ಶಿವಮೊಗ್ಗ: ಸಾಹಿತ್ಯ ಹುಣ್ಣಿಮೆಯ ಮೂಲಕ ಸಾಹಿತ್ಯ, ಸಾಂಸ್ಕೃತಿಕ ವಾತಾವರಣದಲ್ಲಿ ಮನಸ್ಸು ಕಟ್ಟುವ ಕೆಲಸ ನಡೆಯುತ್ತಿದೆ. ಪ್ರತಿಭೆಗಳನ್ನು ಗುರುತಿಸಿ ಬೆಳಗಿಸಿ ನಾಡಿಗೆ ಕೊಡುಗೆಯಾಗಿ ನೀಡುವ ಈ ಪ್ರಯತ್ನ ಸಾರ್ಥಕವಾಗಲಿ. ಇದು ಗಿನ್ನೆಸ್ ದಾಖಲೆಗೆ ಸೇರುವಂತಾಗಬೇಕು. ಸ್ವಾತಂತ್ರ್ಯ ಹೋರಾಟಗಾರರ ಮಾತು ನಮಗೆ ಹೋರಾಟಕ್ಕೆ ಪ್ರೇರಣೆಯಾಯಿತು. ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಬೇಕು. ಭ್ರಷ್ಟ ರಹಿತ ರಾಜಕಾರಣ ನಿರ್ಮಾಣವಾಗಬೇಕು. ಅದಕ್ಕಾಗಿ ಹೋರಾಟ, ಜನಜಾಗೃತಿ ಅನಿವಾರ್ಯವಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ. ವಿ. ವಸಂತಕುಮಾರ್ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಆ. 15 ರಂದು ಸಂಜೆ ನಗರದ ಮಥುರಾ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಆತಿಥ್ಯದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಹುಣ್ಣಿಮೆಯ 166 ನೇ ತಿಂಗಳ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯ ಚಿಂತನೆ, ಶ್ರಾವಣ ಸಂಭ್ರಮ, ಅಭಿನಂದನೆ, ಕವಿ, ಕಾವ್ಯ, ಕಥಾ ನೋಟ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಅದು ಅನ್ಯಾಯ, ಮೋಸ, ಭ್ರಷ್ಟಾಚಾರಗಳಿಂದ ದೇಶ ಕಟ್ಟಲು ಸಾಧ್ಯವಾಗುವುದಿಲ್ಲ. ಕಳಪೆ ಕಾಮಗಾರಿಗಳು ಅಭಿವೃದ್ಧಿಗಳಲ್ಲ. ನಮ್ಮ ರಾಜಕಾರಣಿಗಳ ತಮ್ಮ ಬಳಿಯಿರುವ ಅಕ್ರಮ ಹಣದಿಂದ ವ್ಯವಸ್ಥೆಯನ್ನು ಬುಡಮೇಲೆ ಮಾಡುತ್ತಿದ್ದಾರೆ. ಹೀಗೇ ಬಿಟ್ಟರೆ ವ್ಯವಸ್ಥೆ ನಮ್ಮನ್ನೇ ನುಂಗುತ್ತದೆ. ಮುಂದಿನ ಪೀಳಿಗೆಗೆ ಭವಿಷ್ಯ ರೂಪಿಸಲು ಬದಲಾವಣೆಗೆ ಎಲ್ಲರೂ ಪ್ರಯತ್ನ ಮಾಡೋಣ, ಅನ್ಯಾಯದ ವಿರುದ್ಧ, ಅಸಹ್ಯ ಬದುಕಿನ ವಿರುದ್ಧ ಮಾತನಾಡೋಣ. ಈ ಹೋರಾಟ ಶಿವಮೊಗ್ಗದಿಂದಲೇ ಆಗಲಿ ಎಂದರು.
