Advertisement

ಬಿಜೆಪಿ ತಂತ್ರ-ಮೈತ್ರಿ ಪ್ರತಿತಂತ್ರ-ಗೆಲುವಿನ ಮಂತ್ರ

03:03 PM Apr 27, 2019 | Naveen |

ಶಿವಮೊಗ್ಗ: ಮೈತ್ರಿಕೂಟದ ಪಾಲಿಗೆ ಗೆಲುವಿನ ದಡ ಸೇರಿಸುವ ಕ್ಷೇತ್ರವಾಗಿರುವ ಭದ್ರಾವತಿಯಲ್ಲಿ ಲೆಕ್ಕಾಚಾರ ಮೊದಲಿನಂತೆ ಇಲ್ಲ. ಜೆಡಿಎಸ್‌ ಪಾಲಿಗೆ ಹೆಚ್ಚು ಮತ ತಂದುಕೊಡುವ ಕ್ಷೇತ್ರವಾದರೂ ಮೂರ್‍ನಾಲ್ಕು ಚುನಾವಣೆಗಳಿಂದ ಬಿಜೆಪಿಯ ಕೈ ಹಿಡಿದ ಕ್ಷೇತ್ರವಾಗಿದೆ. ರಾಜಕೀಯ ವೈರಿಗಳು ಒಂದಾದ ಕಾರಣ ಈ ಬಾರಿ ದೊಡ್ಡ ಲೀಡ್‌ ಸಿಗಲಿದೆ ಎಂಬ ಆತ್ಮವಿಶ್ವಾಸದಲ್ಲಿ ಮೈತ್ರಿಕೂಟ ಇದ್ದರೆ, ಜೆಡಿಎಸ್‌- ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳನ್ನು ಕಮಲದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬಿಜೆಪಿ ಬೀಗುತ್ತಿದೆ.

Advertisement

ಈ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಂದಾಜು 10 ಸಾವಿರ ಮತ ಪಡೆಯುವ ಬಿಜೆಪಿ ಲೋಕಸಭೆಯಲ್ಲಿ 50ರಿಂದ 60 ಸಾವಿರ ಮತ ಪಡೆಯುತ್ತಿದೆ. ಇದು ಮೈತ್ರಿಕೂಟಕ್ಕೆ ತಲೆನೋವಾಗಿ ಪರಿಣಮಿಸಿದೆ. ಮೊದಲಿನಿಂದಲೂ ಜಾತಿ ಸಮೀಕರಣಕ್ಕೆ ಹೆಸರಾಗಿರುವ ಭದ್ರಾವತಿಯಲ್ಲಿ ಈ ಬಾರಿ ಉಭಯ ಪಕ್ಷಗಳು ಅದನ್ನೇ ಟ್ರಂಪ್‌ ಕಾರ್ಡ್‌ ಆಗಿ ಬಳಸಿವೆ. ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಒಕ್ಕಲಿಗ ಹಾಗೂ ಮುಸ್ಲಿಮರ ಮತಗಳು ಜೆಡಿಎಸ್‌ಗೆ, ಲಿಂಗಾಯತ ಮತಗಳು ಬಿಜೆಪಿಗೆ ಎಂಬ ಹಣೆಪಟ್ಟಿಯನ್ನು ಬದಲಾಯಿಸಲು ಈ ಬಾರಿ ಭಾರೀ ಕಾಂಚಾಣ ಸದ್ದು ಮಾಡಿದೆ.

