ಶಿವಮೊಗ್ಗ: ಶಿವಮೊಗ್ಗ ನಗರ ಹಾಗೂ ಭದ್ರಾವತಿ ನಗರಗಳಿಗೆ ಪ್ರತ್ಯೇಕವಾಗಿ ಲಾಕ್‌ಡೌನ್ ಮಾರ್ಗಸೂಚಿ ಹೊರಡಿಸಲಾಗಿದ್ದು, ಇನ್ನುಳಿದ ತಾಲೂಕುಗಳಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಅನ್ ಲಾಕ್ 1.0 ಮಾರ್ಗಸೂಚಿ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಭಾನುವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು. ಜಿಲ್ಲೆಯ ಬಹುತೇಕ ತಾಲೂಕು ಗಳಲ್ಲಿ ಕೊರೊನಾ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆಯಿದ್ದರೂ, ಶಿವಮೊಗ್ಗ ನಗರ ಹಾಗೂ ಭದ್ರಾವತಿ ಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಕೆಲವು ನಿಬಂìಧಗಳನ್ನು ವಿಧಿ ಸಿ ವ್ಯಾಪಾರ- ವಹಿವಾಟುಗಳಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದರು. ಸಗಟು ತರಕಾರಿ ಮತ್ತು ದಿನಸಿ ವ್ಯಾಪಾರ, ಗಾಂಧಿ ಬಜಾರ್ ಸಗಟು ವ್ಯಾಪಾರಿಗಳಿಗೆ ಮಧ್ಯಾಹ್ನ 12 ಗಂಟೆಯವರೆಗೆ, ಸಿಮೆಂಟ್, ಸ್ಟೀಲ್, ಹಾರ್ಡ್‌ವೇರ್, ಫೋಟೋ ಸ್ಟುಡಿಯೋ, ಚಿನ್ನ ಗಿರವಿ ಅಂಗಡಿ, ಟೈಲರ್‌ಗಳಿಗೆ, ಬಂಗಾರ ಕೆಲಸ ಮಾಡುವವರು ಮುಂತಾದ ಕ್ಷೇತ್ರದವರಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗುವುದು.
ಬಟ್ಟೆ ವ್ಯಾಪಾರ ಮತ್ತು ಚಿನ್ನದ ವ್ಯಾಪಾರಕ್ಕೆ ಅವಕಾಶವಿಲ್ಲ. ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿದೆ. ಆದರೆ ಬೀದಿ ಬದಿ ಆಹಾರ ಉತ್ಪನ್ನ ಮಾರಾಟಕ್ಕೆ ಅನುಮತಿ ಇಲ್ಲ. ವಾಕಿಂಗ್, ಯೋಗ ಇತ್ಯಾದಿ ವ್ಯಾಯಾಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಾರ್ಗಸೂಚಿ ಪಾಲಿಸಿ: ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದರೂ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಜನರು ಪಾಲಿಸದಿದ್ದರೆ, ಆ ಅಂಗಡಿ ಮಾಲಿಕರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಂಗಡಿಗಳ ಮುಂದೆ ಜನಜಂಗುಳಿ ಸೇರಿದ್ದರೆ ಅಂತಹ ಅಂಗಡಿಗಳನ್ನು ಮುಚ್ಚಿಸಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಲಸಿಕಾ ಅಭಿಯಾನ: ಜಿಲ್ಲಾದ್ಯಂತ ಸೋಮವಾರದಿಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಮಾತ್ರವಲ್ಲದೆ, 18ರಿಂದ 44 ವರ್ಷದ ಒಳಗಿನವರಿಗೂ ಲಸಿಕೆ ನೀಡಲು ಸಿದ್ಧತೆ ಮಾಡಲಾಗಿದೆ ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಎಂ.ಎಲ್. ವೈಶಾಲಿ ಮತ್ತಿತರರು ಇದ್ದರು.