Advertisement

ಪುರಾತನ ದೇಗುಲಕ್ಕೆ ಕಾಯಕಲ್ಪ

10:27 AM Apr 21, 2019 | Naveen |

ಹೊಸನಗರ: ಇತಿಹಾಸ ಪ್ರಸಿದ್ಧ ಬಿದನೂರು ನಗರದ ಆರಾಧ್ಯದೈವ ನೀಲಕಂಠೇಶ್ವರ ದೇಗುಲ ಮತ್ತೂಮ್ಮೆ ಪುನರ್‌ ಪ್ರತಿಷ್ಠಾಪನೆ ಮತ್ತು ಜೀರ್ಣೋದ್ಧಾರಕ್ಕೆ ಸಾಕ್ಷಿಯಾಗಲಿದೆ.

Advertisement

ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿರುವ ಅಂದಿನ ಬಿದನೂರು ಇಂದಿನ ನಗರ ಕೆಳದಿ ಸಾಮ್ರಾಜ್ಯದ ಮೂರನೇ ರಾಜಧಾನಿಯಾಗಿ ಗಮನ
ಸೆಳೆದಿತ್ತು. ಇಲ್ಲಿರುವ ಶ್ರೀ ನೀಲಕಂಠೇಶ್ವರ ದೇಗುಲ ಕೆಳದಿ ಅರಸರ ಆರಾಧ್ಯ ದೈವ ಎನಿಸಿಕೊಂಡಿತ್ತು. 8ನೇ ಶತಮಾನದ ದೇಗುಲ ಎನ್ನಲಾದ ಈ ದೇಗುಲವನ್ನು ಕೆಳದೆ ಅರಸರ ಕಾಲಕ್ಕಿಂತ ಮುನ್ನ ಹೊನ್ನೆಕಂಬಳಿ ಅರಸರು ಜೀರ್ಣೋದ್ಧಾರಗೊಳಿಸಿದ್ದರು. ನೀಲಕಂಠೇಶ್ವರ ದೇಗುಲ ಬಿರುಕು ಬಿಟ್ಟು ಶಿಥಿಲಾವಸ್ಥೆಗೆ ತಲುಪಿದ್ದ ಕಾರಣ ಭಕ್ತರು ಆತಂಕಕ್ಕೊಳಗಾಗಿದ್ದರು. ಅಂದಿನಿಂದ ಇಂದಿನವರೆಗೂ ಅವಿನಾಭಾವ ಸಂಬಂಧ ಹೊಂದಿರುವ ಶೃಂಗೇರಿ ಜಗದ್ಗುರುಗಳ
ಆದೇಶ ಮತ್ತು ಸಹಾಯದೊಂದಿಗೆ ಮತ್ತೆ ಜೀರ್ಣೋದ್ಧಾರಕ್ಕೆ ನೀಲಕಂಠೇಶ್ವರ ದೇಗುಲ ಸಾಕ್ಷಿಯಾಗಲಿದೆ.

ಸುಮಾರು 4 ಲಕ್ಷ ವೆಚ್ಚದಲ್ಲಿ ದೇಗುಲ ನಿರ್ಮಾಣ ಕಾರ್ಯ: ಶೃಂಗೇರಿ ಪೀಠ ಮತ್ತು ಭಕ್ತರ ಸಹಕಾರದೊಂದಿಗೆ ಸುಮಾರು 4 ಲಕ್ಷ ವೆಚ್ಚದಲ್ಲಿ ಪುನರ್‌ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ 3 ಕೋಟಿ ಹಣ ವೆಚ್ಚ ಮಾಡಲಾಗಿದೆ. ಇನ್ನು ಒಂದು ಕೋಟಿ ಹಣದ ಅಗತ್ಯವಿದೆ. ಶೃಂಗೇರಿ
ಪೀಠದ ಆಸ್ಥಾನ ಸ್ಥಪತಿ ಶಿಲ್ಪರತ್ನಂ ಜಿ.ಶಂಕರ ಸ್ಥಪತಿ ಮತ್ತು ಶ್ರೀಶಂಕರ ಶಿಲ್ಪಕಲಾ ಶಾಲಾ ನೇತೃತ್ವದಲ್ಲಿ ವಿಮಾನ ಗೋಪುರ ಶೈಲಿಯಲ್ಲಿ ಸಂಪೂರ್ಣ ಶಿಲಾಮಯ ದೇವಸ್ಥಾನ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.

