾಪಾಡಿದರು. ಭದ್ರಾವತಿಯ ಹೊಳೆಹೊನ್ನೂರಿನಲ್ಲಿ 55 ಜನ, ಸಾಗರದ ನೀರಕೊಡು ಬಡಾವಣೆ, ಗಣಪತಿ ಕೆರೆ ಬಳಿ, ವಿನೋಬನಗರ, ದುಗಾಂರ್ಬಾ ಸರ್ಕಲ್, ಸೊರಬ ರಸ್ತೆಯಲ್ಲಿ 9 ಜನ, ಸೊರಬ ತಾಲೂಕಿನ ಲಕ್ಕವಳ್ಳಿ, ಮೂಗೂರು, ಹಾಯ್‌ಹೊಳೆ, ನೆಲ್ಲಿಕೇರಿ ಗ್ರಾಮಗಳಲ್ಲಿ 34 ಜನ, ತೀರ್ಥಹಳ್ಳಿಯ ಆರಗ, ಇಂದಾವರ, ಕನ್ನಂಗಿ ಬಳಿಯ ಅತ್ತಿಗದ್ದೆ, ಶಿಲಕುಣಿ, ಮಹಿಷಿ ಗ್ರಾಮಗಳಲ್ಲಿ 40 ಜನ, ಹೊಸನಗರದ ಸೂಡೂರು ಗ್ರಾಮದಲ್ಲಿ 22 ಜನರನ್ನು ಅಗ್ನಿಶಾಮಕ ಸಿಬ್ಬಂದಿ ಕಾಪಾಡಿದ್ದಾರೆ. ಇನ್ನು, ಜಿಲ್ಲಾದ್ಯಂತ 43 ಪ್ರಾಣಿಗಳನ್ನು ಅಗ್ನಿಶಾಮಕ ಸಿಬ್ಬಂದಿಯೇ ರಕ್ಷಣೆ ಮಾಡಿ, ವಾರಸುದಾರರಿಗೆ ತಲುಪಿಸಿದ್ದಾರೆ. ಶಿವಮೊಗ್ಗದ 60 ಅಗ್ನಿಶಾಮಕ ಸಿಬ್ಬಂದಿ ಹಗಲು ರಾತ್ರಿ ಅನ್ನದೆ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ. ಮನೆ, ಕುಟುಂಬನ್ನಲ್ಲದೆ ಜನರ ರಕ್ಷಣೆ ಮಾಡಿದ್ದಾರೆ. ಜಿಲ್ಲೆಯ 60 ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ರಾತ್ರೋರಾತ್ರಿ ನದಿಮಟ್ಟ ಏರಿಕೆಯಾಗಿ ಮನೆ-ಮಠಗಳಿಗೆಲ್ಲ ನೀರು ನುಗ್ಗಿತ್ತು. ಮನುಷ್ಯರ ನೆರವಿಗಾಗಿ ನೂರಾರು ಜನ ಬಂದಿದ್ದರು. ಆದರೆ ಮೂಕಪ್ರಾಣಿಗಳು ಮಾತ್ರ ಜೀವಬಿಗಿ ಹಿಡಿದು ವೇದನೆ ಅನುಭವಿಸುತ್ತಿದ್ದವು. ಇಂತಹ ಸಂದರ್ಭದಲ್ಲಿ ರಕ್ಷಣೆಗೆ ಧಾವಿಸಿದ್ದೇ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ. ಆ. 10 ರಂದು ಶಿವಮೊಗ್ಗದ ಮಹಾವೀರ ಜೈನ್ ಗೋಶಾಲೆ ಜಲಾವೃತವಾಗಿತ್ತು. ಹಾಗಾಗಿ ಗೋ ಶಾಲೆ ಸಿಬ್ಬಂದಿ ಅಲ್ಲಿಗೆ ತೆರಳಲು ಅಸಾಧ್ಯವಾಗಿತ್ತು. ಗೋ ಶಾಲೆಯೊಳಗೆ ನೀರು ನುಗ್ಗಿ, ಇಡೀ ರಾತ್ರಿ ನೀರಿನಲ್ಲಿ ಕಳೆದ ಗೋವುಗಳು, ಕೂಗಲು ಆರಂಭಿಸಿದ್ದವು. ಆದರೆ ಗೋವುಗಳ ಧ್ವನಿ ಕೇಳಿದರೂ ರಕ್ಷಣೆ ಮಾಡಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ವಿದ್ಯಾನಗರ ಜಲಾವೃತ ಪ್ರದೇಶದಲ್ಲಿ ಜನರ ಸುರಕ್ಷತೆಯ ಬಂದೋಬಸ್ತ್ ಡ್ಯೂಟಿಗೆ ಬಂದಿದ್ದ ಕೋಟೆ ಪಿಎಸ್‌ಐ ಮತ್ತು ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ವಿಚಾರ ತಿಳಿಯುತ್ತಿದ್ದಂತೆ, ಗೋವುಗಳ ರಕ್ಷಣಾ ಕಾರ್ಯಕ್ಕೆ ಧುಮುಕಿದರು. ಜಲಾವೃತ ಗೋಶಾಲೆಗೆ ತಲುಪಿ, ನೀರಿನಲ್ಲಿದ್ದ 200ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಿದರು. ಗೋಶಾಲೆಯಲ್ಲಿಯೇ ಸುರಕ್ಷಿತ ಜಾಗಕ್ಕೆ ಅವುಗಳನ್ನು ಸ್ಥಳಾಂತರಿಸಿದರು. ಗೋಶಾಲೆಯಲ್ಲಿದ್ದ ಮೇವು ತಂದು ಗೋವುಗಳಿಗೆ ಹಾಕಿದರು. ಇಡೀ ರಾತ್ರಿ ನೀರಿನಲ್ಲಿ ಕಳೆದಿದ್ದರಿಂದ ಸಮಾರು 15 ಗೋವುಗಳು ಮೃತಪಟ್ಟಿದ್ದವು. ಇನ್ನಷ್ಟು ಗೋವುಗಳ ಸ್ಥಿತಿ ಗಂಭೀರವಾಗಿತ್ತು. ಹಾಗಾಗಿ ವೈದ್ಯರನ್ನು ಕರೆಸಿ ಪೊಲೀಸರೇ ಅವುಗಳಿಗೆ ಚಿಕಿತ್ಸೆ ಕೊಡಿಸಿದರು. ಕೋಟೆ ಠಾಣೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.