ಒಕ್ಕಲಿಗರನ್ನು ಸೆಳೆಯಲು ಬಿಜೆಪಿ ಶಾಸಕ ಪ್ರೀತಂ ಗೌಡ, ಜಗ್ಗೇಶ್‌, ತೇಜಸ್ವಿನಿ ಗೌಡರನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತು. ಅಲ್ಲದೇ ಒಕ್ಕಲಿಗರೇ ಹೆಚ್ಚಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಂಡು ಮತಗಳನ್ನು ಸೆಳೆಯುವ ಯತ್ನ ಮಾಡಿತು. ಅಷ್ಟೇ ಅಲ್ಲದೇ ತಮಿಳರು, ಲಿಂಗಾಯತರು ಸಮಾವೇಶಗಳಿಗೆ ಬಿ.ಎಸ್‌. ಯಡಿಯೂರಪ್ಪನವರೇ ಹಾಜರಾಗಿ ಪುತ್ರನ ಪರ ಮತ ಯಾಚಿಸಿದರು. ಫಲಿತಾಂಶ ನಂತರವೇ ಯಾರು ಯಾರಿಗೆ ಮತ ಹಾಕಿದ್ದಾರೆ ತಿಳಿಯಲಿದೆ.

ಬಿಜೆಪಿಗೆ ಆಘಾತ: ಬಿಜೆಪಿ ಒಕ್ಕಲಿಗ, ಲಿಂಗಾಯತ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದು ಅರಿತ ಮೈತ್ರಿಕೂಟ ಮುಖಂಡರು, 40 ವರ್ಷಗಳ ಜಿದ್ದಾಜಿದ್ದಿನ ರಾಜಕೀಯ ಮಾಡಿದ ಹಾಲಿ ಹಾಗೂ ಮಾಜಿ ಶಾಸಕರನ್ನು ಒಂದುಗೂಡಿಸುವ ಮೂಲಕ ಬಿಜೆಪಿಗೆ ಭರ್ಜರಿ ಆಘಾತ ನೀಡಿತು. ಹಾಲಿ ಶಾಸಕ ಸಂಗಮೇಶ್ವರ ಹಾಗೂ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಒಟ್ಟಾಗಿ ಹಲವು ಪ್ರದೇಶಗಳಲ್ಲಿ ಪ್ರಚಾರ ಮಾಡಿ ಮತಗಳನ್ನು ಗಟ್ಟಿ ಮಾಡಿಕೊಡಲು ಪ್ರಯತ್ನಿಸಿದರು. ಕೇವಲ ಎರಡೇ ದಿನ ಅವಕಾಶವಿದ್ದರಿಂದ ಅವರಿಗೆ ಹೆಚ್ಚಿನ ಮತದಾರರ ಸಂಪರ್ಕ ಸಾಧ್ಯವಾಗಲಿಲ್ಲ. ಮುಸ್ಲಿಮರೇ ಹೆಚ್ಚಾಗಿರುವ ದಡಮಘಟ್ಟ ಮುಂತಾದ ಮತಗಟ್ಟೆಗಳಲ್ಲಿ ಉತ್ತಮ ಮತದಾನವಾಗಿದ್ದು ಜೆಡಿಎಸ್‌ ಈ ಬಾರಿ ಹೆಚ್ಚಿನ ಲೀಡ್‌ ಕೊಡುವ ತವಕದಲ್ಲಿದೆ.

ಮೋದಿ ಹವಾ: ಜಾತಿ ರಾಜಕಾರಣ ಹೊರತು ಪಡಿಸಿ ಭದ್ರಾವತಿಯಲ್ಲಿ ದೊಡ್ಡ ಪ್ರಮಾಣದಲ್ಲಿರುವ ಯುವ ಪಡೆ ಮೋದಿ ಮೇಲೆ ಅಭಿಮಾನ ಹೊಂದಿದ್ದಾರೆ. ಅಮಿತ್‌ ಶಾ ರ್ಯಾಲಿ ಕೂಡ ಈ ಯುವಕರಲ್ಲಿ ಹೊಸ ಉತ್ಸಾಹ ಮೂಡಿಸಿತ್ತು.