2018 ರ ನಾರೀ ಶಕ್ತಿ ರಾಷ್ಟ್ರೀಯ ಪುರಸ್ಕಾರವನ್ನು ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪಡೆದ ಹೊನ್ನೇಮರಡು ನಲ್ಲಿರುವ ಭಾರತೀಯ ಸಾಹಸ ಸಮನ್ವಯ ಕೇಂದ್ರದ ನಿರ್ದೇಶಕರಾದ ನೊಮಿಟೋ ಕಾಮದಾರ್ ಮತ್ತು ಎಸ್.ಎಲ್.ಎನ್.ಸ್ವಾಮಿ ಅವರನ್ನು ಅಭಿನಂದಿಸಲಾಯಿತು. ಮಥುರಾ ಫುಡ್ ಪ್ರಾಡೆಕ್ಟ್ನ ಉದ್ಯಮಿಗಳಾದ ಬಿ.ವಿ. ಲಕ್ಷ್ಮೀದೇವಿ ಗೋಪಿನಾಥ ಮಾತನಾಡಿ, ಜನರಲ್ಲಿ ಸಾತ್ವಿಕ ಭಾವನೆ ಮೂಡಿಸುವಲ್ಲಿ ಸಂಗೀತ, ಸಾಹಿತ್ಯ ಚಟುವಟಿಕೆ ನಿರಂತರವಾಗಿ ನಡೆಯಬೇಕು. ಆ ಮೂಲಕ ದೇಶಕ್ಕೆ ನಮ್ಮದೇ ಆದ ಕೊಡುಗೆ ನೀಡಲು ನೆರವಾಗಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಂಚಾಲಕಿ ಪ್ರತಿಮಾ ಡಾಕಪ್ಪ ಗೌಡ ಅವರು ದತ್ತಿ ಹಣ ನೀಡಿ ನಿರಂತರ ಚಟುವಟಿಕೆಗೆ ಕೊಡುಗೆ ನೀಡಿದರು. ಆದಿಚುಂಚನಗಿರಿ ಪಿ.ಯು. ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ| ಅನಿತಾ ಹೆಗ್ಗೋಡು ಅವರು ಕಥೆ ಹೇಳಿದರು. ದೂರದರ್ಶನ ಹಾಸ್ಯ ಕಲಾವಿದರಾದ ಉಮೇಶ್‌ಗೌಡ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಸಾಗರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ವಿ. ಟಿ. ಸ್ವಾಮಿ ಅಭಿನಂದನಾ ಮಾತುಗಳನ್ನಾಡಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಕಲಾವಿದರು ಕಾರ್ಯದರ್ಶಿ ಮಂಜುನಾಥ ಅವರ ನೇತೃತ್ವದಲ್ಲಿ ಸಮೂಹ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯಕರಾದ ಸಹನಾ ಜಿ. ಭಟ್ ಮತ್ತು ಪ್ರತಿಭಾ ನಾಗರಾಜ್ ಅವರು ಭಾವಗೀತೆ, ದೇಶಭಕ್ತಿ ಗೀತೆಗಳನ್ನು ಹಾಡಿದರು. ಹಿರಿಯ ಕವಿಗಳಾದ ಡಿ. ಬಿ.ರಜಿಯಾ, ಬಿ.ಟಿ. ಅಂಬಿಕಾ, ಡಿ. ಮಂಜುನಾಥ, ಎಂ ಎಂ. ಸ್ವಾಮಿ, ಪೀಟರ್ ಭದ್ರಾವತಿ ಯುವ ಕವಿ ಶಶಿಕುಮಾರ್, ವಿದ್ಯಾರ್ಥಿನಿ ನಿಧಿ ಹೊಸಮನೆ ಅವರು ಕವನ, ಚುಟುಕು ವಾಚಿಸಿದರು. ಉಪನ್ಯಾಸಕ ನೃಪತುಂಗ ನಿರೂಪಿಸಿದರು. ಕೆ.ಎಸ್. ಮಂಜಪ್ಪ ಸ್ವಾಗತಿಸಿದರು. ಡಿ. ಗಣೇಶ್ ವಂದಿಸಿದರು.