Advertisement

ಸ್ಮಶಾನ ಭೂಮಿ ಇಲ್ಲದೆ ಜನರ ಪರದಾಟ!

12:34 PM May 03, 2019 | Naveen |

ಶಿವಮೊಗ್ಗ: ಮನುಷ್ಯ ಬದುಕಿದ್ದಾಗ ಸ್ವಂತ ಭೂಮಿ, ಮನೆ ಇಲ್ಲದಿದ್ದರೂ ಸತ್ತಾಗಲಾದರೂ ಆರಡಿ, ಮೂರಡಿ ಜಾಗ ಬೇಕೆ ಬೇಕು. ಆದರೆ ಜಿಲ್ಲೆಯ 900ಕ್ಕೂ ಹೆಚ್ಚು ಗ್ರಾಮಗಳು ಸತ್ತಾಗ ಹೂಳಲು ಜಾಗವಿಲ್ಲದೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ.

Advertisement

ರಾಜ್ಯದಲ್ಲೇ ಅತಿ ಹೆಚ್ಚು ಸರಕಾರಿ ಭೂಮಿ ಸಾಗುವಳಿ, ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳಿರುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಇದೇ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ಜಾಗಕ್ಕೆ ತೊಡಕಾಗಿದೆ.

ಎಷ್ಟು ಕೊರತೆ?: ಜಿಲ್ಲೆಯಲ್ಲಿ ಜನವಸತಿ ಇರುವ 1484 ಗ್ರಾಮಗಳು ಮತ್ತು 135 ಬೇಚರಾಕ ಗ್ರಾಮಗಳು ಸೇರಿ 1619 ಹಳ್ಳಿಗಳಿವೆ. ಇವುಗಳಲ್ಲಿ 580 ಹಳ್ಳಿಗಳಲ್ಲಿ ಮಾತ್ರ ಸ್ಮಶಾನ ಇದ್ದರೆ, 1039 ಗ್ರಾಮಗಳಲ್ಲಿ ಸ್ಮಶಾನ ಇಲ್ಲ. ಇವುಗಳಲ್ಲಿ 35 ಗ್ರಾಮಗಳಲ್ಲಿ ಸರಕಾರಿ ಭೂಮಿಯನ್ನು ಸ್ಮಶಾನಕ್ಕಾಗಿ ಗುರುತಿಸಲಾಗಿದೆ. ಉಳಿದ 904 ಗ್ರಾಮಗಳಿಗೆ ಸರಕಾರಿ ಭೂಮಿಯೂ ಇಲ್ಲದಿರುವುದರಿಂದ ಸತ್ತವರ ಸಂಸ್ಕಾರವನ್ನು ರಸ್ತೆ, ಹಳ್ಳ, ನದಿ, ನಾಲೆ ಬದಿ ಅಥವಾ ಅರಣ್ಯ ಭೂಮಿಯಲ್ಲಿ ನಡೆಸಲಾಗುತ್ತಿದೆ.

ಇದ್ದಾಗ ಸುಖಪಡಲಿಲ್ಲ. ಸತ್ತಾಗಲಾದರೂ ಗೊಂದಲ- ಗೋಜಲುಗಳಿಲ್ಲದೆ ಮುಕ್ತಿ ಕೊಡಿ ಎಂದು ಹಿರಿಯರು ಹೇಳತ್ತಾರೆ. ಆದರೆ, ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸಾವಾದಾಗಲೆಲ್ಲ ಗೊಂದಲಗಳು ಎದುರಾಗುತ್ತವೆ. ರಸ್ತೆ, ನದಿ, ನಾಲೆ ಬದಿಯಲ್ಲಿ ಜನರ ಬೈಯ್ಗುಳದ ನಡುವೆಯೂ ಸಂಸ್ಕಾರ ಮಾಡಬೇಕಾದ ಸ್ಥಿತಿ ಇದೆ. ಕೆಲವೆಡೆ ದೂರದ ಅರಣ್ಯ ಭೂಮಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಾಗದಂತೆ ಕದ್ದುಮುಚ್ಚಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