Advertisement

ಒಳ ಹೊಡೆತ: ಒಕ್ಕಲಿಗರ ಮತಗಳನ್ನು ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿ ಒಕ್ಕಲಿಗ ಮುಖಂಡರನ್ನೇ ಪ್ರಚಾರಕ್ಕೆ ಬಳಸಿಕೊಂಡಿತ್ತು. ಈ ತಂತ್ರ ಫಲಿಸಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ. ಜೆಡಿಎಸ್‌ ಮುಖಂಡರು ಈ ಬಾರಿ ಒಳ ಹೊಡೆತ ಕೊಡಲೇಬೇಕೆಂಬ ದೃಷ್ಟಿಯಿಂದ ಕೊನೆ ಕ್ಷಣದವರೆಗೂ ಕಾರ್ಯತಂತ್ರದ ಗುಟ್ಟು ರಟ್ಟು ಮಾಡಿಲ್ಲ. ಲಿಂಗಾಯತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‌ಗೆ ಬರದ ಕಾರಣ ಸಂಗಮೇಶ್‌ರನ್ನು ಹೆಚ್ಚಾಗಿ ಪ್ರಚಾರಕ್ಕೆ ಬಳಸಿಕೊಳ್ಳದೇ, ಮಾಜಿ ಶಾಸಕ ಅಪ್ಪಾಜಿ ಗೌಡರನ್ನೇ ಪ್ರಚಾರಕ್ಕೆ ಬಳಸಿಕೊಂಡಿದೆ ಹೀಗಾಗಿ ಬಿಜೆಪಿಯ ತಂತ್ರಕ್ಕೆ ಪ್ರತಿತಿಂತ್ರ ಹೆಣೆದಿದೆ.

ಝಣ ಝಣ ಕಾಂಚಾಣ: ಜಾತಿ ಲೆಕ್ಕಾಚಾರದಲ್ಲಿ ಹಣ ಹಂಚಿಕೆಯಾಗಿರುವುದು ಈ ಬಾರಿಯ ವಿಶೇಷ. ಒಕ್ಕಲಿಗರ ಮತ ಸೆಳೆಯಲು ಎರಡೂ ಪಕ್ಷಗಳು ಹರಸಾಹಸ ಪಟ್ಟಿವೆ. ಮನೆಗೆ 500 ರೂ. ಕೊಟ್ಟರೆ, ಅದಕ್ಕೆ ಪ್ರತ್ಯುತ್ತರವಾಗಿ ಪ್ರತಿಯೊಬ್ಬರಿಗೆ 200 ರೂ. ಕೊಡಲಾಗಿದೆ ಎನ್ನಲಾಗುತ್ತಿದೆ. ಅಲ್ಲದೆ ಲಿಂಗಾಯತರಿಗೆ 2 ಸಾವಿರ ರೂ. ಕೊಟ್ಟಿರುವುದಕ್ಕೆ ಒಕ್ಕಲಿಗರಲ್ಲಿ ಅಸಮಾಧಾನ ಕೂಡ ಭುಗಿಲೆದ್ದಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

ಬೆಟ್ಟಿಂಗ್‌: ಯಾರಿಗೆ ಎಷ್ಟು ಮತ, ಯಾವ ಊರಲ್ಲಿ ಎಷ್ಟು ವೋಟ್, ಜಿಲ್ಲೆಯಲ್ಲಿ ಯಾರು ಗೆಲ್ತಾರೆ ಎಂಬ ಜತೆಗೆ, ದೇವೇಗೌಡರು, ಪ್ರಜ್ವಲ್ ಪರವಾಗಿಯೂ ಬೆಟ್ಟಿಂಗ್‌ ನಡೆದಿದೆ. ನಾಲ್ಕು ಜನ ಒಟ್ಟಾಗಿ ನಿಂತಿದ್ದರೆ ಅಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಆಗಿದೆ. ಹಣ, ಭೂಮಿಯನ್ನು ಬೆಟ್ಟಿಂಗ್‌ಗೆ ಬಳಸಿರುವ ಬಗ್ಗೆ ಅಲ್ಲಲ್ಲಿ ಮಾತು ಕೇಳಿ ಬಂದಿವೆ.

