ಶಿವಮೊಗ್ಗ: ಒಂದೆಡೆ ಅನಿವಾರ್ಯ, ಮತ್ತೂಂದೆಡೆ ಇಂತಹ ಸಮಯದಲ್ಲಿ ಇದು ಬೇಕೆ? ಎಂಬ ಸಂದಿಗ್ಧತೆ ನಡುವೆ ಶನಿವಾರ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 2020-21ನೇ ಸಾಲಿನಲ್ಲಿ 219.07 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡನೆಯಾಗಿದೆ.
ಪ್ರಸಕ್ತ ಈ ಸಾಲಿನಲ್ಲಿ ಒಟ್ಟು ಜಮೆ 27953.80 ಲಕ್ಷ ರೂ. ಗಳಾಗಿದ್ದು, ಇದರಲ್ಲಿ 10185.65 ಆರಂಭಿಕ ಶುಲ್ಕ 10750.91 ಲಕ್ಷ ರೂ. ರಾಜಸ್ವ ಜಮೆಗಳಾಗಿರುತ್ತವೆ. 5444 ಲಕ್ಷ ರೂ ಬಡಾವಳ ಜಮೆ ಒಳಗೊಂಡಿದ್ದು, 1573.24 ಅಸಾಧಾರಣ ಜಮೆಯಾಗಿರುತ್ತದೆ. ಒಟ್ಟು ವೆಚ್ಚ 27734.10 ಲಕ್ಷ ರೂ. ಗಳಾಗಿದ್ದು, 9567.24 ಲಕ್ಷ ರೂ ರಾಜಸ್ವ ವೆಚ್ಚವಾಗಿದೆ. 16598 ಲಕ್ಷ ರೂ. ಬಂಡವಾಳ ವೆಚ್ಚ, 1568.24 ಲಕ್ಷ ರೂ. ಅಸಾಧಾರಣ ವೆಚ್ಚವಾಗಿದ್ದು, ಒಟ್ಟಾರೆ 2020-21ನೇ ಸಾಲಿನ ಶಿವಮೊಗ್ಗ ಮಹಾನಗರ ಪಾಲಿಕೆಯು 219.70 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಮೇಯರ್ ಸುವರ್ಣ ಶಂಕರ್ ಅಧ್ಯಕ್ಷತೆಯಲ್ಲಿ ಇಂದು ಆರಂಭ ಗೊಂಡ ಆಯವ್ಯಯ ಭಾಷಣಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೊರೊನಾದಂತಹ ಕಾಯಿಲೆಯ ಇಂತಹ ಸಂದರ್ಭದಲ್ಲಿ ಬಜೆಟ್ ಮಂಡನೆ ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಎಚ್.ಸಿ. ಯೋಗೇಶ್, ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ಸತ್ಯನಾರಾಯಣ್ ಸೇರಿದಂತೆ ಹಲವರು ಆಕ್ಷೇಪಿಸಿದರು. ಮಾತಿಗೆ ಮಾತಿಗೆ ಬೆಳೆದ ಸಂದರ್ಭದಲ್ಲಿ ಪ್ರಸಕ್ತ ಬಜೆಟ್ ಮಂಡನೆಯ ಅನಿವಾರ್ಯತೆಯ ಬಗ್ಗೆ ಆಯುಕ್ತ ಚಿದಾನಂದ ವಟಾರೆ ಮಾಹಿತಿ ನೀಡಲು ಮುಂದಾದರು.