ಪ್ರತಿಭಟನೆ: ಪ್ರತಿ ತಿಂಗಳು ಒಂದಲ್ಲಾ ಒಂದು ಗ್ರಾಮದವರು ಸ್ಮಶಾನ ಭೂಮಿ ಗುರುತಿಸಿಕೊಡುವಂತೆ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಪಾದಿಸಿ ಕೆಲವರು ಗ್ರಾಪಂ ಎದುರಿನಲ್ಲೇ ಅಂತ್ಯಸಂಸ್ಕಾರಕ್ಕೆ ಹೊರಟ ಘಟನೆ‌ಗಳೂ ನಡೆದಿವೆ. ಕೂಡ್ಲಿ ಗ್ರಾಪಂನ ತರಗನಹಳ್ಳಿ ಗ್ರಾಮಸ್ಥರು ಇತ್ತೀಚೆಗೆ ಬಿ.ಬೀರನಹಳ್ಳಿ ತಿರುವಿನಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದ್ದರು. ಸೋಗಾನೆ ಗ್ರಾಪಂನಲ್ಲಿ ನಾಲೆ ಬದಿ ಹೂಳಬೇಕೆಂಬ ಕಾರಣಕ್ಕೆ ತಮ್ಮ ಸಂಸ್ಕೃತಿಗೆ ವಿರುದ್ಧವಾಗಿ ಶವವನ್ನು ಸುಟ್ಟಿದ್ದರು.

Advertisement

ಸ್ಮಶಾನದ ಇಂತಹ ಗಂಭೀರ ಸ್ಥಿತಿಯನ್ನು ಮನಗಂಡ ಸರಕಾರವು ಪ್ರತಿ ಗ್ರಾಮದಲ್ಲಿ ಕನಿಷ್ಠ ಎರಡು ಎಕರೆ ಸರಕಾರಿ ಭೂಮಿಯನ್ನು ಸ್ಮಶಾನಕ್ಕೆ ಮೀಸಲಿಟ್ಟು ಅಭಿವೃದ್ಧಿಪಡಿಸಲು ಅನುದಾನ ನೀಡುತ್ತಿದೆ. 394 ಗ್ರಾಮಗಳಲ್ಲಿ ಸರಕಾರಿ ಭೂಮಿಯನ್ನು ಗುರುತಿಸಲಾಗಿದೆ. ಆದರೆ, ಇಲ್ಲಿ ಅರಣ್ಯ ಇಲಾಖೆ, ಅಕ್ರಮವಾಗಿ ಸಾಗುವಳಿ ಮಾಡಿಕೊಂಡವರು ಮತ್ತು ಇತರರ ನಡುವೆ ವ್ಯಾಜ್ಯದಿಂದಾಗಿ ಸಮಸ್ಯೆ ಬಗೆ ಹರಿದಿಲ್ಲ. ಸರಕಾರಿ ಭೂಮಿ ಇಲ್ಲವಾದಲ್ಲಿ ಖಾಸಗಿ ಭೂಮಿಯನ್ನು ಖರೀದಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಮಶಾನ ನಿರ್ಮಿಸುವಂತೆ ಸರಕಾರ ಸೂಚನೆ ನೀಡಿದೆ. ಆದರೆ, ಸರಕಾರ ಕೊಡುವ ಸಾವಿರ ಲೆಕ್ಕದ ಮೊತ್ತಕ್ಕೆ ಲಕ್ಷಾಂತರ ರೂ. ಮೌಲ್ಯದ ಭೂಮಿ ಬಿಟ್ಟುಕೊಡಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಸ್ಮಶಾನ ಇಲ್ಲದವರ ಗೋಳು ಅರಣ್ಯರೋದನವಾಗಿದೆ.

