Advertisement

ಕೈಗಾರಿಕಾ ಘಟಕಗಳ ಸ್ಥಾಪನೆಯಾಗಲಿ: ಈಶ್ವರಪ್ಪ

04:17 PM Jun 26, 2019 | Team Udayavani |

ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕಾ ಘಟಕಗಳು ಸ್ಥಾಪನೆಯಾಗಬೇಕು. ಈ ಭಾಗದ ವಿದ್ಯಾವಂತ ಯುವಕ- ಯುವತಿಯರಿಗೆ ಇಲ್ಲಿಯೇ ಉದ್ಯೋಗ ದೊರೆಯುವಂತಾಗಬೇಕು ಎಂಬ ಆಶಯದಿಂದ ಎರಡು ದಿನಗಳಿಂದ ದೆಹಲಿ ಪ್ರವಾಸದಲ್ಲಿರುವ ಶಾಸಕ ಕೆ.ಎಸ್‌. ಈಶ್ವರಪ್ಪ ಅವರು ಹಲವು ಸಚಿವರನ್ನು ಭೇಟಿಯಾಗಿ ಶಿವಮೊಗ್ಗ ಅಭಿವೃದ್ಧಿಗೆ ಕೈ ಜೋಡಿಸುವಂತೆ ಕೋರಿಕೆ ಸಲ್ಲಿಸಿದ್ದಾರೆ

Advertisement

ಶಿವಮೊಗ್ಗ ನಗರದ ಸಮೀಪ ಔಷಧ ಉತ್ಪಾದನಾ ಕಾರ್ಖಾನೆಗಳ ಸಮುಚ್ಛಯ ಸ್ಥಾಪಿಸಬೇಕೆಂಬ ಸ್ಥಳೀಯ ಶಿವಮೊಗ್ಗ ನಗರ ಔಷಧ ವ್ಯಾಪಾರಿಗಳ ಸಂಘದ ಮನವಿಯನ್ನು ಸ್ವೀಕರಿಸಿದ ಶಾಸಕರು ಈ ಬೇಡಿಕೆಯನ್ನು ರಾಸಾಯನಿಕ ಹಾಗು ರಸಗೊಬ್ಬರ ಸಚಿವರಾದ ಸದಾನಂದ ಗೌಡರಿಗೆ ಸಲ್ಲಿಸಿದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಖಾನೆಗಳ ಸಮುಚ್ಛಯದ ಅನಿವಾರ್ಯತೆಯ ಕುರಿತು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು.

ರಾಜ್ಯ ಔಷಧ ಉತ್ಪಾದನಾ ಕಾರ್ಖಾನೆಗಳ ಸಂಘಟನೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಶಾಸಕರ ಜೊತೆಗಿದ್ದರು. ಸಕಾರಾತ್ಮಕವಾಗಿ ಮನವಿ ಸ್ವೀಕರಿಸಿದ ಕೇಂದ್ರ ಸಚಿವರು ಈ ಕುರಿತು ಸಕಾರಾತ್ಮಕ ಭರವಸೆಯನ್ನು ನೀಡಿದರು. ಸುಮಾರು 200 ಎಕರೆ ಭೂಪ್ರದೇಶ ಸಮುಚ್ಛಯದ ನಿರ್ಮಾಣಕ್ಕೆ ಬೇಕಾಗಲಿದ್ದು. ಇದರ ಮೂಲಕ ಈ ಭಾಗದ ಅನೇಕರಿಗೆ ವಿಫುಲ ಉದ್ಯೋಗಾವಕಾಶ ದೊರೆಯಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಉದ್ದೇಶಕ್ಕೆ ಬೇಕಾಗುವ ಭೂ ಪ್ರದೇಶವನ್ನು ಗುರುತಿಸುವ ಸಲುವಾಗಿ ಜೂ. 27ರಂದು ಶಾಸಕರು ರಾಜ್ಯ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ.

ಇನ್ನು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿವಮೊಗ್ಗ ಸಮೀಪದ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿಯನ್ನು ಪುನಃ ಆರಂಭಿಸಿ ತ್ವರಿತವಾಗಿ ಪೂರ್ಣಗೊಳಿಸಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗದಲ್ಲಿ ವಿಮಾನಯಾನ ಸೇವೆ ಆರಂಭವಾದರೆ ಈ ಭಾಗದ ಕೈಗಾರಿಕೆ, ಶಿಕ್ಷಣ, ವೈದ್ಯಕೀಯ ಕ್ಷೇತ್ರ ಮತ್ತು ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕಾಣಬಹುದೆಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವೇಳೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಇದ್ದರು.

ಇಷ್ಟೇ ಅಲ್ಲದೇ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಆಯುಷ್‌ ಇಲಾಖೆಯ ರಾಜ್ಯ ಸಚಿವರಾದ(ಸ್ವತಂತ್ರ ಖಾತೆ) ಶ್ರೀಪಾದ ನಾಯಕ್‌ ಅವರನ್ನು ಭೇಟಿ ಮಾಡಿ ಶಿವಮೊಗ್ಗ ನಗರದಲ್ಲಿ ಮೋರಾರ್ಜಿ ದೇಸಾಯಿ ಯೋಗ ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವಂತೆ ಮನವಿ ಮಾಡಿದರು. ಸದ್ಯದಲ್ಲಿ ಮೊರಾರ್ಜಿ ದೇಸಾಯಿ ಯೋಗ ಶಿಕ್ಷಣ ಕೇಂದ್ರ ದೆಹಲಿಯಲ್ಲಿ ಮಾತ್ರವಿದ್ದು ಶಿವಮೊಗ್ಗದಲ್ಲಿ ಅದರ ಶಾಖೆಯನ್ನು ಆರಂಭಿಸುವುದರಿಂದ ದಕ್ಷಿಣ ಭಾರತದ ಯೋಗಾಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದೆಂದು ಶಾಸಕರು ತಿಳಿಸಿದರು. ಮನವಿಯನ್ನು ಪರಿಗಣಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next