•ಶರತ್ ಭದ್ರಾವತಿ
ಶಿವಮೊಗ್ಗ: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಅಪಾರ ಕೊಡುಗೆಗಳನ್ನು ಕೊಟ್ಟಿದ್ದರು. ನಂತರ ಬಂದ ಕಾಂಗ್ರೆಸ್ ಸರಕಾರ ಗುರುತರವಾದ ಯೋಜನೆಗಳನ್ನೇನು ಕೊಡಲಿಲ್ಲ. ಈಗಿರುವ ಸಮ್ಮಿಶ್ರ ಸರಕಾರದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡಲಾಗಿದ್ದರೂ ಅವು ಫಲ ಕೊಡಲು ನಾಲ್ಕೈದು ವರ್ಷಗಳೇ ಬೇಕು. ಜಿಲ್ಲೆಯ ಪ್ರಮುಖ ಬೇಡಿಕೆಗಳು ಇನ್ನೂ ಮರೀಚಿಕೆಯಾಗಿವೆ.
ಜಿಲ್ಲೆಯ ಪ್ರಮುಖ ಬೇಡಿಕೆಗಳಾಗಿರುವ ವಿಮಾನ ನಿಲ್ದಾಣ, ಕೈಗಾರಿಕಾ ಕ್ಲಸ್ಟರ್, ಪ್ರವಾಸಿ ತಾಣಗಳ ಅಭಿವೃದ್ಧಿ, ಎಂಪಿಎಂ ಕಾರ್ಖಾನೆ ಪುನಾರಂಭ, ಬಗರ್‌ಹುಕುಂ ಸಮಸ್ಯೆಗೆ ಪರಿಹಾರ ಇತರೆ ವಿಷಯಗಳ ಬಗ್ಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.
ಕಾಂಗ್ರೆಸ್ ಸರಕಾರದ ಐದು ವರ್ಷದ ಅವಧಿಯಲ್ಲಿ ಡಿಗ್ರಿ ಕಾಲೇಜು, ಶಿವಮೊಗ್ಗ ನಗರಸಭೆ ಪಾಲಿಕೆಯಾಗಿ ಉನ್ನತೀಕರಣ, ಕೃಷಿ ಮತ್ತು ತೋಟಗಾರಿಕೆ ವಿವಿಗೆ ಹೊಸ ಕ್ಯಾಂಪಸ್, ನಿಗೂಢ ರೋಗಗಳ ಸಂಶೋಧನಾ ಕೇಂದ್ರ ನೀಡಲಾಗಿತ್ತು ಇದರಿಂದ ಮಂಗನ ಕಾಯಿಲೆ ವೈರಾಣು ಪತ್ತೆಗೆ ಅನುಕೂಲವಾಗಿದೆ. ದಾವಣಗೆರೆ ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಸಿಕ್ಕಿದೆ. ಇದರಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಇನ್ನೂ ಪೂರ್ಣಗೊಂಡಿಲ್ಲ. ಜೋಗ ಜಲಪಾತದ ನೀರು ಮರು ಬಳಕೆ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸಮ್ಮಿಶ್ರ ಸರಕಾರದ ಮೊದಲ ಬಜೆಟ್‌ನಲ್ಲಿ ತಾಯಿನಾಡು ಭದ್ರತಾ ವಿಶ್ವವಿದ್ಯಾಲಯ ನೀಡುವ ಒಂದೇ ಒಂದು ಭರವಸೆ ನೀಡಲಾಗಿತ್ತು. ಆ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಇಲ್ಲ. ಈ ಬಾರಿ ಪ್ರಮುಖವಾಗಿ ಏತ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಯೋಜನೆಗಳನ್ನು ಹೊರತುಪಡಿಸಿದರೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಅಪರೂಪಕ್ಕೆ ಭೇಟಿ ನೀಡುತ್ತಾರೆ ಎಂಬ ಆರೋಪಗಳಿವೆ.