ಮನೆ ಹಿರಿಯರು ಅಥವಾ ಸದಸ್ಯರು ಮೃತಪಟ್ಟಾಗ ಅವರ ಅಗಲಿಕೆ ನೋವು ಕುಟುಂಬದವರನ್ನು ದುಃಖದಲ್ಲಿ ಮುಳುಗಿಸುವುದಲ್ಲದೆ ಅವರ ಅಂತ್ಯ ಸಂಸ್ಕಾರ ಎಲ್ಲಿ ನಡೆಸಬೇಕೆಂಬ ಚಿಂತೆ ಮನೆಯವರ ಜತೆಗೆ ಊರವರನ್ನು ಕಾಡುತ್ತದೆ. ಏಕೆಂದರೆ ಸತ್ತವರಿಗೆ ಮುಕ್ತಿ ದೊರಕಿಸಲು ಶಿವಮೊಗ್ಗ ಜಿಲ್ಲೆಯ 904 ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಈ ಊರುಗಳಲ್ಲಿ ಹೊಲ, ತೋಟ ಹೊಂದಿರುವವರ ಕುಟುಂಬದವರು ಮೃತಪಟ್ಟರೆ ಸಮಸ್ಯೆ ಇಲ್ಲ. ಆದರೆ, ತುಂಡು ಭೂಮಿಯೂ ಇಲ್ಲದವರ ಮನೆಯಲ್ಲಿ ಸಾವಾದಲ್ಲಿ ಸಮಸ್ಯೆ ಬೆನ್ನಿಗೆ ಬರುತ್ತದೆ.

ಸತ್ತವರಿಗೆ ಮುಕ್ತಿ ದೊರಕಿಸಲು ಊರಿಗೊಂದು ಸ್ಮಶಾನ ಇರಬೇಕು ಎಂಬ ಕಾರಣಕ್ಕೆ ಬಹಳ ಹಿಂದಿನಿಂದಲೂ ಪ್ರತಿ ಊರಲ್ಲಿ ಸ್ಮಶಾನ ಭೂಮಿ ಗುರುತಿಸಲಾಗುತ್ತಿತ್ತು. ಊರುಗಳು ಬೆಳೆದಂತೆ, ಹೊಸ ಹಳ್ಳಿಗಳು, ಬಡಾವಣೆಗಳಾದ ಬಳಿಕ ಮನೆಗಳು, ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತೇ ಹೊರತು ಸ್ಮಶಾನಕ್ಕೆ ಭೂಮಿ ಗುರುತಿಸಲಿಲ್ಲ. ಹೂಳ್ಳೋದಕ್ಕೆ ಮೂರು ಅಡಿ ಜಾಗ ಇಲ್ಲದ ಮೇಲೆ ಎಷ್ಟು ಆಸ್ತಿ ಅಡವು ಮಾಡಿ ಏನು ಬಂತು ಎಂದು ಹಿರಿಯರು ಹೇಳುವುದರ ಮಾತಿನ ಹಿಂದೆ ಸ್ಮಶಾನದ ಮಹತ್ವ ಅರಿವಾಗುತ್ತದೆ. ಸರಕಾರಿ ಭೂಮಿ, ಕಂದಾಯ ಭೂಮಿ, ಅರಣ್ಯ ಭೂಮಿಗಳನ್ನು ಸಾಗುವಳಿ ಭೂಮಿಗಳನ್ನಾಗಿ ಮಾಡಿಕೊಂಡರೆ ಹೊರತು ಸತ್ತವರಿಗೆ ಮುಕ್ತಿ ದೊರಕಿಸಲು ಸ್ಮಶಾನ ನಿರ್ಮಿಸಲಿಲ್ಲ. ಪರಿಣಾಮ ಈಗ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ.

ಸರಕಾರ ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸರಕಾರಿ,
ಅರಣ್ಯ ಭೂಮಿ ಗುರುತಿಸಿ ಸ್ಮಶಾನ ಅಭಿವೃದ್ಧಿಪಡಿಸುವಂತೆ ಹೇಳಿದೆ. ಆದರೆ, ಸರಕಾರಿ ಭೂಮಿ ಈಗಾಗಲೆ ಒತ್ತುವರಿಯಾದರೆ, ಅರಣ್ಯ ಭೂಮಿ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪುತ್ತಿಲ್ಲ. ಖಾಸಗಿ ಭೂಮಿಗೆ ಸರಕಾರದ ಬೆಲೆಗೆ ಕೊಡಲು ಯಾರೂ ಸಿದ್ಧರಿಲ್ಲ. ಸಮಸ್ಯೆ ಬಗೆಹರಿಸಲಾಗುವುದು.
ಕೆ.ಎ. ದಯಾನಂದ್‌, ಡಿಸಿ

Advertisement

Udayavani is now on Telegram. Click here to join our channel and stay updated with the latest news.

Next