ಶಿವಮೊಗ್ಗ: ಶಿವಮೊಗ್ಗವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಈ ಬಾರಿ ಕೈಕೊಟ್ಟಿದೆ. ಶೇ.80ರಷ್ಟು ಮಳೆ ಕೊರತೆ ಇದೆ. ಮಲೆನಾಡಿನಲ್ಲ್ಲೂ ಕೂಡ ಬರಗಾಲ ಕಾಲಿಟ್ಟಿದೆ. 1.60 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಕೇವಲ ಮೂರೂವರೆ ಸಾವಿರ ಎಕರೆಯಲ್ಲಿ ಬಿತ್ತನೆಯಾಗಿದೆ. ಆ ಬೆಳೆ ಕೂಡ ಒಣಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸರ್ಕಾರ ತಕ್ಷಣವೇ ಶಿವಮೊಗ್ಗ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಿಸಲು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣ¡ ಭೈರೇಗೌಡ ಜಿಲ್ಲೆಗೆ ಕಾಟಾಚಾರಕ್ಕೆ ಭೇಟಿ ಕೊಟ್ಟಿದ್ದಾರೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಯಾವ ನಿರ್ಧಾರ ಕೈಗೊಂಡಿಲ್ಲ. ರೈತರಿಗೆ ಭರವಸೆಗಳು ಇಲ್ಲ. ಬರಗಾಲದಿಂದ ಮಲೆನಾಡಿನ ಜನ ತತ್ತರಿಸುತ್ತಿದ್ದರು. ಅವರ ನೋವಿಗೆ ಸ್ಪಂದಿಸಿಲ್ಲ. ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಕೃಷಿ ಸಮ್ಮಾನ್ ಯೋಜನೆ ಜಾರಿಗೆ ತಂದಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಪ್ರತಿ ತಾಲೂಕಿಗೂ 30 ಕೋಟಿ ಹಣ ದೊರೆಯುತ್ತದೆ. ಈಗಾಗಲೇ ಮೊದಲ ಕಂತಾಗಿ ಕೇಂದ್ರ ಸರ್ಕಾರ 12 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ. ಈ ಯೋಜನೆಗೆ ಅರ್ಜಿ ಹಾಕಲು ಜೂ.30 ಕೊನೆಯ ದಿನವಾಗಿದ್ದು, ರೈತರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಎಸ್. ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ, ಬಿಳಕಿ ಕೃಷ್ಣಮೂರ್ತಿ, ಅನಿತಾ ರವಿಶಂಕರ್, ಮಧುಸೂದನ್, ಕೆ.ವಿ. ಅಣ್ಣಪ್ಪ, ಹಿರಣ್ಣಯ್ಯ, ನಾಗರಾಜ್, ರತ್ನಾಕರ ಶೆಣೈ ಮತ್ತಿತರರು ಇದ್ದರು.