Advertisement

ನೆರೆ ಪರಿಹಾರ ಒದಗಿಸಲು ಸೂಚನೆ

05:06 PM Nov 08, 2019 | |

ಶಿವಮೊಗ್ಗ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನಿರೀಕ್ಷಿತವಾಗಿ ಉಂಟಾಗುತ್ತಿರುವ ಮಳೆಯಿಂದಾಗಿರುವ ಹಾನಿಗೆ ಪರಿಹಾರ ಒದಗಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅತಿವೃಷ್ಟಿ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಲ್ಲಿ 30ಮಿಮೀನಷ್ಟು ಮಳೆ ದಾಖಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿ ಕಟ್ಟಿಕೊಂಡು ಹಲವು ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಕಳೆದ ಎರಡು ದಿನಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ವಿವರಗಳನ್ನು ತಕ್ಷಣ ಸಲ್ಲಿಸಬೇಕು ಎಂದರು.

ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಲೆಕ್ಕಿಗರು, ಪಿಡಿಒಗಳು ಕೇಂದ್ರಸ್ಥಾನದಲ್ಲಿರಬೇಕು. ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ಎಲ್ಲಾ ಸಾಧನ ಸಲಕರಣೆಗಳೊಂದಿಗೆ ಸಜ್ಜಾಗಿರಬೇಕು. ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ತಹಶೀಲ್ದಾರ್‌ಗಳಿಗೆ ಎಚ್ಚರಿಕೆ: ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಮನೆ ಗೋಡೆ ಕುಸಿದು ಹಲವು ಸಾವು ಸಂಭವಿಸಿವೆ. ಕುಸಿದು ಬೀಳುವ ಸಾಧ್ಯತೆಗಳಿರುವ ಮನೆಗಳನ್ನು ಗುರುತಿಸಿ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಕನಿಷ್ಠ ಮೂರು ದಿನಗಳಿಗೆ ಒಮ್ಮೆ ಭೇಟಿ ನೀಡಿ ವರದಿ ಸಲ್ಲಿಸಬೇಕು. ಅಪಾಯಕಾರಿ ಸ್ಥಿತಿಯಲ್ಲಿರುವ ಕೊಠಡಿಗಳನ್ನು ತಕ್ಷಣ ತೆರವುಗೊಳಿಸಬೇಕು. ಇದೇ ರೀತಿ ಅಂಗನವಾಡಿಗಳನ್ನು ಸಹ ಪರಿಶೀಲಿಸಿ ವರದಿಯನ್ನು ಸಲ್ಲಿಸಬೇಕು. ಏನಾದರೂ ಅನಾಹುತ ಸಂಭವಿಸಿದರೆ ತಹಶೀಲ್ದಾರ್‌ ಗಳನ್ನು ನೇರ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪರಿಹಾರ ಒದಗಿಸಲು ಕ್ರಮ: ಶಾಲಾ ಕೊಠಡಿಗಳ ಪುನರ್‌ ನಿರ್ಮಾಣ, ದುರಸ್ತಿ ಇತ್ಯಾದಿಗಳಿಗಾಗಿ ಈಗಾಗಲೇ 30 ಕೋಟಿ ರೂ. ಅನುದಾನ ಜಿಪಂಗೆ ಬಿಡುಗಡೆ ಮಾಡಲಾಗಿದೆ. ಅಂಗನವಾಡಿ ದುರಸ್ತಿ ಪ್ರಸ್ತಾಪ ಸಲ್ಲಿಸಿದರೆ ಅನುದಾನ ಒದಗಿಸಲಾಗುವುದು. ಪ್ರಾಣಹಾನಿ ಪ್ರಕರಣಗಳಲ್ಲಿ ಮಾರ್ಗಸೂಚಿ ಪ್ರಕಾರ ತಕ್ಷಣ ಪರಿಹಾರ ಒದಗಿಸಬೇಕು. ಬೆಳೆ ಹಾನಿ ಪ್ರಕರಣಗಳಲ್ಲಿ ಕಂದಾಯ ಹಾಗೂ ಕೃಷಿ, ತೋಟಗಾರಿಕಾ ಇಲಾಖೆ ತಂಡ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಆ್ಯಪ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಬೇಕು. ಬೆಳೆ ಹಾನಿ ಕುರಿತಾಗಿ ಸ್ವೀಕರಿಸಲಾಗಿರುವ ಎಲ್ಲಾ ಅರ್ಜಿಗಳನ್ನು ನಾಳೆಯೊಳೆಗೆ ಅಪ್‌ಲೋಡ್‌ ಮಾಡಬೇಕು ಎಂದರು.

Advertisement

ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್‌ ನಡೆಸಿ ಮಾಹಿತಿ ಪಡೆದರು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಾಲಮನ್ನಾ ಸಮಿತಿಯ ಮುಂದೆ 721ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು, ತಕ್ಷಣ ವಿಲೇವಾರಿ ಮಾಡಬೇಕು. ಅಡಕೆ ಕೊಳೆ ರೋಗ ಹಾನಿ ಪರಿಶೀಲನೆ ಕಾರ್ಯ ಚುರುಕುಗೊಳಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ, ಉಪ ವಿಭಾಗಾಧಿಕಾರಿ ಪ್ರಕಾಶ್‌, ಜಿಪಂ ಉಪ ಕಾರ್ಯದರ್ಶಿ ಡಾ| ರಂಗಸ್ವಾಮಿ, ನಗರ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಾಳಿ, ತಹಶೀಲ್ದಾರ್‌ ಗಿರೀಶ್‌ ಮತ್ತಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next