ಈ ಸಂದರ್ಭದಲ್ಲಿ ಪ್ರತಿ ಪಕ್ಷದ ಸದಸ್ಯರು ಸಭಾ ತ್ಯಾಗ ಮಾಡಿದರು. ಈ ಮಾರ್ಚ್ ತಿಂಗಳ ಅಂತ್ಯದೊಳಗೆ ಬಜೆಟ್ ಮಂಡಿಸುವುದು ಆದ್ಯ ಕರ್ತವ್ಯ. ಪ್ರಸಕ್ತ ಸನ್ನಿವೇಶದಲ್ಲಿ ಅಗತ್ಯವಿರುವ ಕೆಮಿಕಲ್ಸ್ ಹಾಗೂ ಮತ್ತಿತರರ ಸಾಮಗ್ರಿಕೊಳ್ಳಲು, ಸಿಬ್ಬಂದಿಗಳ ವೇತನ ನೀಡುವಿಕೆಗೆ ಬಜೆಟ್ ಮಂಡನೆ ಅನಿವಾರ್ಯ ಎಂದು ಚಿದಾನಂದ ವಾಟಾರೆ ತಿಳಿಸಿದರು. ಉಪಮೇಯರ್ ಸುರೇಖಾ ಮುರುಳೀಧರ್, ಹಣಕಾಸು ಕಂದಾಯ ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿ ಅಧಕ್ಷ ವಿಶ್ವನಾಥ್ ಮಾತನಾಡಿದರು. ಮೇಯರ್ ಸುವರ್ಣ ಶಂಕರ್ ಇದ್ದರು.
ಪ್ರತಿಭಟನೆ: ಮಹಾನಗರ ಪಾಲಿಕೆಯ 2020 21ನೇ ಸಾಲಿನ ಆಯವ್ಯಯ ಮಂಡನೆ ಮಾಡುವುದಕ್ಕೆ ಪಾಲಿಕೆಯ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿ ಮೇಯರ್ ಮುಂಭಾಗ ಪ್ರತಿಭಟನೆ ನಡೆಸಿದರು. ಮೂರು ತಿಂಗಳಿಂದ ಸಾಮಾನ್ಯ ಸಭೆ ಸಹ ಕರೆದಿಲ್ಲ. ಸಭೆ ಕರೆಯುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಅಲ್ಲದೆ ಈ ಬಾರಿ ಬಜೆಟ್‌ನಲ್ಲಿ ಯಾವುದೇ ಹೊಸಯೋಜನೆ ಇಲ್ಲ. ಇದೊಂದು ಬೋಗಸ್ ಬಜೆಟ್ ಆಗಿದೆ ಎಂದು ವಿಪಕ್ಷ ಸದಸ್ಯರು ಆರೋಪಿಸಿದರು. ಪಾಲಿಕೆ ವಿಪಕ್ಷ ನಾಯಕ ಎಚ್ .ಸಿ. ಯೋಗೇಶ್, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರಾದ ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ರೇಖಾ ರಂಗನಾಥ್, ಆರ್.ಸಿ. ನಾಯ್ಕ, ಯಮುನಾ ರಂಗೇಗೌಡ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ಸದಸ್ಯರ ತೀವ್ರ ಗದ್ದಲದ ನಡುವೆಯೇ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವಿಶ್ವನಾಥ್, 2020 21 ನೇ ಸಾಲಿನ ಪಾಲಿಕೆ ಬಜೆಟ್ ಮಂಡಿಸಿದರು.
ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ 18 ಕೋಟಿ ಮೊತ್ತದ ಯಾವ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲ. ಈ ಬಾರಿ ಮತ್ತೆ 19.5 ಕೋಟಿ ಹೊಸ ಯೋಜನೆ ಘೋಷಿಸಿದ್ದಾರೆ. ಬಿಜೆಪಿಗೆ ಘೋಷಿಸುವ ಚಟವಿದೆಯೇ ಹೊರತು, ಅನುಷ್ಠಾನ ಮಾಡುವ ಹಠ ಇಲ್ಲ. ಮೊದಲು ಹಿಂದಿನ ವರ್ಷದ ಯೋಜನೆಗಳ ಅನುಷ್ಠಾನ ಮಾಡಲಿ. ನಂತರ ಹೊಸ ಯೋಜನೆ ಜಾರಿ ಮಾಡಲಿ
. -ಎಚ್.ಸಿ. ಯೋಗೀಶ್, ವಿಪಕ್ಷ ನಾಯಕ