Advertisement

ವಿಸ್ಮಯ ಮೂಡಿಸಿದ ಒಂಭತ್ತು ಕವಲಿನ ಅಡಕೆ ಮರ!

03:50 PM Nov 30, 2019 | Naveen |

ಶಿವಮೊಗ್ಗ: ಪ್ರಕೃತಿಯು ತನ್ನ ಮಡಿಲೊಳಗೆ ಹತ್ತು ಹಲವು ಕುತೂಹಲವನ್ನು ಹುದಿಗಿಟ್ಟುಕೊಂಡಿದೆ. ಕೆಲವೊಮ್ಮೆ ವಿಚಿತ್ರಗಳನ್ನು ತೋರಿಸುತ್ತದೆ. ಹೌದು, ಆಗಾಗ ಪ್ರಕೃತಿಯಲ್ಲಿ ಅಲ್ಲೊಂದು ಇಲ್ಲೊಂದು ವಿಸ್ಮಯಗಳು ಕಾಣಸಿಗುತ್ತವೆ. ಅಂಥದ್ದೇ ಒಂದು ವಿಸ್ಮಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿದೆ. ಹೌದು ಇಂಥ ವಿಸ್ಮಯಕ್ಕೆ ಕಾರಣವಾಗಿರುವ ಅಪರೂಪದ ಅಡಕೆ ಮರ. ಅಡಕೆ ಮರದಲ್ಲಿ ಎಂಥ ವಿಶೇಷವಿದೆ ಎಂಬ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Advertisement

ಭದ್ರಾವತಿ ತಾಲೂಕು ಎಮ್ಮೆಹಟ್ಟಿ ಗ್ರಾಮದ ಮಂಜಪ್ಪ ಅವರ ತೋಟದಲ್ಲಿರುವ 18 ವರ್ಷದ ಅಡಕೆ ಮರ ಎಲ್ಲ ಮರಗಳಂತೆ ಸಾಮಾನ್ಯವಾಗಿಲ್ಲ. ಈ ಮರದ ಬುಡ ಒಂದಾದರೆ ತಲೆ ಮೇಲೆ ಒಂಭತ್ತು ಸುಳಿಗಳಿವೆ. ಇಂಥ ಅಪರೂಪದ ಅಡಕೆ ಮರ ಇದೀಗ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹತ್ತು ವರ್ಷದವರೆಗೆ ಈ ಅಡಕೆ ಮರವೂ ಎಲ್ಲ ಅಡಕೆ ಮರಗಳಂತೆಯೇ ಇತ್ತು. ಹತ್ತು ವರ್ಷವಾದ ಬಳಿಕ ಆರಂಭದಲ್ಲಿ ಮೊದಲಿಗೆ ಅಡಕೆ ಮರದ ತುದಿಯಲ್ಲಿ ಒಂದು ರೆಂಬೆ ಕವಲೊಡೆಯಿತು. ಬಳಿಕ ಹೀಗೆಯೇ ಒಂಭತ್ತು ಕವಲುಗಳು ಒಡೆದು ಒಂಭತ್ತು ಸುಳಿಗಳು ಬಂದಿವೆ. ಕೇವಲ ಸುಳಿಗಳು ಬಂದಿರುವುದು ಮಾತ್ರವಲ್ಲ, ಎಲ್ಲ ಸುಳಿಗಳಲ್ಲಿಯೂ ಅಡಕೆ ಗೊನೆಗಳು ಬಂದಿರುವುದು ವಿಶೇಷ. ಜೊತೆಗೆ ಮತ್ತೆ ಮತ್ತೆ ರೆಂಬೆ ಕವಲುಗಳು ಒಡೆಯುತ್ತಲೇ ಇವೆ.

ಆರಂಭದಲ್ಲಿ ಒಂದೇ ಅಡಕೆ ಮರದಲ್ಲಿ ರೆಂಬೆಯ ಕವಲುಗಳು ಒಡೆಯಲಾರಂಭಿಸಿದಾಗ ತೋಟದ ಮಾಲೀಕ ಮಂಜಪ್ಪ ಹೆದರಿಕೊಂಡಿದ್ದರು. ಅಡಕೆ ಮರ ಸತ್ತು ಹೋಗುತ್ತದೆಯೇನೋ ಎಂದು ಭಾವಿಸಿದ್ದರು. ಆದರೆ ಎಲ್ಲ ಕವಲುಗಳಲ್ಲಿಯೂ ಅಡಕೆ ಫಸಲುಗಳು ಬರುತ್ತಿರುವುದರಿಂದ ಇದೀಗ ಮಂಜಪ್ಪ ಹೆಚ್ಚು ಖುಷಿ ಪಡುತ್ತಿದ್ದಾರೆ. ಈ ವಿಚಿತ್ರವಾದ ಅಡಕೆ ಮರದಲ್ಲಿ ನಾಲ್ಕು ಅಡಕೆ ಮರಗಳಲ್ಲಿ ಬರುವಷ್ಟು ಫಸಲು ಬರುತ್ತಿದೆ. ಇಂಥ ಅಡಕೆ ಮರಗಳಿರುವ ಒಂದು ಎಕರೆ ಅಡಕೆ ತೋಟವಿದ್ದರೆ ನಾಲ್ಕೈದು ಎಕರೆ ಜಾಗದಲ್ಲಿ ಬೆಳೆಯುವಷ್ಟು ಅಡಕೆಯನ್ನು ಬೆಳೆಯಬಹುದು ಎಂದು ಜನ ಮಾತನಾಡುತ್ತಿದ್ದಾರೆ.

ಒಂಭತ್ತಕ್ಕೂ ಹೆಚ್ಚು ಸುಳಿಗಳಿರುವ ಅಡಕೆ ಮರ ಇದೀಗ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹೀಗೆ ಅಡಕೆ ಮರವೊಂದರಲ್ಲಿ ದಿನೇ ದಿನೇ ಕವಲುಗಳು ಒಡೆದು ಹೆಚ್ಚುವರಿ ಸುಳಿಗಳು ಬರುತ್ತಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಸ್ಯಶಾಸ್ತ್ರ ವಿಭಾಗದ ವಿಜ್ಞಾನಿಗಳು ಸಂಶೋಧನೆ ನಡೆಸಬೇಕು ಎಂಬುದು ಜನರ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next