ಒಟ್ಟಾರೆ ಕ್ಷೇತ್ರದಲ್ಲಿ ರಾಜಕೀಯ ಮುಖಂಡರು ಗೆಲುವಿನ ಲೆಕ್ಕಾಚಾರದಲ್ಲಿದ್ದರೆ ಮತದಾರರು ಯಾರು ಗೆಲ್ಲಬಹುದು ಎಂಬ ಕುತೂಹಲದಲ್ಲಿದ್ದಾರೆ.

ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ 2,09,273 ಮತದಾರರಿದ್ದು ಏ.23ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ 72,653 ಮಹಿಳೆಯರು ಹಾಗೂ 73126 ಮಹಿಳಾ ಮತದಾರರು ಸೇರಿ 1,45,790 ಮಂದಿ ಮತ ಚಲಾಯಿಸಿದ್ದಾರೆ. ಶೇ.69.66 ಮತದಾನವಾಗಿದೆ. ತಾಲೂಕಿನಲ್ಲಿ ಒಟ್ಟು 253 ಬೂತ್‌ಗಳಿವೆ. ಗ್ರಾಮೀಣ ಭಾಗದ ಗಂಗೂರಿನ ಮತಗಟ್ಟೆ ಸಂಖ್ಯೆ 198ರಲ್ಲಿ 492 ಮತದಾರರಿದ್ದು 434 ಮಂದಿ ಮತ ಹಾಕಿದ್ದಾರೆ. ಇಲ್ಲಿ ಅತಿ ಹೆಚ್ಚು ಅಂದರೆ ಶೇ.88.21ರಷ್ಟ ಮತದಾನವಾಗಿದೆ. ಕಾಗದನಗರ ಮತಗಟ್ಟೆ ಸಂಖ್ಯೆ 167ರಲ್ಲಿ 782 ಮತದಾರರಿದ್ದು ಕೇವಲ 285 ಮಂದಿ ಮತ ಚಲಾಯಿಸಿದ್ದಾರೆ. ಶೇ.36.45 ಮತದಾನವಾಗಿದೆ. ಕಾಗದ ನಗರ ವ್ಯಾಪ್ತಿಯಲ್ಲಿ ಎಂಪಿಎಂ ಕಾರ್ಮಿಕ ಕುಟುಂಬಗಳು ವಾಸವಾಗಿದ್ದು ಕಾರ್ಖಾನೆ ಬಾಗಿಲು ಹಾಕಿದ ನಂತರ ಅನೇಕ ಕುಟುಂಬಗಳು ಗುಳೆ ಹೊರಟಿವೆ.

ಮೈತ್ರಿ ಅಭ್ಯರ್ಥಿಗಿಂತ ಬಿಜೆಪಿಗೆ ಕನಿಷ್ಠ 2 ಸಾವಿರ ಹೆಚ್ಚಿನ ಮತಗಳನ್ನು ಭದ್ರಾವತಿಯಲ್ಲಿ ಪಡೆಯುತ್ತೇವೆ. ಬಿಆರ್‌ಪಿ, ಕೂಡ್ಲಿಗೆರೆ, ಭದ್ರಾವತಿ ನಗರ ಪ್ರದೇಶದ ಹೊಸಮನೆ, ಕಾಗದ ನಗರ ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಉತ್ತಮ ಮತ ಸಿಕ್ಕಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬರುತ್ತಿರುವುದು ಇಂದಿಗೂ ಮುಂದುವರಿದಿದೆ. ಈ ಹಿಂದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೇರೆ, ಬೇರೆಯಾಗಿ ಸ್ಪರ್ಧೆ ಮಾಡುತ್ತಿದ್ದ ಕಾರಣ ಮತಗಳು ಹರಿದು ಹಂಚಿಹೋಗುತ್ತಿತ್ತು. ಹಾಗಾಗಿ ಬಿಜೆಪಿಗೆ ಸುಲಭವಾಗಿ ಹೆಚ್ಚಿನ ಮತಗಳು ಬರುತ್ತಿತ್ತು. ಈಗ ಇಬ್ಬರೂ ಒಂದಾಗಿರುವುದರಿಂದ ಮತ ಪ್ರಮಾಣ ಹೆಚ್ಚಾಗಿದೆ ಅನ್ನಿಸುತ್ತದೆ. ವಾಸ್ತವದಲ್ಲಿ ಬಿಜೆಪಿ ತನ್ನ ಮತಗಳನ್ನು ಕಳೆದುಕೊಂಡಿಲ್ಲ.
•ಮುಂಗೋಟೆ ರುದ್ರೇಶ್‌, ಬಿಜೆಪಿ ಗ್ರಾಮಾಂತರ ಅಧ್ಯಕ್ಷ

ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರು ಪಕ್ಷದ ಆದೇಶದಂತೆ ಜೆಡಿಎಸ್‌ ಅಭ್ಯರ್ಥಿ ಪರ ಮತಯಾಚನೆ ಮಾಡಿದ ಪರಿಣಾಮ ಈ ಬಾರಿ ಜೆಡಿಎಸ್‌ ಅಭ್ಯರ್ಥಿ ಕಳೆದ ಮಧ್ಯಂತರ ಲೋಕಸಭಾ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಗಳಿಸಿದ ಮತಗಳಿಗಿಂತ 20 ಸಾವಿರ ಅಧಿಕ ಮತಗಳನ್ನು ಪಡೆಯುತ್ತಾರೆ. ತಡಸ, ದೊಣಬಘಟ್ಟ ಸೇರಿದಂತೆ ಕ್ಷೇತ್ರದ ಎಲ್ಲೆಡೆ ಮಧು ಬಂಗಾರಪ್ಪನವರ ಪರವಾಗಿ ಹೆಚ್ಚಿನ ಮತಗಳು ಚಲಾವಣೆಯಾಗಿವೆ.
•ಟಿ. ಚಂದ್ರೇಗೌಡ,
ಕಾಂಗ್ರೆಸ್‌ ನಗರಾಧ್ಯಕ್ಷ

ದೋಸ್ತಿ ಪಕ್ಷಗಳ ನಾಯಕರು ಒಂದಾಗಿ ಪ್ರಚಾರಕ್ಕೆ ಇಳಿದ ಪರಿಣಾಮ ಹಾಗೂ ಡಿ.ಕೆ. ಶಿವಕುಮಾರ್‌ ಡಿ.ಕೆ. ಸುರೇಶ್‌, ಉಸ್ತುವಾರಿ ಸಚಿವ ತಮ್ಮಣ್ಣ ಅವರು ನಡೆಸಿದ ಚುನಾವಣಾ ಪ್ರಚಾರ ಎಲ್ಲದರ ಪರಿಣಾಮವಾಗಿ ಮಧು ಬಂಗಾರಪ್ಪ ಕ್ಷೇತ್ರದ ಎಲ್ಲೆಡೆ ಅಧಿಕ ಮತಗಳನ್ನು ಗಳಿಸಿದ್ದಾರೆ. ಉಪ ಚುನಾವಣೆಗಿಂತಲೂ 20ರಿಂದ 22 ಸಾವಿರ ಅಧಿಕ ಮತಗಳನ್ನು ಗಳಿಸಲಿದ್ದೇವೆ. ಮೇ 23ರ ಫಲಿತಾಂಶ ಇದನ್ನು ಪುಷ್ಟೀಕರಿಸಲಿದೆ.
•ಆರ್‌. ಕರುಣಾಮೂರ್ತಿ
ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ

•ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next