ಏ.24 ರಿಂದ ಜೀರ್ಣೋದ್ಧಾರ ಕಾರ್ಯಕ್ರಮ
8ನೇ ಶತಮಾನದ ಬಿದನೂರು ನಗರದ ನೀಲಕಂಠೇಶ್ವರ ದೇವಸ್ಥಾನದ ಪುನರ್ನಿರ್ಮಾಣ, ಪ್ರತಿಷ್ಠಾಪನಾ ಮಹೋತ್ಸವವು ಶೃಂಗೇರಿ ಶ್ರೀಗಳ ಸಾನ್ನಿಧ್ಯದಲ್ಲಿ ಏ.24ರಿಂದ 30ತನಕ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗೋಳಿಮನೆ ಗೋಪಾಲ ಉಡುಪ ತಿಳಿಸಿದ್ದಾರೆ. ಬಿದನೂರು ನಗರ ಆಳಿದ ಕೆಳದಿ ಅರಸರ ಆರಾಧ್ಯ ದೈವ ನೀಲಕಂಠೇಶ್ವರ ದೇಗುಲವನ್ನು 14ನೇ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಲಾಗಿತ್ತು. ಈಗ ಶಿಲ್ಪಿ ರತ್ನ ಶೃಂಗೇರಿ ಆಸ್ಥಾನ ಶಿಲ್ಪಿ ಜಿ. ಶಂಕರ ಸ್ಥಪತಿ ನೇತೃತ್ವದಲ್ಲಿ ಸುಮಾರು ರೂ.4 ಕೋಟಿ ವೆಚ್ಚದ ಸಂಪೂರ್ಣ ಶಿಲಾಮಯ ದೇವಸ್ಥಾನವು ಭಕ್ತರ ಕೊಡುಗೆಯಿಂದ ನಿರ್ಮಾಣ ಆಗುತ್ತಿದೆ ಎಂದು
ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶೃಂಗೇರಿಯ ಭಾರತೀ ತೀರ್ಥ ಸ್ವಾಮೀಜಿಯವರು 2015ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನೀಲಕಂಠೇಶ್ವರ ದೇಗುಲ ಹಾಗೂ ಶೃಂಗೇರಿ ಮಠಕ್ಕೂ ಅವಿನಾಭಾವ ಸಂಬಂಧ ಇದೆ. ಅದರಂತೆ ಅಂದು ಅವರು ನೀಡಿದ ಆದೇಶ ಹಾಗೂ ಅಪೇಕ್ಷೆಯಂತೆ ಜೀರ್ಣೋದ್ಧಾರ ಕಾರ್ಯಕ್ಕೆ ಸಂಕಲ್ಪ ಮಾಡಲಾಯಿತು ಎಂದು ಅವರು ಹೇಳಿದರು.
ಏ.24ರಂದು ಪುನರ್‌ ಪ್ರತಿಷ್ಠಾ ವಿಧಿ  ವಿಧಾನ ಆರಂಭ, ದೇವನಾಂದಿ, ಮಹಾಗಣಪತಿ ಹೋಮ, ನವಗ್ರಹ ಯಾಗ, ಮಹಾರುದ್ರಾಭಿಷೇಕ ಸಂಜೆ ಹೋಮಾದಿ ಗಳು ನಡೆಯಲಿದೆ. ಏ.25ರಂದು ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ನೀಲಕಂಠೇಶ್ವರ ದೇವರ ಪ್ರತಿಷ್ಠೆ, ಜೀವಕುಂಭ, ಅಷ್ಟಬಂಧ ಸೇಚನ, ಶಂಕರೇಶ್ವರ
ದೇವರ ಅಷ್ಟಬಂಧ ಪ್ರತಿಷ್ಠಾಪನೆ. ಸಂಜೆ 108 ಬ್ರಹ್ಮ ಕಲಶ ಸ್ಥಾಪನೆ, ಶ್ರೀ ಭಾರತೀ ತೀರ್ಥಸಭಾಭವನ ಉದ್ಘಾಟನೆ, ಶ್ರೀಗಳ ಅನುಗ್ರಹ ಭಾಷಣ ನಡೆಯಲಿದೆ ಎಂದರು.

Advertisement

ಏ.26ರಂದು ಶ್ರೀಗಳಿಂದ ನೀಲಕಂಠೇಶ್ವರ ಹಾಗೂ ಶಂಕರೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಹಾರುದ್ರ ಯಾಗದ ಪೂರ್ಣಾಹುತಿ, ಅನುಗ್ರಹ ಭಾಷಣ, ಸಾಮೂಹಿಕ ಅನ್ನಸಂತರ್ಪಣೆ
ನಡೆಯಲಿದೆ.ರಥೋತ್ಸವ ಕಾರ್ಯಕ್ರಮಗಳು ಏ.27ರಿಂದ ಆರಂಭ ಆಗಲಿದೆ. ಏ.28ರಂದು ಮನ್ಮಹಾರಥೋತ್ಸವ, ನಂತರ ರಥೋತ್ಸವ
ಸಂಬಂ ಧಿ ವಿಧಿ-  ವಿಧಾನಗಳು ನಡೆಯಲಿವೆ ಎಂದರು.

7 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಸುಮಾರು 15 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸುಮಾರು 15 ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದರು. ಪ್ರತಿದಿನ ಭಜನೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ಕುಮುದಾ ಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next